ಶಾಲೆಗಳನ್ನು ಜ್ಞಾನಕ್ಕೆ ತೆರೆಯುತ್ತಾ…

ಬುಧವಾರ, ಜೂನ್ 26, 2019
28 °C

ಶಾಲೆಗಳನ್ನು ಜ್ಞಾನಕ್ಕೆ ತೆರೆಯುತ್ತಾ…

Published:
Updated:
Prajavani

ರಾಜ್ಯದಲ್ಲಿ ಶಾಲೆಗಳು ಬಾಗಿಲು ತೆರೆದಿವೆ. ಹೊಸ ಶೈಕ್ಷಣಿಕ ವರ್ಷದ ಸಂಭ್ರಮ ಮೊದಲಾಗಿದೆ. ಮಕ್ಕಳು ರಜೆಯ ಮಜಾ ಅನುಭವಿಸುತ್ತಿರಬೇಕಾದರೆ, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎರಡು ಗಮನಾರ್ಹ ಸುದ್ದಿಗಳು ನಮ್ಮೆಲ್ಲರ ಗಮನ ಸೆಳೆದವು. ಅವುಗಳಲ್ಲಿ ಮೊದಲನೆಯದು, ಸಾರ್ವಜನಿಕ ಶಿಕ್ಷಣ ಇಲಾಖೆಯ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ನಡೆಸಿರುವ ‘ಗಣತಿ ಆಧಾರಿತ ರಾಜ್ಯ ಸಾಧನಾ ಸಮೀಕ್ಷೆ- 2018’ರ ವರದಿ. ಭಾಷಾ ವಿಷಯ, ಗಣಿತ, ಪರಿಸರ ವಿಜ್ಞಾನ ಮತ್ತು ಸಮಾಜ ವಿಜ್ಞಾನದ ವಿಷಯಗಳಿಗೆ ಸಂಬಂಧಿಸಿದಂತೆ ಅಕ್ಟೋಬರ್ ಅಂತ್ಯದಲ್ಲಿ, ಬಹುಆಯ್ಕೆ ಮಾದರಿಯಲ್ಲಿ ಸಮೀಕ್ಷೆ ನಡೆಸಲಾಯಿತು. 4ರಿಂದ 10ನೇ ತರಗತಿಯ  ಸುಮಾರು 29 ಲಕ್ಷ ವಿದ್ಯಾರ್ಥಿಗಳು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ವರದಿಯ ಪ್ರಕಾರ, ನಾವು ‘ಸುಲಭ’ ಎನ್ನಬಹುದಾದ ಹಲವು ಪ್ರಶ್ನೆಗಳಿಗೆ ಶೇ 60ರಷ್ಟು ವಿದ್ಯಾರ್ಥಿಗಳು ಸರಿ ಉತ್ತರ ನೀಡಲು ವಿಫಲರಾಗಿದ್ದಾರೆ.

ಈ ವರದಿಯು ಸುದ್ದಿಯಾದ ಸುಮಾರು ಒಂದು ತಿಂಗಳಿನಲ್ಲಿ ಎಲ್ಲೆಡೆ 10ನೇ ತರಗತಿಯ ಫಲಿತಾಂಶ ಹೊರಬಿದ್ದಿದೆ. ಮಧ್ಯಪ್ರದೇಶ ಸರ್ಕಾರವು ಫಲಿತಾಂಶದಲ್ಲಿ ಶೇ 30ರಷ್ಟು ವಿದ್ಯಾರ್ಥಿಗಳು ನಪಾಸಾಗಿದ್ದನ್ನು ಕಂಡು ಹೌಹಾರಿ ಶಿಕ್ಷಕರಿಗೇ ಪರೀಕ್ಷೆ ನಡೆಸಲು ಮುಂದಾಗಿದೆ. ಇದೇ 12ರಂದು ಅಲ್ಲಿನ 3,500 ಶಿಕ್ಷಕರು ಪರೀಕ್ಷೆ ಬರೆಯಲಿದ್ದಾರೆ. ಒಂದೊಮ್ಮೆ ಫೇಲಾದರೆ ಹಿಂಬಡ್ತಿ ಅಥವಾ ಒತ್ತಾಯಪೂರ್ವಕ ನಿವೃತ್ತಿ ಅವರಿಗೆ ಕಾದಿದೆ! ಶಿಕ್ಷಕರು ‘ನಮಗೆ ನಮ್ಮ ಜ್ಞಾನ ಅಪ್‍ಡೇಟ್ ಮಾಡಿಕೊಳ್ಳಲು ಸ್ವಲ್ಪ ಸಮಯ ಬೇಕಿತ್ತು. ನಮ್ಮ ಕೆಲಸದ ಸಮಯಕ್ಕಿಂತ ಹೆಚ್ಚು ಸಮಯವನ್ನು ಶಾಲೆಯಲ್ಲಿ ವ್ಯಯಿಸುತ್ತೇವೆ. ಈ ಬಾರಿಯಂತೂ ಎರಡೆರಡು ಚುನಾವಣೆಗಳ ಸಿದ್ಧತೆಯಲ್ಲಿ ಪಾಠ ಮಾಡಲು ಸಮಯವೇ ಇರಲಿಲ್ಲ’ ಎಂದು ದೂರಿದ್ದಾರೆ.

ಭಾರತದ ಶಿಕ್ಷಣ ಕ್ಷೇತ್ರದಲ್ಲಿ ಇಂಥ ಸಂದರ್ಭಗಳು ಹೊಸವೇನೂ ಅಲ್ಲ. 2008ರಲ್ಲಿ, ಅಂದರೆ 10 ವರ್ಷಗಳ ಹಿಂದೆ ನಡೆದ ಸಮೀಕ್ಷೆ, ಶೇ 45ರಷ್ಟು ಮಕ್ಕಳಿಗೆ ಗಣಿತದಲ್ಲಿ ವ್ಯವಕಲನ ಬಾರದೆಂದೂ, ಶೇ 33ರಷ್ಟು ಮಕ್ಕಳು ಒಂದನೇ ತರಗತಿಯ ಪಠ್ಯವನ್ನು ಓದಲಾರರೆಂದೂ ತೋರಿಸಿತ್ತು.

ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರವೂ, ಚುನಾವಣೆಯಲ್ಲಿ ಮತ ಹಾಕಿ ಆಡಳಿತಕ್ಕೆ ಕುಳ್ಳಿರಿಸುವ ಮತದಾರರಾದ ನಾವು ಇಬ್ಬರೂ ತಲೆಕೆಡಿಸಿಕೊಳ್ಳಲೇಬೇಕಾದ ಪರಿಸ್ಥಿತಿ ಇಂದು ಎದುರಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗಳನ್ನು ತರುವ ಕೆಲಸ ಸುಲಭವಲ್ಲ. ಶಿಕ್ಷಣ ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ಆಯಾ ಸರ್ಕಾರದ ವೈಯಕ್ತಿಕ ಅಭಿಪ್ರಾಯ, ಆದ್ಯತೆಯ ಮೇರೆಗೆ ಸಮಿತಿಗಳ ಆಯ್ಕೆ, ಪಠ್ಯಪುಸ್ತಕದಲ್ಲಿ ಆಡಳಿತಾರೂಢ ಪಕ್ಷದ ಆದರ್ಶ- ಆಯ್ಕೆಗಳಿಗೆ ಅನುಗುಣವಾಗಿ ಅಧ್ಯಾಯ ಮುಖ್ಯವಾಗಿಬಿಡುತ್ತದೆ. ಮಕ್ಕಳಿಗೆ ಕಲಿಯಲು, ಶಿಕ್ಷಕರಿಗೆ ಕಲಿಸಲು ಸುಲಭವಾಗುವ, ಬಹುಕಾಲ ಮೆದುಳಿನಲ್ಲಿ ನಿಲ್ಲುವ, ಜೀವನಕ್ಕೆ ಉಪಯುಕ್ತವೆನಿಸುವ ಸಂಗತಿಗಳನ್ನು ಪಠ್ಯದಲ್ಲಿ ತರುವ ಪ್ರಯತ್ನಗಳನ್ನು ಸರ್ಕಾರ ಪ್ರೋತ್ಸಾಹಿಸಬೇಕಿದೆ.

ಕಲಿಕೆಯ ಗುಣಮಟ್ಟ ಹೆಚ್ಚಿಸಲು ಪೂರಕ ಬೋಧನೆ, ಶಿಕ್ಷಕರಿಗೇ ಪರೀಕ್ಷೆ ಇವು ಶಿಕ್ಷಣದಲ್ಲಿ ಹೆಚ್ಚಿನ ಬದಲಾವಣೆ ತರಲಾರವು. ಶಿಕ್ಷಣ ಕ್ಷೇತ್ರದ ಸುಧಾರಣೆಗಳು ವಿಫಲವಾಗುವುದಕ್ಕೆ ಪ್ರಮುಖ ಕಾರಣ, ವ್ಯವಸ್ಥೆಯಲ್ಲಿ ಆಳವಾಗಿ ಬೇರೂರಿರುವ ರಚನಾತ್ಮಕ ಸಮಸ್ಯೆಗಳು. ಜೊತೆಗೆ, ಜ್ಞಾನಕ್ಕಿಂತ ಅಂಕಗಳಿಗೇ ಹೆಚ್ಚು ಒತ್ತು ನೀಡುವ ನಮ್ಮ ಧೋರಣೆ. ಕೆಲವು ದಿನಗಳ ಹಿಂದೆ ಸರ್ಕಾರ ಯೋಚಿಸಿದ ‘ತೆರೆದ ಪುಸ್ತಕ ಪರೀಕ್ಷೆ’ಯಾಗಲೀ ಅಥವಾ ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆ ಫೇಲಾದರೆ ಮುಂದೆ ಹೋಗುವಂತಿಲ್ಲ ಎಂಬ ಪದ್ಧತಿಯಾಗಲೀ ಮಕ್ಕಳು- ಶಿಕ್ಷಕರ ಮೇಲಿನ ಹೊರೆಯನ್ನು ಕಡಿಮೆ ಅಥವಾ ಹೆಚ್ಚು ಮಾಡಲಾರವು.

ಶಿಕ್ಷಣ ಕ್ಷೇತ್ರದ ವೈಫಲ್ಯಗಳಿಗೆ ಶಿಕ್ಷಕರನ್ನು ದೂರುವುದರಲ್ಲಿ ಅರ್ಥವಿಲ್ಲ. ವಿದ್ಯಾರ್ಥಿಗಳ ಜ್ಞಾನದ ಗುಣಮಟ್ಟ ಏರಿಸುವ ಗುರುತರ ಜವಾಬ್ದಾರಿಯ ಜೊತೆಗೇ ಆಡಳಿತ ನಿರ್ವಹಣೆ, ಮಧ್ಯಾಹ್ನದ ಊಟವನ್ನು ನಿಭಾಯಿಸಬೇಕಾದ ಜವಾಬ್ದಾರಿಗಳೂ ಶಿಕ್ಷಕರ ಹೆಗಲೇರುತ್ತವೆ. ಪರಿಣಾಮವಾಗಿ, ಬಾಯಿಪಾಠದ ಮೂಲಕ ಕಲಿಸುವ ವಿಧಾನಗಳಿಗೆ ಅವರು ಮೊರೆ ಹೋಗುತ್ತಾರೆ. ಅರ್ಥೈಸಿಕೊಳ್ಳದೇ, ಕೇವಲ ಬಾಯಿಪಾಠದಿಂದ ಕಲಿತ ಯಾವುದೂ ಬಹುಕಾಲ ನೆನಪಿನಲ್ಲಿ ಉಳಿಯಲಾರದು. ಹಾಗಾಗಿಯೇ ಬಹುಶಃ ಎಷ್ಟೇ ಕಲಿತಿದ್ದರೂ, ದಸರಾ ರಜೆ ಮುಗಿಸಿ ಬಂದ ತಕ್ಷಣ ನೀಡಿದ ಪ್ರಶ್ನೆಪತ್ರಿಕೆಯಲ್ಲಿ, ಬಹಳಷ್ಟು ಮಂದಿ ಸುಲಭದ ಪ್ರಶ್ನೆಗಳಿಗೂ ಉತ್ತರಿಸಲು ವಿಫಲರಾದದ್ದು.

ಶಿಕ್ಷಕರು- ವಿದ್ಯಾರ್ಥಿಗಳನ್ನು ದೂರುವ, ಅವರನ್ನು ಹೆದರಿಸುವ, 10ನೇ ತರಗತಿ-ಪಿಯುಸಿ ಅಂಕ ಗಳಿಕೆಯ ಮುಂದೆ ಬೇರೆ ಯಾವುದೂ ಬೇಡವೆನ್ನುವ ಸಮಾಜದ ಪ್ರವೃತ್ತಿ ಬದಲಾಗಲೇಬೇಕಿದೆ. 10ನೇ ತರಗತಿಯಲ್ಲಾಗಲೀ, ಪಿಯುಸಿಯಲ್ಲಾಗಲೀ, ಅಂಕ ಗಳಿಕೆಯು ಒಂದನೇ ತರಗತಿಯಿಂದಲೇ ಬೆಳೆಸಿಕೊಳ್ಳುವ ಓದಿನ ವಿಧಾನ, ಶಿಸ್ತು, ಅಪ್ಪ-ಅಮ್ಮಂದಿರ ಮೇಲ್ವಿಚಾರಣೆಯಿಂದ ಸುಲಭಸಾಧ್ಯ ಎಂಬುದನ್ನು ನಾವು ಮನಗಾಣಬೇಕಿದೆ. ನಮ್ಮ ರೂಢಿಗತ ಧೋರಣೆಯನ್ನು ಬದಲಿಸದೆ, ಜ್ಞಾನಕ್ಕೆ ಒತ್ತು ಕೊಡದೆ, ಅಂಕ ಗಳಿಕೆಯ ಬಗ್ಗೆ ಮಾತ್ರ ನಮ್ಮ ಗಮನ ಕೇಂದ್ರೀಕರಿಸಿದರೆ, 2019ರ ಸಮೀಕ್ಷೆಯ ಫಲಿತಾಂಶದಲ್ಲಿ ಕಲಿಕೆಯ ಗುಣಮಟ್ಟ ಇನ್ನಷ್ಟು ಕುಸಿಯುವುದು ನಿಶ್ಚಿತ ಎನಿಸುತ್ತದೆ!

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !