ಹಬ್ಬದ ಸಂಭ್ರಮಕ್ಕೆ ಕಳೆಗಟ್ಟಿದ ನಗರ

ಮಂಗಳವಾರ, ಜೂನ್ 18, 2019
24 °C
ರಂಜಾನ್ ಮಾಸಕ್ಕೆ ತೆರೆ, ನಗರದಲ್ಲಿ ಮನೆ ಮಾಡಿದ ‘ಈದ್‌ಉಲ್‌ ಫಿತ್ರ್‌’ ಆಚರಣೆಯ ಸಡಗರ

ಹಬ್ಬದ ಸಂಭ್ರಮಕ್ಕೆ ಕಳೆಗಟ್ಟಿದ ನಗರ

Published:
Updated:
Prajavani

ಚಿಕ್ಕಬಳ್ಳಾಪುರ: ಬಹು ಹಿಂದಿನಿಂದಲೂ ಕೋಮು ಸೌಹಾರ್ದದ ನೆಲೆವೀಡಾಗಿರುವ ಜಿಲ್ಲೆಯಲ್ಲಿ ಮತ್ತೊಂದು ರಂಜಾನ್ ಮಾಸಕ್ಕೆ ತೆರೆ ಬಿದ್ದಿದೆ. ನಗರದಲ್ಲಿ ಅಲಂಕೃತಗೊಂಡಿರುವ ಮಸೀದಿಗಳ ಮಿನಾರುಗಳಿಂದ ಹೊರಡುವ ನಮಾಜ್‌ನ ನಿನಾದ, ಮುಸ್ಲಿಮರ ಮನೆ ಮನಗಳ ಕುರಾನ್‌ ಪಠಣಗಳಿಂದ ‘ಈದ್‌ಉಲ್‌ ಫಿತ್ರ್‌’ ಕಳೆಗಟ್ಟಿದೆ.

ರಂಜಾನ್ ಬಂದಿದ್ದೇ ನಗರದ ಬಜಾರ್ ರಸ್ತೆ, ಕಾರ್ಖಾನೆ ಪೇಟೆ ರಸ್ತೆ ಸೇರಿದಂತೆ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಹಣ್ಣುಗಳು, ವಿವಿಧ ಖಾದ್ಯಗಳು, ವಿವಿಧ ಸುಂಗಂಧ ದ್ರವ್ಯಗಳು, ಹೊಸ ಬಟ್ಟೆ, ಬೂಟು ಖರೀದಿ ಬಲು ಜೋರಿನಿಂದ ನಡೆದಿದೆ. ಮಹಿಳೆಯರು ವಿಶೇಷವಾಗಿ ಕೈಗಳ ಮೇಲೆ ಮೆಹಂದಿ ಹಾಕಿಕೊಂಡು ಸಂಭ್ರಮಿಸುತ್ತಿದ್ದಾರೆ.

ರಂಜಾನ್‌ ಮಾಸದ ರೋಜಾ ಆಚರಣೆ (ಉಪವಾಸ) ಮಂಗಳವಾರ ಕೊನೆಗೊಂಡಿದ್ದು, ಜಮಾಅತೆ ಅಹ್ಲೆ ಇಸ್ಲಾಂ ನೇತೃತ್ವದಲ್ಲಿ ‘ಈದ್‌ಉಲ್‌ ಫಿತ್ರ್‌’ ಸಂಭ್ರಮಾಚರಣೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. ನಗರದಲ್ಲಿರುವ 16 ಮಸೀದಿಗಳು ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.

ಬೆಳಗಿನ ಜಾವ 3.30ಕ್ಕೆ ಎದ್ದು ಸೂರ್ಯೋದಯಕ್ಕೂ ಕಾಲು ಘಂಟೆಗೂ ಮೊದಲು ಮಸೀದಿಗಳಿಂದ ಕೇಳಿಬರುವ ‘ಬಾಂಗ್‌’ಗೂ (ಪ್ರಾರ್ಥನೆಯ ಕರೆ) ಮುನ್ನ ‘ಸುಹೂರ್’ (ಉಪಾಹಾರ) ಪೂರೈಸಿಕೊಂಡು ಸೂರ್ಯಾಸ್ತದವರೆಗೆ ಊಟ, ನೀರು ಮುಟ್ಟದೆ, ಉಗುಳು ಕೂಡ ನುಂಗದೆ ಸೂರ್ಯಾಸ್ತದ ಸಮಯಕ್ಕೆ ಉಪವಾಸ ಕೊನೆಗೊಳಿಸಿ ಊಟ ಸೇವಿಸುವ (ಇಫ್ತಾರ್) ಮೂಲಕ ಧಾರ್ಮಿಕ ಶ್ರದ್ಧೆ ಮೆರೆಯುವ ಪುಣ್ಯ ಮಾಸವಿದು.

ದಿನದಲ್ಲಿ ಹದಿನಾಲ್ಕುವರೆ ಗಂಟೆಗಳ ಉಪವಾಸ ವ್ರತದ ಜತೆಗೆ ನಿತ್ಯ ಐದು ಬಾರಿ ಕಡ್ಡಾಯವಾಗಿ ಪ್ರಾರ್ಥನೆ (ನಮಾಜ್) ಮಾಡುವ ಮೂಲಕ ಅಲ್ಲಾಹುವನ್ನು ನೆನೆದು ಮನುಷ್ಯ ದೌರ್ಬಲ್ಯಗಳನ್ನು ಮೆಟ್ಟಿ ದೇಹ ಮತ್ತು ಆತ್ಮವನ್ನು ಪವಿತ್ರಗೊಳಿಸುವ ಕಠಿಣ ವ್ರತಾಚರಣೆ ಇದೀಗ ಸಂಪನ್ನಗೊಂಡಿದೆ.

ಮಸೀದಿಗಳ ಮಿನಾರ್‌ಗಳಿಂದ ಹೊರಡುವ ಪ್ರಾರ್ಥನೆಯ ಕರೆಗೆ ದೊಡ್ಡವರು ಓಗೊಟ್ಟು ಹೋದರೆ ಅತ್ತ ಹೆಜ್ಜೆ ಹಾಕಿದರೆ, ಇತ್ತ ಮನೆಗಳಲ್ಲಿ ಮಹಿಳೆಯರು, ಮಕ್ಕಳು ಶುಚಿಯಾಗಿ, ಕುರಾನ್ ಪಠಣಕ್ಕೆ ಅಣಿಯಾಗುತ್ತಿದ್ದರು. ಕುರಾನ್ ಬಲ್ಲವರ ಮಾರ್ಗದರ್ಶನದಲ್ಲಿ ಕುಟುಂಬದವರೆಲ್ಲರೂ ಪವಿತ್ರ ಧರ್ಮಗ್ರಂಥ ಪಠಣ ಮಾಡುವ ಚಿತ್ರಣಗಳು ರಂಜಾನ್ ಮಾಸದ ಶ್ರದ್ಧೆಯನ್ನು ಪ್ರತಿಬಿಂಬಿಸುತ್ತಿದ್ದವು.

ನಗರದಲ್ಲಿ ವಾಣಿ ಚಿತ್ರಮಂದಿರ ಸಮೀಪದ ಹುಸೇನಿಯಾ ಮಸೀದಿಯಲ್ಲಿ ಕಳೆದೊಂದು ತಿಂಗಳಿಂದ ಸಾಮೂಹಿಕ ಇಫ್ತಾರ್ ಕೂಟ ಆಯೋಜಿಸಲಾಗಿತ್ತು. ನಗರಸಭೆ ಸಮೀಪದ ದೊಡ್ಡ ಮಸೀದಿಯಲ್ಲಿ 10 ದಿನಗಳ ಜಾಗರಣೆ ನಡೆಯಿತು. ರಂಜಾನ್ ಕೊನೆ ವಾರದಲ್ಲಿ, ಕುರಾನ್ ಮನುಕುಲಕ್ಕೆ ಪ್ರಕಟಗೊಂಡ ರಾತ್ರಿಯಾಗಿ ‘ಷಾಬ್-ಇ-ಖಾದರ್’ ಅನ್ನು ಆಚರಿಸಲಾಯಿತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !