ಬುಧವಾರ, ಅಕ್ಟೋಬರ್ 21, 2020
25 °C
ಜಲಮೂಲಗಳ ಉಳಿವಿನಲ್ಲಿ ಸಮುದಾಯ ಸಹಭಾಗಿತ್ವದ ಪಾತ್ರ ಮಹತ್ವದ್ದು

ಕೆರೆ ಸಂರಕ್ಷಣೆ ಹೊಣೆಯೂ ‘ಆಟ’ವಾಯಿತೇ?

ಟಿ.ಆರ್. ಅನಂತರಾಮು Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರಿನ ಕೆರೆಗಳೆಂದರೆ ಸಾಕು, ಕಳಕಳಿಗಿಂತ ಕಳವಳವೇ ಹೆಚ್ಚಾಗಿ ಕಾಡುತ್ತದೆ. 1988ರಲ್ಲಿ ರಾಜ್ಯದಲ್ಲಿ ಜನತಾ ಪಕ್ಷದ ಆಡಳಿತವಿದ್ದಾಗ, ಬೆಂಗಳೂರಿನ ಕೆರೆಗಳ ಪರಿಸ್ಥಿತಿಯ ಮೌಲ್ಯಮಾಪನವನ್ನು ತ್ವರಿತವಾಗಿ ಮಾಡಿಸುವ ಇರಾದೆ ವ್ಯಕ್ತವಾಗಿತ್ತು. ಸರ್ಕಾರವು ಬೆಂಗಳೂರು ಕಾರ್ಪೊರೇಷನ್‍ನಲ್ಲಿ ದಕ್ಷ ಆಡಳಿತಾಧಿಕಾರಿ ಎನಿಸಿದ್ದ ಎನ್. ಲಕ್ಷ್ಮಣರಾವ್ ಅವರ ಅಧ್ಯಕ್ಷತೆ
ಯಲ್ಲಿ ಒಂದು ಸಮಿತಿ ರಚಿಸಿತು, ವರದಿಗಾಗಿ ಕಾಯಿತು. ಸರ್ಕಾರಕ್ಕೆ ಕಳವಳ ಏಕೆಂದರೆ, ಬೆಂಗಳೂರಿನ ಅನೇಕ ಕೆರೆಗಳು ತಮ್ಮ ಮೂಲ ವಿಸ್ತೀರ್ಣವನ್ನು ಕಳೆದುಕೊಂಡು ಸಂಕುಚಿಸಿದ್ದವು. ವರದಿ ನೋಡಿದ ಮೇಲೆಯೇ, ಒತ್ತುವರಿ ಎಂಬ ಮಹಾ ವಂಚನೆಯು ಸರ್ಕಾರದ ಗಮನಕ್ಕೆ ಬಂದದ್ದು.

108 ಕೆರೆಗಳಿಗೆ ಸಂಬಂಧಿಸಿದಂತೆ 3,374 ಎಕರೆಗಳಲ್ಲಿ 500 ಎಕರೆಗಳು ಒತ್ತುವರಿಯಾಗಿತ್ತು. ಈ ವರದಿಯ ಹಿಂದೆಯೇ 1988ರ ಫೆಬ್ರುವರಿ 11ರಂದು ಸಣ್ಣ ನೀರಾವರಿ ಇಲಾಖೆ ಆದೇಶ ಹೊರಡಿಸಿ, ಆಗ ಲೆಕ್ಕಕ್ಕೆ ಸಿಕ್ಕಿದ್ದ ಬೆಂಗಳೂರಿನ 257 ಕೆರೆಗಳ ಪೈಕಿ 114 ಕೆರೆಗಳ ಉಸ್ತುವಾರಿಯನ್ನು ಅರಣ್ಯ ಇಲಾಖೆಗೆ ಒಪ್ಪಿಸಿತು. ವಾಸ್ತವವಾಗಿ ಸಣ್ಣ ನೀರಾವರಿ ಇಲಾಖೆಗೆ ಬೆಂಗಳೂರು ಕೆರೆ ನಿರ್ವಹಣೆ ಏಕೆ ಬಂತು? ಹೇಗೆ ಬಂತು ಎನ್ನುವುದು ಇನ್ನೂ ಸ್ಪಷ್ಟವಿಲ್ಲ. ಬಹುಶಃ ಬೆಂಗಳೂರಿನ ಕೆರೆಗಳು ಕುಡಿಯುವ ನೀರಿಗೆ ಆಸರೆಯಾಗಿದ್ದುದಲ್ಲದೆ ವ್ಯಾಪಕವಾಗಿ ಕೃಷಿಗೆ ಬಳಕೆಯಾಗುತ್ತಿದ್ದವು. ಒಂದು ಕೆರೆ ತುಂಬಿದರೆ ಇನ್ನೊಂದು ಕೆರೆ ಕೋಡಿಬಿದ್ದು ಮುಂದಿನ ಕೆರೆ ತುಂಬುವಂತೆ ನೀರಿನ ಕೊಂಡಿಗಳೇ ಇದ್ದವು. ಕೋರಮಂಗಲ-ಆಡುಗೋಡಿ ಮೂಲಕ ಹರಿಯುತ್ತಿದ್ದ ನೀರು ಚಳ್ಳಘಟ್ಟ ಕೆರೆಗೆ ಹರಿದು, ಅದು ಕೋಡಿಬಿದ್ದಾಗ ಯಮಲೂರು, ಬೆಳ್ಳಂದೂರು ಕೆರೆಗಳನ್ನು ತುಂಬುತ್ತಿತ್ತು. ಅವು ಕೃಷಿಯನ್ನು ಪೋಷಿಸಿದ್ದವು. ಹಾಗೆಯೇ ಹಿರಿಯ ಕೆಂಪೇಗೌಡ ನಿರ್ಮಿಸಿದ ಧರ್ಮಾಂಬುಧಿ ಕೆರೆ ಹಾಗೂ ಬ್ರಿಟಿಷರು ಕಂಟೋನ್ಮೆಂಟಿಗೆ ನೀರು ಕೊಡಲೆಂದು ಸೃಷ್ಟಿಸಿದ್ದ ಹಲಸೂರು ಕೆರೆ ಮೂಲತಃ ಕುಡಿಯುವ ನೀರಿನ ಆಕರಗಳೇ.

ಅರಣ್ಯ ಇಲಾಖೆಯ ಸುಪರ್ದಿನಿಂದ ಹೊರಗಿಟ್ಟ ಕೆರೆಗಳು ಏನಾಗಬೇಕು? ಅದರ ನಿಭಾವಣೆ ಹೇಗೆ? 1976ರಲ್ಲೇ ಸ್ಥಾಪನೆಯಾಗಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಬೆಂಗಳೂರು ಮಹಾನಗರ ಪಾಲಿಕೆಗೆ ಹೆಚ್ಚುವರಿ ಕೆರೆಗಳನ್ನು ವರ್ಗಾಯಿಸಲಾಗಿತ್ತು. ವಾಸ್ತವವಾಗಿ ಈಗಿನ ಲೆಕ್ಕದಲ್ಲಿ 167 ಕೆರೆಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸುಪರ್ದಿಯಲ್ಲಿವೆ. 1993ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ, ಬೆಂಗಳೂರಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುವುದು ಹೇಗೆ ಎಂಬ ಮೌಲ್ಯಮಾಪನ ಮಾಡಲು ಅದೇ ಲಕ್ಷ್ಮಣರಾವ್ ಸಮಿತಿಯನ್ನು ನೇಮಿಸಿದಾಗ ಬಂದ ವರದಿಯು ಸರ್ಕಾರಕ್ಕೆ ಮುಖಭಂಗ ಆಗುವಂತಿತ್ತು. ಕರ್ನಾಟಕ ಗೃಹ ನಿರ್ಮಾಣ ಮಂಡಳಿ, ನಗರಾಭಿವೃದ್ಧಿ ಇಲಾಖೆಯು ಹಿಂದೆ ಕೊಟ್ಟ ವರದಿಯನ್ನು ಮೂಲೆಗೆ ತಳ್ಳಿದ್ದವು. ಇನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕೆರೆ ಅಂಗಳವನ್ನೇ ಬಡಾವಣೆಯನ್ನಾಗಿ ಅಭಿವೃದ್ಧಿ ಮಾಡಿತ್ತು.

ಸಮುದಾಯಗಳ ಸಹಭಾಗಿತ್ವ ಇಲ್ಲದೆ ಕೆರೆಗಳು ಉಳಿಯುವುದಿಲ್ಲ ಎಂಬ ಖಡಕ್ ಎಚ್ಚರಿಕೆಯನ್ನು ಲಕ್ಷ್ಮಣರಾವ್ ಸಮಿತಿ ತನ್ನ ವರದಿಯಲ್ಲಿ ನೀಡಿತ್ತು. ಕೆರೆಗಳ ಒತ್ತುವರಿ, ಚರಂಡಿ ನೀರಿನ ತ್ಯಾಜ್ಯ, ಮನೆ ಒಡೆದ ಕಲ್ಲು-ಮಣ್ಣು, ಕೊನೆಗೆ ಹಾಸಿಗೆ-ದಿಂಬು ಇವೆಲ್ಲಕ್ಕೂ ಬೆಂಗಳೂರಿನ ಕೆರೆಗಳೇ ಮುಕ್ತಿ ತೋರಿಸುವಂಥ ದುಃಸ್ಥಿತಿ ಬಂತು. ಸರ್ಕಾರ ಚುರುಕಾಯಿತು, 2002ರಲ್ಲಿ ಸರೋವರ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿತು. ಕಾನೂನಾತ್ಮಕವಾಗಿ ರಚನೆಯಾಗಿದ್ದರೂ ಬೇಕಾದ ಅಧಿಕಾರವನ್ನೇ ನೀಡಲಿಲ್ಲ ವಿಧಾನಸೌಧದ ಭೂಪರು. ಈ ಮಿತಿಯ ನಡುವೆಯೂ ಅದು ಬೆಂಗಳೂರಿನ ಹೊರವಲಯವೂ ಸೇರಿದಂತೆ 2,789 ಕೆರೆಗಳ ಅಭಿವೃದ್ಧಿಗಾಗಿ ಪಣತೊಟ್ಟಿತು. ಇಂಡೊ-ನಾರ್ವೆ ಪರಿಸರ ಯೋಜನೆಯಡಿ ಹೆಬ್ಬಾಳ ಕೆರೆ, ಮಡಿವಾಳ ಕೆರೆ, ದೊಡ್ಡಬೊಮ್ಮಸಂದ್ರ ಕೆರೆಗಳನ್ನು ಅಭಿವೃದ್ಧಿಮಾಡಿತು. ಇದಕ್ಕೆ ನೆರವು ನೀಡಿದ್ದು ಅರಣ್ಯ ಇಲಾಖೆಯೇ. ಆದರೆ ಪ್ರಾಧಿಕಾರವು ನಗರದ ಕೆರೆಗಳನ್ನು ಖಾಸಗೀಕರಣ ಮಾಡಲು 2008ರಲ್ಲಿ ಮುಂದಾಯಿತು. ಪರಿಸರ ಬೆಂಬಲ ಗುಂಪು (ಇ.ಎಸ್.ಜಿ.) ಈ ನಿರ್ಣಯವನ್ನು ಪ್ರತಿಭಟಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿತು. ಹೈಕೋರ್ಟ್‌ ಇವರ ಪರವಾಗಿಯೇ ಇತ್ತು. ವಿಚಿತ್ರವೆಂದರೆ, ಪರಿಸರ ಬೆಂಬಲ ಗುಂಪಿನ ಮಾರ್ಗದರ್ಶನ ಕೇಳಿ ಬೆಂಗಳೂರಿನ ಕೆರೆಗಳನ್ನು ಪರಿಸರದ ದೃಷ್ಟಿಯಿಂದ ಯಾವ ಬಗೆಯಲ್ಲಿ ರಕ್ಷಿಸಿಕೊಳ್ಳಬೇಕೆಂಬ ಬಗ್ಗೆ ವರದಿ ಕೊಡಿ ಎಂದು ಕೇಳಿತ್ತು. ಸಮುದಾಯವನ್ನು ತೊಡಗಿಸಿಕೊಳ್ಳದೆ ಬೆಂಗಳೂರಿನ ಕೆರೆಗಳ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನು ಇಲ್ಲೂ ಎತ್ತಿ ತೋರಿಸಲಾಯಿತು. ಕೆರೆಗಳೆಂದರೆ ಜೀವವೈವಿಧ್ಯದ ದೃಷ್ಟಿಯಿಂದ ಅವು ಪುಟ್ಟ ಸಮುದ್ರಗಳೇ ಎನ್ನುವುದನ್ನು ಸೂಚಿಸಿತ್ತು.

ಸರೋವರ ಅಭಿವೃದ್ಧಿ ಪ್ರಾಧಿಕಾರವನ್ನು ಮೊದಲಿನಿಂದಲೂ ದುರ್ಬಲಗೊಳಿಸಿದ್ದ ಪ್ರಭುಗಳು ಅದಕ್ಕೆ ಬಲ ಕೊಡುವ ಬದಲು 2016ರಲ್ಲಿ ಪ್ರಾಧಿಕಾರವನ್ನೇ ರದ್ದು ಮಾಡಿದರು. ಆ ಸ್ಥಾನದಲ್ಲಿ ‘ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ’ ಎಂಬ ಹೊಸ ಸಂಸ್ಥೆಯನ್ನೇ ಸರ್ಕಾರ ಹುಟ್ಟುಹಾಕಿತು. ಅದರ ವ್ಯಾಪ್ತಿ ಬಲು ದೊಡ್ಡದು. ರಾಜ್ಯದ ಎಲ್ಲ ಮುನಿಸಿಪಾಲಿಟಿ, ಕಾರ್ಪೊರೇಷನ್ ಜೊತೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಾಲಕಾಲಕ್ಕೆ ಗುರುತಿಸುವ ಕೆರೆಗಳ ಅಭಿವೃದ್ಧಿಯನ್ನು ಈ ಸಂಸ್ಥೆಯ ಹೆಗಲಿಗೆ ಏರಿಸಿತು. ಇದು ನಿರೀಕ್ಷಿತ ಮಟ್ಟದಲ್ಲೇ ಕೆರೆಗಳ ಅಭಿವೃದ್ಧಿ-ಹೂಳು ತೆಗೆಯುವುದರಿಂದ ತೊಡಗಿ ವಾಯುವಿಹಾರಕ್ಕೆ ಬರುವವರಿಗೆ ಸೂಕ್ತ ಮಾರ್ಗ ರಚನೆ ಜೊತೆಗೆ ಮನರಂಜನೆಗೆ ಒತ್ತುಕೊಟ್ಟು ಸಾರ್ವಜನಿಕರ ಪ್ರೀತಿಯನ್ನೂ ಗಳಿಸಿತ್ತು. ಅನೇಕ ಪರಿಸರಮಿತ್ರ ಸಂಘಗಳು, ಕೆರೆಯ ಸಂರಕ್ಷಣೆಗೆ ಆಸಕ್ತಿ ತೋರಿದ ಸಾರ್ವಜನಿಕರು ಕೆರೆಯ ಅಭಿವೃದ್ಧಿಯಲ್ಲಿ ತೊಡಗಿಕೊಂಡರು. ಯಲಹಂಕದ ಬಳಿಯ ಹತ್ತು ಹೆಕ್ಟೇರ್ ವಿಸ್ತೀರ್ಣದ ಪುಟ್ಟೇನಹಳ್ಳಿ ಕೆರೆ ಮತ್ತು ಪಕ್ಷಿ ಸಂರಕ್ಷಣಾ ಸಂಘ ಮುತುವರ್ಜಿ ವಹಿಸಿದ್ದರಿಂದಲೇ ಈಗಲೂ ಅಲ್ಲಿಗೆ 49 ಪಕ್ಷಿ ಪ್ರಭೇದಗಳು ಬರುತ್ತಿವೆ. ಫ್ರೆಂಡ್ಸ್ ಆಫ್ ಲೇಕ್, ವೈಟ್‍ಫೀಲ್ಡ್ ರೈಸಿಂಗ್, ಸಾರಕ್ಕಿ ಲೇಕ್ ಗಾರ್ಡಿಯನ್ಸ್, ಬೆಳ್ಳಂದೂರು ಲೇಕ್ ಸಿಟಿಜನ್ಸ್, ಹಲಸೂರು ಲೇಕ್ ರೆಸಿಡೆಂಟ್ಸ್ ವೆಲ್‍ಫೇರ್‌ ಅಸೋಸಿಯೇಷನ್, ಜೆ.ಪಿ. ನಗರದ ಏಳನೇ ಹಂತದಲ್ಲಿರುವ 13 ಎಕರೆಯ ಪುಟ್ಟೇನಹಳ್ಳಿ ಕೆರೆ ಉಳಿ
ಸಲು ಮುಂದಾಗಿರುವ ಪುಟ್ಟೇನಹಳ್ಳಿ ನೇಬರ್‌ಹುಡ್‌ ಲೇಕ್ ಇಂಪ್ರೂವ್‌ಮೆಂಟ್‌ ಟ್ರಸ್ಟ್- ಇವೇ ಮುಂತಾದವಕ್ಕೆ ಕೆರೆಯೆಂದರೆ ನಮ್ಮ ಪಿತ್ರಾರ್ಜಿತ ಆಸ್ತಿ ಎನ್ನುವಷ್ಟು ಪ್ರೀತಿ ಹುಟ್ಟಿತು. ಈಗಲೂ ಇವೆಲ್ಲವೂ ಹಲವು ಕಾರ್ಯಕ್ರಮಗಳನ್ನು ಕೆರೆಯ ಅಂಚಿನಲ್ಲೇ ರೂಪಿಸಿಕೊಂಡು ಸಾರ್ವಜನಿಕರನ್ನು ಆಕರ್ಷಿಸುತ್ತಿವೆ.

ಬೆಂಗಳೂರಿನ ಕೆರೆಯ ಪ್ರಶ್ನೆ ಬಂದಾಗ, ಸರ್ಕಾರ ಕಾನೂನುಗಳನ್ನೇ ಬದಲಿಸುತ್ತಿದೆ. ಕಾಂಗ್ರೆಸ್ ನೇತೃತ್ವದ ಈ ಹಿಂದಿನ ಸರ್ಕಾರ ದೊಡ್ಡ ಎಡವಟ್ಟನ್ನೇ ಮಾಡಿತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಕೆರೆಗಳನ್ನು ಸಂರಕ್ಷಿ
ಸಲು ಬೇಕಾದ ಪರಿಣತರಿಲ್ಲ ಎಂಬ ಕಾರಣ ನೀಡಿ, ಬೆಂಗಳೂರಿನ ಎಲ್ಲ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯ ಹೊಣೆಯನ್ನು ಸಣ್ಣ ನೀರಾವರಿ ಯೋಜನೆಯಡಿ ತಂದು 2018ರ ಮಾರ್ಚ್ 1ರಂದು ಆದೇಶ ಹೊರಡಿಸಿತು. ಇದು ಸಮುದಾಯ ಸಹಭಾಗಿತ್ವಕ್ಕೆ ಅಡ್ಡಬರುತ್ತದೆ ಎಂದು ಅನೇಕ ಸಂಘ ಸಂಸ್ಥೆಗಳು ಅಸಮಾಧಾನ ವ್ಯಕ್ತಪಡಿಸಿದವು. ಈಗ ಸಮ್ಮಿಶ್ರ ಸರ್ಕಾರ ಇನ್ನೊಂದು ಯೋಜನೆಯನ್ನು ಪರಿಗಣಿಸುತ್ತಿದೆ. ಬೆಂಗಳೂರಿನ ಎಲ್ಲ ಕೆರೆಗಳನ್ನು ಮತ್ತೆ ಅರಣ್ಯ ಮತ್ತು ಪರಿಸರ ಇಲಾಖೆಗೆ ವರ್ಗಾಯಿಸುವತ್ತ ಒಲವು ತೋರುತ್ತಿದೆ. ಕೆರೆಗಳ ಅಂಗಳದಲ್ಲಿ ಫುಟ್‍ಬಾಲ್ ಆಡುವುದುಂಟು. ಆದರೆ ಕೆರೆಯ ಸಂರಕ್ಷಣಾ ಸಂಸ್ಥೆಗಳನ್ನೇ ಒದೆಯುವುದೆಂದರೆ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು