ದ್ವಿಭಾಷಾ ಸೂತ್ರದ ಆಗ್ರಹವೇ ಪರಿಹಾರ

ಗುರುವಾರ , ಜೂನ್ 27, 2019
25 °C
ನಮ್ಮ ಈಗಿನ ರಾಜಕೀಯ ಚೌಕಟ್ಟಿನಲ್ಲಿ ‘ರಾಷ್ಟ್ರೀಯ’ ಎನ್ನುವುದು ಸಾಂಸ್ಕೃತಿಕವಾಗಿ ‘ಹಿಂದೀಯ’ ಎಂಬ ಅರ್ಥ ಪಡೆದಿದೆ

ದ್ವಿಭಾಷಾ ಸೂತ್ರದ ಆಗ್ರಹವೇ ಪರಿಹಾರ

Published:
Updated:
Prajavani

ಕೇಂದ್ರ ಸರ್ಕಾರವು ದಕ್ಷಿಣ ಭಾರತದ, ವಿಶೇಷವಾಗಿ ತಮಿಳುನಾಡಿನ ಜನರ ವಿರೋಧಕ್ಕೆ ಮಣಿದು ತನ್ನ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡುವಿನಿಂದ ಹಿಂದಿ ಕಲಿಕೆಯನ್ನು ಕಡ್ಡಾಯಗೊಳಿಸುವ ವಿಧಿಯನ್ನು ಕೈಬಿಟ್ಟಿರುವುದಾಗಿ ಘೋಷಿಸಿದೆ. ಆದರೆ ಇದರಿಂದ ಹಿಂದಿ ಕಲಿಕೆಯ ಬಲೆಯಿಂದ ಹಿಂದಿಯೇತರ ಮಕ್ಕಳೇನೂ ಬಿಡುಗಡೆಗೊಂಡಿಲ್ಲ ಎಂಬುದನ್ನು ಬಹುಜನರು ಗಮನಿಸಿದಂತಿಲ್ಲ. ಏಕೆಂದರೆ, ಕರಡುವಿನಲ್ಲಿ ತ್ರಿಭಾಷಾ ಸೂತ್ರದ ಜಾರಿಯನ್ನೇನೂ ಕೈಬಿಟ್ಟಿಲ್ಲ. ಅಂದರೆ, ಒಂದನೇ ತರಗತಿಯಿಂದಲೇ ಹಿಂದಿಯೇತರ ಮಕ್ಕಳು ಮೂರು ಭಾಷೆಗಳನ್ನು ಕಲಿಯಲೇಬೇಕು. ಒಂದು ಪ್ರಾದೇಶಿಕ ಭಾಷೆ, ಮತ್ತೊಂದು ಅನಿವಾರ್ಯವಾದ ಇಂಗ್ಲಿಷ್, ನಂತರ ಅವರು ಕಲಿಕೆಯ ಮೂರನೆಯ ಭಾಷೆಯಾಗಿ, ಅವಕಾಶಗಳೆಲ್ಲವೂ ಪ್ರಾದೇಶಿಕ ಹಿತಗಳನ್ನು ನಿರ್ಲಕ್ಷಿಸಿ ಅಖಿಲ ಭಾರತ ಸ್ಪರ್ಧೆಗಳ ವ್ಯಾಪ್ತಿಗೆ ಸೇರುತ್ತಿರುವ ಇಂದಿನ ಸಂದರ್ಭದಲ್ಲಿ ಹಿಂದಿಯ ಹೊರತಾಗಿ ಮತ್ತಾವ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯ? ಆರನೇ ತರಗತಿ ಹಂತದಲ್ಲಿ ಒಂದು ಭಾಷೆಯನ್ನು ಬದಲಿಸಲೂ ಅವಕಾಶವೀಯುವ ಈ ನೀತಿ ಯಾವ ಭಾಷೆಗೆ ಕುತ್ತಾಗಲಿದೆ ಎಂಬುದು ಸ್ಪಷ್ಟ.

ಆಶ್ಚರ್ಯವೆಂದರೆ, ರಾಷ್ಟ್ರೀಯ ಕರಡು ನೀತಿಯಲ್ಲಿ ಪ್ರಾದೇಶಿಕ ಭಾಷೆಯ ಕಲಿಕೆಯ ಪ್ರಸ್ತಾಪ ಮಾಡುವಾಗ ಅದನ್ನು ಮಾತೃ–ರಾಜ್ಯ ಭಾಷೆ ಎಂದು ನಿರ್ದಿಷ್ಟವಾಗಿ ಹೇಳಿಲ್ಲ. ಏಕೆ? ಈ ಮಹತ್ವದ ಪ್ರಶ್ನೆಯನ್ನು ನಾವು ಕೇಳಿಕೊಂಡಾಗ, ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಎಂಬುದರಲ್ಲಿನ ‘ರಾಷ್ಟ್ರೀಯ’ ಎಂಬುದರ ರಾಜಕೀಯ ಅರ್ಥ ಸ್ಪಷ್ಟವಾಗತೊಡಗುತ್ತದೆ. ಹಿಂದಿಯನ್ನು ವಿರೋಧಿಸುತ್ತಿರುವವರು ಈ ‘ರಾಷ್ಟ್ರೀಯ’ ಎಂಬ ಪರಿಕಲ್ಪನೆಯ ಹಿಂದಿರುವ ಸಂಕುಚಿತ ಮತ್ತು ಆಕ್ರಮಣಕಾರಿ ರಾಜಕೀಯದತ್ತ ಗಮನಹರಿಸದೆ, ಹಿಂದಿಯ ಔಪಚಾರಿಕ ಕಲಿಕೆಯನ್ನಷ್ಟೇ ವಿರೋಧಿಸುತ್ತಿರುವುದೇ ಹಿಂದಿ ಹೇರಿಕೆ ಎನ್ನುವುದು ಪದೇ ಪದೇ ತಲೆ ಎತ್ತಿ ನೆಪ ಮಾತ್ರಕ್ಕೆ ಮಾಯವಾಗುತ್ತಿರುವುದಕ್ಕೆ ಕಾರಣವಾಗಿದೆ.

ಹಲವು ವರ್ಷಗಳಿಂದ ಹಲವು ನೆಲೆಗಳಲ್ಲಿ ಜಾರಿಯಲ್ಲಿರುವ ಇಂತಹ ‘ರಾಷ್ಟ್ರೀಯ’ತೆಯ ಕಾರಣದಿಂದಾಗಿ ನಮ್ಮ ಮಕ್ಕಳೆಲ್ಲ ‘ರಾಷ್ಟ್ರೀಯ ಮಾನ್ಯತೆ’ಯ ಹಂಬಲದಲ್ಲಿ ಈಗಾಗಲೇ ಅನೌಪಚಾರಿಕವಾಗಿ ಹಿಂದಿ ಭಾಷೆಗೆ ಶರಣಾಗಿದ್ದಾರೆ ಎಂಬುದನ್ನು ಇವರು ಗಮನಿಸಿದಂತಿಲ್ಲ. ಇದರ ಭಾಗವಾಗಿ ನಮ್ಮ ಮಕ್ಕಳು-ಮೊಮ್ಮಕ್ಕಳು ತಮ್ಮ ಮಾತೃ– ರಾಜ್ಯ ಭಾಷೆಗಳನ್ನು ‘ಕೆಲಸಕ್ಕೆ ಬಾರದ’ ಭಾಷೆಗಳೆಂದು ದೂರ ತಳ್ಳಿ ಇಂಗ್ಲಿಷ್-ಹಿಂದಿ, ಸಂಸ್ಕೃತ ಭಾಷೆಗಳ ಕಡೆ ಚಲಿಸುತ್ತಿರುವುದರ ದುರಂತವೂ ಇವರಿಗೆ ಅರ್ಥವಾದಂತಿಲ್ಲ.

ರಾಷ್ಟ್ರೀಯ ಎನ್ನುವುದಕ್ಕೆ ಆಧುನಿಕ ಭಾರತದಲ್ಲಿ ಪ್ರದಾನ ಮಾಡಲಾಗಿರುವ ಅರ್ಥವೇ ನಮ್ಮ ಮಕ್ಕಳು ನಮ್ಮ ಭಾಷೆಗಳ ಬಗ್ಗೆ ಅಸಡ್ಡೆ ತಾಳಿ ಅನ್ಯ ಭಾಷೆಗಳ ಕಡೆ ಹೊರಳಿ ನವ ‘ಘನತೆ’ಯನ್ನು ಪಡೆಯುವ ಪ್ರಯತ್ನ ಮಾಡುವಂತೆ ಪ್ರೇರೇಪಿಸಿರುವುದು. ಭಾರತದ ಭಾಷಾ, ಸಾಂಸ್ಕೃತಿಕ ಮತ್ತು ಸಂಪ್ರದಾಯಗಳ ಬಹುಳತೆ ಅದರ ಏಕತೆಗೆ ಅಪಾಯಕಾರಿಯಾದದ್ದು ಎಂಬ ಆತಂಕವನ್ನು ಆಧರಿಸಿದ ‘ರಾಷ್ಟ್ರೀಯತೆ’ಯೇ ಈ ದುರಂತಕ್ಕೆ ಕಾರಣವೆಂದು ನಾವು ಅರಿಯದೇ ಹೋಗಿದ್ದೇವೆ. ಈ ರಾಷ್ಟ್ರೀಯ ಭಾವನೆಯನ್ನು ಸಾಕಾರಗೊಳಿಸಲೇ ಕೇಂದ್ರವು ಹಿಂದಿಯನ್ನು ರಾಷ್ಟ್ರದ ಆಡಳಿತ ಭಾಷೆಯನ್ನಾಗಿ ಮಾಡುವ ಕ್ರಮಗಳಿಗೆ ಕೈ ಹಾಕುವಂತೆ ಮಾಡುತ್ತಿದೆ. ಇದೇನೂ ಯಾವುದೇ ಪಕ್ಷ ಅಥವಾ ಸರ್ಕಾರಕ್ಕೆ ಸೀಮಿತವಾಗಿಲ್ಲ. ಏಕೆಂದರೆ ಯಾವುದೇ ಪಕ್ಷ ಅಥವಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೂ ಅದು ಹಿಂದಿ ಪ್ರಾಧಾನ್ಯದ ಸರ್ಕಾರವೇ ಆಗಿರುವ ಹಾಗೆ, ನಮ್ಮ ರಾಷ್ಟ್ರ ರಾಜಕಾರಣ ಸಂಯೋಜಿಸಲ್ಪಟ್ಟಿದೆ. ಅದು ಸಂವಿಧಾನ ಹೇಳುವ ಒಕ್ಕೂಟವೆಂಬ ಸಮನ್ವಯ ತತ್ವವನ್ನು ಧಿಕ್ಕರಿಸುವಷ್ಟು, ವಾಸ್ತವ ನೆಲೆಯಲ್ಲಿ ಬಲಿಷ್ಠವಾಗಿದೆ.

ಹಿಂದಿ ಭಾಷೆಯ ಕುಟುಂಬಕ್ಕೆ ಸೇರಿದ ರಾಜ್ಯಗಳ ಸಂಸತ್ ಸದಸ್ಯರ ಸಂಖ್ಯೆ ಯಾವಾಗಲೂ ಹಿಂದಿಯೇತರ (ಮುಖ್ಯವಾಗಿ ದ್ರಾವಿಡ ಮೂಲ) ಭಾಷೆಗಳ ರಾಜ್ಯಗಳ ಸಂಸತ್ ಸದಸ್ಯರಿಗಿಂತ ಹೆಚ್ಚೂ ಕಡಿಮೆ ನಾಲ್ಕು ಪಟ್ಟು ಹೆಚ್ಚಿರುವುದರಿಂದ ಮತ್ತು ಪ್ರಜಾಪ್ರಭುತ್ವ ಎಂಬುದು ತನ್ನೆಲ್ಲ ಬಹುಮುಖ ವಿವೇಕವನ್ನು ಕಳೆದುಕೊಂಡು ಈಗ ಬಹುಮತದ ಲೆಕ್ಕಾಚಾರವನ್ನಷ್ಟೇ ಆಧರಿಸಿದ ಅಧಿಕಾರ ಚಲಾವಣೆಯ ಆಟವಾಗಿರುವುದರಿಂದ, ನಮ್ಮ ರಾಜಕೀಯ ಚೌಕಟ್ಟಿನಲ್ಲಿ ‘ರಾಷ್ಟ್ರೀಯ’ ಎನ್ನುವುದು ಸಾಂಸ್ಕೃತಿಕವಾಗಿ ‘ಹಿಂದೀಯ’ ಎಂಬ ಅರ್ಥ ಪಡೆದಿರುವುದು ಸಹಜವೇ ಆಗಿದೆ.

ಇದು, ಅಲ್ಪಸಂಖ್ಯಾತ ಹಿಂದಿಯೇತರರನ್ನು ಹಿಂದೀಕರಣದ ಮೂಲಕ ರಾಷ್ಟ್ರೀಕರಿಸುವ ಹಲವು ಪ್ರಯತ್ನಗಳಿಗೆ ಕಾರಣವಾಗಿದೆ. ಹಾಗಾಗಿಯೇ ಈಗ ಕೇಂದ್ರದ ಎಲ್ಲ ನೇಮಕಾತಿಗಳೂ, ಶಿಕ್ಷಣ ಪ್ರವೇಶಾತಿ ಪರೀಕ್ಷೆಗಳೂ ಪ್ರಾದೇಶಿಕ ಪ್ರಾತಿನಿಧ್ಯದ ಪ್ರಶ್ನೆಯನ್ನು ನಿರ್ಲಕ್ಷಿಸುತ್ತಾ ಅಖಿಲ ಭಾರತವಾಗುತ್ತಿವೆ. ಇವೆಲ್ಲದರ ಸಂಚಿತ ಪರಿಣಾಮವಾಗಿ, ನಮ್ಮ ರಾಜ್ಯಗಳಲ್ಲಿನ ಶಾಲೆಗಳಲ್ಲಿ ರಾಜ್ಯ ಭಾಷೆಗಳಿಗೆ ಮಾನ್ಯತೆಯೇ ಇಲ್ಲದ ಕೇಂದ್ರ ಪಠ್ಯಕ್ರಮಗಳ ಶಾಲೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇಂತಹ ಸಗಟು ಅಖಿಲ ಭಾರತೀಯತೆಯ ಇತ್ತೀಚಿನ ಆವೃತ್ತಿಯಾಗಷ್ಟೇ ಈ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಟವಾಗಿದೆ.

ಹಾಗಾಗಿ ನಮ್ಮ ಸದ್ಯದ ಹಿಂದಿ ವಿರೋಧವು ನಾವು ರೋಗದ ಚಿಕಿತ್ಸೆ ಕಡೆ ಗಮನ ಹರಿಸದೆ ರೋಗ ಲಕ್ಷಣವನ್ನಷ್ಟೇ ನಿವಾರಿಸಿಕೊಳ್ಳ ಹೊರಟಿರುವ ಸಮೀಪದೃಷ್ಟಿ ದೋಷದ ಪ್ರತೀಕವಾಗಿದೆ. ಹೆಚ್ಚೆಂದರೆ, ಹಿಂದಿಗೆ ಅನೌಪಚಾರಿಕ ಕಲಿಕೆಯ ಅವಕಾಶ ಇರಬಹುದಾದ ದ್ವಿಭಾಷಾ ನೀತಿಗಾಗಿ ಆಗ್ರಹಿಸುವುದೊಂದೇ ಇದಕ್ಕೆಲ್ಲ ಪರಿಹಾರ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !