ಅಯೋಮಯ!

ಗುರುವಾರ , ಜೂನ್ 27, 2019
23 °C

ಅಯೋಮಯ!

Published:
Updated:
Prajavani

ಬೇಸಿಗೆ ರಜೆ ನಂತರ, ಹಳ್ಳಿಯಲ್ಲಿ ಪುನರಾರಂಭಗೊಂಡ ಪ್ರೈಮರಿ ಶಾಲೆ ಸಿಂಗಾರಗೊಂಡಿತ್ತು. ಹೆಡ್ಮಾಸ್ಟರು ದಾಖಲಾತಿ ಅಭಿಯಾನಕ್ಕಾಗಿ ಪೋಷಕರನ್ನೂ ಕರೆದಿದ್ದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹರದೇಗೌಡರು ಬಂದಿದ್ದರು. ರಜೆಯಲ್ಲಿ ಏನೇನು ಮಾಡಿದಿರೆಂದು ಕ್ಲಾಸ್ ಮಾಸ್ಟರ್ ಕೇಳಿದಾಗ, ಮಕ್ಕಳು ಅನುಭವ ಹಂಚಿಕೊಂಡರು.

ಸಿದ್ಧೇಶಿ ‘ಸೈಕಲ್ ಕಲಿತೆ’ ಎಂದರೆ, ರಾಹುಲ್‍ ರಾಜ್ ‘ಅಮ್ಮನ ತೌರು ಮನೆಗೆ ಹೋಗಿದ್ದೆ’ ಎಂದ. ಶುಭಾ ‘ಕಾಲುವೆಯಲ್ಲಿ ಈಜಾಡಿದೆ’ ಎಂದಳು. ಶುಭಾ ಮೇಲೆ ಸಿದ್ಧೇಶಿ ದೂರು ಹೇಳಿದ- ‘ನಂಗೆ ಇವಳು ಬಳೆ ತೊಟ್ಕೋ ಅನ್ನಬೌದೇ ಸಾ?’

‘ಹೌದೇನಮ್ಮ?’- ಕೇಳಿದರು ಹೆಡ್ಮಾಸ್ಟರ್.

‘ಕ್ಯಾಪ್ಟನ್ ಆಗಿದ್ರೂ, ಕಬಡ್ಡಿ ಆಟಗಾರರು ನನ್ನ ಮಾತು ಕೇಳೋಲ್ಲಾ ಅಂತಾನೆ!’

‘ನಿನ್ನ ದೋಸ್ತ್ ಹಂಗಂದನೇನೋ, ಇಂದು ಶೇಖರಾ?’

‘ಮಗೂನೂ ಅಳಿಸಬೇಕು, ತೊಟ್ಟಿಲೂ ತೂಗಬೇಕು ಅಂದ. ನಂಗೆ ಅರ್ಥ ಆಗ್ಲಿಲ್ಲ’.

ಸುದರ್ಶನನ ಕಂಪ್ಲೇಂಟು ಕುಸುಮಾಳ ಮೇಲೆ- ‘ಸಾರ್, ಗೌಡರ ಮಕ್ಕಳು ಕುಸುಮಾಗೆ ಮಾನಿಟರ್ ಎಲೆಕ್ಷನ್‌ಗೆ ನಿಂತ್ಕೋಬೇಡ ಅಂದ್ರು. ಈಕೆ ನಿಂತ್ಕೋತೀನಿ ಅಂದ್ಲು. ಅದಕ್ಕೆ ಅವಳಿಗೆ ಕೆಟ್ಟದಾಗಿ ಬೈಯ್ಯೋದಾ? ನಿಮ್ಗೆ ಹೇಳೋಣಾಂದ್ರೆ, ಬೇಡ ಸಮಾಧಾನ ಮಾಡ್ಕೊ, ತಾಳಿದವನು ಬಾಳಿಯಾನು ಅಂತಾಳೆ!’

ಅಷ್ಟರಲ್ಲಿ ವೇಣುಕುಮಾರ್, ರಾಹುಲ್‍ ರಾಜ್‍ನನ್ನು ಕರೆತಂದ. ‘ಸಾರ್ ಇವನಿಗೆ ಬುದ್ಧಿ ಹೇಳಿ. ಕೊಕ್ಕೊದಲ್ಲಿ ಸೋತಿದ್ದಕ್ಕೆ ಕ್ಯಾಪ್ಟನ್‍ಷಿಪ್‍ಗೆ ರಾಜೀನಾಮೆ ಕೊಡ್ತೀನಿ ಅಂತಿದಾನೆ!’

ಮಧ್ಯೆ ಬಾಯಿ ಹಾಕಿದ ಗುರುಪರಮೇಶಿ- ‘ಸಾರ್, ನೀವು ಕಷ್ಟಪಟ್ಟು ಓದಿದ್ರೆ ಮಾತ್ರ ಪಾಸಾಗೋದು ಅಂತ ಹೇಳಿದ್ರಿ. ಈ ವೇದಣ್ಣ ನೋಡಿದ್ರೆ, ಮನೇಲಿ ಹವನ ಮಾಡಿ ದೇವ್ರಿಗೆ ಹರಕೆ ಕಟ್ಟಿಕೊಂಡಿದ್ದಕ್ಕೇ ಪಾಸಾದದ್ದು ಅಂತಾನೆ!’

ಹೆಡ್ಮಾಸ್ಟರ್‌ಗೆ ಅಯೋಮಯ ಎನಿಸಿ ತಲೆತಿರುಗತೊಡಗಿತು. ಶಾಲೆ ಲೆಟ್‍ಆಫ್ ಮಾಡಿ ಪೋಷಕರಿಗೆ, ‘ಮನೇಲಿ ಟೀವಿ ತೆಗೆಸಿರಿ; ಮಕ್ಕಳ ಕೈಯಿಂದ ಮೊಬೈಲ್ ಕಿತ್ಕೊಳ್ಳಿ. ಈಗ ಹೋಗ್ಬನ್ನಿ, ನಮಸ್ಕಾರ’ ಎಂದು ಎರಡೂ ಕೈ ಮೇಲೆತ್ತಿ ಮುಗಿದರು!

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !