ಭಾರತ್ ಸಿನಿಮಾ ವಿಮರ್ಶೆ: ದೊಡ್ಡ ಭಿತ್ತಿ, ಭಾಗಶಃ ಪರಿಣಾಮೋತ್ಪತ್ತಿ

ಬುಧವಾರ, ಜೂನ್ 26, 2019
28 °C

ಭಾರತ್ ಸಿನಿಮಾ ವಿಮರ್ಶೆ: ದೊಡ್ಡ ಭಿತ್ತಿ, ಭಾಗಶಃ ಪರಿಣಾಮೋತ್ಪತ್ತಿ

Published:
Updated:
Prajavani

ಚಿತ್ರ: ಭಾರತ್ (ಹಿಂದಿ) 
ನಿರ್ಮಾಣ: ಅತುಲ್ ಅಗ್ನಿಹೋತ್ರಿ, ಅಲ್ವಿರಾ ಖಾನ್ ಅಗ್ನಿಹೋತ್ರಿ, ಭೂಷಣ್ ಕುಮಾರ್, ಕೃಷ್ಣ್ ಕುಮಾರ್, ನಿಖಿಲ್ ನಮಿತ್
ನಿರ್ದೇಶನ: ಅಲಿ ಅಬ್ಬಾಸ್ ಜಫರ್
ತಾರಾಗಣ: ಸಲ್ಮಾನ್ ಖಾನ್, ಸುನಿಲ್ ಗ್ರೋವರ್, ಕತ್ರಿನಾ ಕೈಫ್, ಸೋನಾಲಿ ಕುಲಕರ್ಣಿ, ದಿಶಾ ಪಟಾನಿ, ತಬು, ಜಾಕಿ ಶ್ರಾಫ್.

ಅಪ್ಪ ತೊಡಿಸಿದ ಹೊಣೆಗಾರಿಕೆಯ ಗಡಿಯಾರ ನಾಯಕನ ಕೈಯಲ್ಲಿ. ಇನ್ನೇನು ಎದೆಬಡಿತ ಜೋರಾಗಿ, ಕೊನೆಗೆ ನಿಂತೇಹೋಯಿತು ಎಂದುಕೊಳ್ಳುವಾಗ ಅದರ ಸೆಕೆಂಡಿನ ಮುಳ್ಳು ಚಲಿಸತೊಡಗುತ್ತದೆ. ತೈಲ ತೆಗೆಯುವ ಸ್ಥಳದಲ್ಲಿ ಸುರಂಗ ಕೊರೆಯುವಾಗ ಆದ ಸ್ಫೋಟದಲ್ಲಿ ಸಿಲುಕಿದ ನಾಯಕನ ಕಣ್ಮುಂದೆ ತನ್ನ ಬದುಕಿನ ಕಾಡುವ ವ್ಯಕ್ತಿಗಳ ಚಿತ್ರಿಕೆಗಳು. ಅಪ್ಪನ ನೆಚ್ಚಿಕೆಯ ದನಿಯಿಂದ ಹದಗೊಳ್ಳುವ ಎದೆಬಡಿತ ಆತನನ್ನು ಬದುಕಿಸುತ್ತದೆ. ತನ್ನ ಸಹೋದ್ಯೋಗಿ ಮಿತ್ರರನ್ನೂ ಬದುಕಿಸಿಕೊಂಡು ಸುರಂಗದಡಿಯಿಂದ ಅವನು ಮೇಲೆ ಬರುತ್ತಾನೆ.

‘ಭಾರತ್’ ಸಿನಿಮಾಗೆ ದಕ್ಷಿಣ ಕೊರಿಯಾದ ‘ಓಡ್‌ ಟು ಮೈ ಫಾದರ್’ ಚಿತ್ರಋಣವಿದೆ. ಆ ಆತ್ಮವನ್ನು ತಂದು ಅಲಿ ಅಬ್ಬಾಸ್ ಜಫರ್ ಭಾರತದ ಜಾಯಮಾನಕ್ಕೆ ಒಗ್ಗಿಸಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ದೇಶ ವಿಭಜನೆ ಆಯಿತಲ್ಲ; ಆಗ ಪಾಕಿಸ್ತಾನದಿಂದ ಹಿಂದೂ ಕುಟುಂಬವೊಂದು ದೆಹಲಿಗೆ ದಂಗೆಕೋರರ ದಾಳಿಯಿಂದ ತಪ್ಪಿಸಿಕೊಂಡು ರೈಲು ಹತ್ತಲು ಬರುತ್ತದೆ. ತಾಯಿ ಹಾಗೂ ಪುಟ್ಟ ತಮ್ಮ–ತಂಗಿಯರ ಜತೆಗೆ ರೈಲಿನ ಚಾವಣಿ ಹತ್ತುವಲ್ಲಿ ಯಶಸ್ವಿಯಾಗುತ್ತಾನೆ ದೊಡ್ಡ ಮಗ. ಈ ಯತ್ನದಲ್ಲಿ ತನ್ನ ಬೆನ್ನಿಗೆ ಕಟ್ಟಿಕೊಂಡ ತಂಗಿ ಕೆಳಗೆ ಉದುರಿ ಬೀಳುವುದನ್ನು ಕಂಡು ಕಂಪಿಸುತ್ತಾನೆ. ಮಗಳನ್ನು ಹುಡುಕಿ ತರಲೆಂದು ರೈಲಿನ ಮೇಲಿಂದ ಇಳಿದುಹೋಗುವ ಅಪ್ಪ, ನಾಯಕನ ಕೈಗೆ ಜವಾಬ್ದಾರಿಯ ಗಡಿಯಾರ ತೊಡಿಸುತ್ತಾನೆ. ಆಮೇಲೆ ಆ ಅಪ್ಪ ಸಿಗುವುದೇ ಇಲ್ಲ. ದೇಶದ ಹೆಸರನ್ನೇ ಮಗನಿಗೆ ಇಟ್ಟು, ಕುಟುಂಬದವರನ್ನೆಲ್ಲ ಒಟ್ಟಾಗಿ ನೋಡಿಕೊಳ್ಳುವಂತೆ ಆಣತಿ ಇತ್ತು, ಆತ ಕಣ್ಮರೆಯಾಗುತ್ತಾನೆ.

ತಂದೆ ಹೊರಿಸಿದ ಜವಾಬ್ದಾರಿಯನ್ನೇ ನಾಯಕ ಏಳು ದಶಕಗಳವರೆಗೆ (1947ರಿಂದ 2010ರ ಅವಧಿಯ ಕಥಾಭಿತ್ತಿಯ ಚಿತ್ರವಿದು)ಉಸಿರಾಡುತ್ತಾನೆ. ತುತ್ತಿನಚೀಲ ತುಂಬಿಸಿಕೊಳ್ಳಲು ಪ್ರಾಮಾಣಿಕವಾಗಿ ಹೋರಾಡುತ್ತಾನೆ. ಸರ್ಕಸ್‌ನಲ್ಲಿ ಅಪಾಯಕಾರಿ ರೀತಿಯಲ್ಲಿ ಅವನು ಬೈಕ್ ಓಡಿಸಬಲ್ಲ. ತೈಲ ಗಣಿಗಾರಿಕೆಯಲ್ಲಿ ಜೀವ ಬಾಯಿಗೆ ತರುವ ಕೆಲಸ ಮಾಡಬಲ್ಲ. ಹಡಗಿನಲ್ಲಿ ಕೆಲಸ ಮಾಡುತ್ತಲೇ ದರೋಡೆಕೋರರ ಮನಸ್ಸನ್ನೂ ಹಿಂದಿ ಸಿನಿಮಾದ ಝಲಕ್‌ಗಳಿಂದ ಪರಿವರ್ತನೆ ಮಾಡಬಲ್ಲ. ಎಲ್ಲಕ್ಕೂ ಮಿಗಿಲಾಗಿ ಮೆಚ್ಚಿ ಬಂದ ಸುರಸುಂದರಿಯನ್ನು ಮದುವೆ ಆಗದೆಯೂ ಪ್ರೀತಿಸಬಲ್ಲ. ಹೀಗೆ ಕುಟುಂಬವನ್ನು ದೇಶಿಗರಿಗೆ ಬೆಸೆದು ತೋರಿಸುವ ದೊಡ್ಡ ಕ್ಯಾನ್ವಾಸಿನ ಸಿನಿಮಾ ಇದು. ಆದರೆ, ಪರಿಣಾಮ ಅಸ್ಥಿರ.

ಸಲ್ಮಾನ್ ಈ ಸಲ ಹುರಿಗಟ್ಟಿದ ತಮ್ಮ ದೇಹವನ್ನು ದಾಳಿ ಇಡಲು ಬರುವವರ ಪುಡಿಗಟ್ಟಲು ಬಳಸಿಲ್ಲ. ಬದಲಿಗೆ ‘ಕಾಮಿಕ್’ ಆಗಿದ್ದಾರೆ. ಇನ್ನೇನು ಹೊಡೆಯುವರೇನೋ ಅಂದುಕೊಳ್ಳುವಾಗ, ಬಾಲಿಶವಾದ ಭಾಷಣ ಮಾಡಿಯೇ ಪರಿಸ್ಥಿತಿಯನ್ನು ತಿಳಿಗೊಳಿಸಿಬಿಡುತ್ತಾರೆ. ಉದ್ದುದ್ದ ಡೈಲಾಗು ಹೊಡೆದು ರಾಷ್ಟ್ರಗೀತೆ ಹಾಡಿ, ಕುಳಿತ ಪ್ರೇಕ್ಷಕರೂ ಎದ್ದುನಿಲ್ಲುವಂತೆ ಮಾಡುತ್ತಾರೆ. ಭಾವಗೆರೆಗಳ ವಿಷಯದಲ್ಲಿ ಜುಗ್ಗರಾಗಿರುವ ಅವರನ್ನೂ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸುವಂತೆ ಅಭಿನಯಿಸಲು ನಿರ್ದೇಶಕರು ಪುಸಲಾಯಿಸಿದ್ದಾರೆ.

‘ಸುಲ್ತಾನ್’, ‘ಟೈಗರ್ ಜಿಂದಾ ಹೈ’ ಹಿಂದಿ ಸಿನಿಮಾಗಳ ಚಿತ್ರಿಕೆಗಳಲ್ಲಿ ಇದ್ದ ಶಿಲ್ಪ ಈ ಸಿನಿಮಾದಲ್ಲಿ ನಾಪತ್ತೆಯಾಗಿದೆ. ದೇಶ ವಿಭಜನೆಯಾದಾಗ ಬೇರೆ ಬೇರೆಯಾಗಿದ್ದ ಹೃದಯಗಳನ್ನು ಮತ್ತೆ ಬೆಸೆಯುವ ಯತ್ನದ ಟಿ.ವಿ ವಾಹಿನಿಯ ಕಾರ್ಯಕ್ರಮ ಸಿನಿಮಾದ ಹೈಲೈಟ್. ಆದರೆ, ಅದನ್ನೂ ಹೆಚ್ಚು ಭಾವನಾತ್ಮಕವಾಗಿ ತೋರಲು ನಿರ್ದೇಶಕರಿಗೆ ಸಾಧ್ಯವಾಗಿಲ್ಲ.

ಜೂಲಿಯಸ್–ಪ್ಯಾಕಿಯನ್ ಹಿನ್ನೆಲೆ ಸಂಗೀತ ದೃಶ್ಯಗಳನ್ನು ಮೇಲೆತ್ತಿದೆ. ಮಾರ್ಸಿನ್‌ ಲಾಸ್ಕವಿಕ್‌ ಸಿನಿಮಾಟೊಗ್ರಫಿ ಕಾಣ್ಕೆ ಗಮನಾರ್ಹ. ಕತ್ರಿನಾ ಕೈಫ್ ಅಭಿನಯಿಸಿದ್ದಾರೆ ಎನ್ನುವುದಕ್ಕೆ ಸಿನಿಮಾದಲ್ಲಿ ಕೆಲವು ಉದಾಹರಣೆಗಳು ಸಿಗುತ್ತವೆ. ಹಿಂದಿನಷ್ಟು ಗ್ಲಾಮರ್‌ ಆಗಿ ಕಾಣದೆಯೂ ಅವರಿಲ್ಲಿ ಪಾತ್ರದ ತೂಕಕ್ಕೆ ನ್ಯಾಯ ಒದಗಿಸಿದ್ದಾರೆ. ಸಲ್ಮಾನ್ ಖಾನ್ ಅಭಿನಯದಲ್ಲಿ ಅಸ್ಥಿರತೆ ಎದ್ದುಕಂಡಿದೆ. 70ರ ವಯಸ್ಸಿನಲ್ಲೂ ಬಾಡಿ ಬಿಲ್ಡರ್‌ ತರಹದ ಅವರ ನಿಲುವನ್ನು ತಮಾಷೆಯಾಗಿಯಷ್ಟೇ ಸ್ವೀಕರಿಸಬೇಕು. ಸುನಿಲ್ ಗ್ರೋವರ್‌ ನಟನೆಗೆ ಹೆಚ್ಚು ಅಂಕ ಸಲ್ಲಬೇಕು.

‘ವಸುದೈವ ಕುಟುಂಬಕಂ’ ಎಂಬ ನಿರ್ದೇಶಕರ ಉಮೇದನ್ನು ಮೆಚ್ಚಿಕೊಳ್ಳಬಹುದು. ಹಾಗಿದ್ದೂ 167 ನಿಮಿಷಗಳಷ್ಟು ದೀರ್ಘಾವಧಿಯನ್ನು ಸಹಿಸಿಕೊಳ್ಳಲು ಒಂಚೂರು ಕಷ್ಟಪಡಬೇಕಾಗುತ್ತದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 6

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !