ಕಡಲೆ ಖರೀದಿ; ಸರ್ಕಾರಕ್ಕೆ ಮುಖಭಂಗ

ಮಂಗಳವಾರ, ಜೂನ್ 18, 2019
23 °C
ಖರೀದಿ ಕೇಂದ್ರಗಳತ್ತ ತಲೆ ಹಾಕದ ರೈತರು; ಅವಧಿ ವಿಸ್ತರಣೆ

ಕಡಲೆ ಖರೀದಿ; ಸರ್ಕಾರಕ್ಕೆ ಮುಖಭಂಗ

Published:
Updated:

ಬಾಗಲಕೋಟೆ: ರೈತರ ಬಳಿ ಮಾರಾಟಕ್ಕೆ ಕಡಲೆಯೇ ಇಲ್ಲ. ಹಾಗಿದ್ದರೂ ಬೆಂಬಲಬೆಲೆಯಡಿ ಖರೀದಿಸಲು ಸರ್ಕಾರ ಮುಂದಾಗಿದೆ. ಹಂಗಾಮು ಮುಗಿದು ಆರು ತಿಂಗಳು ಕಳೆದ ನಂತರ ಕಡಲೆ ಖರೀದಿಗೆ ಮುಂದಾಗಿ ನಗೆಪಾಟಲಿಗೆ ಗುರಿಯಾಗಿದೆ. 

2018ರ ಸಾಲಿನ ಹಿಂಗಾರು ಹಂಗಾಮಿನಲ್ಲಿ ಬೆಂಬಲ ಬೆಲೆಯಡಿ ಕಡಲೆ ಖರೀದಿಗೆ ಸರ್ಕಾರದ ಆದೇಶಿಸಿದೆ. ಅದರನ್ವಯ ಜಿಲ್ಲೆಯ ಆರು ಕಡೆ (ಬಾಗಲಕೋಟೆ, ಹುನಗುಂದ, ಸೂಳೆಬಾವಿ, ತೊದಲಬಾಗಿ, ಸಾವಳಗಿ ಹಾಗೂ ಬಾದಾಮಿ) ರಾಜ್ಯ ಸಹಕಾರಿ ಮಾರಾಟ ಮಹಾಮಂಡಳ ಖರೀದಿ ಕೇಂದ್ರಗಳನ್ನು ಆರಂಭಿಸಿದೆ. ಆದರೆ ಕಡಲೆ ಖರೀದಿ ಕೇಂದ್ರಗಳತ್ತ ಒಬ್ಬ ರೈತರೂ ತಲೆ ಹಾಕಿಲ್ಲ.

ನೋಂದಣಿ ಮಾಡಿಸಿದವರೂ ಬಂದಿಲ್ಲ: ಬೆಂಬಲ ಬೆಲೆಯಡಿ ಖರೀದಿಗೆ ಮೇ 28ರವರೆಗೆ ರೈತರ ಹೆಸರು ನೋಂದಣಿ ಹಾಗೂ ಜೂನ್ 7ರವರೆಗೆ ಖರೀದಿಗೆ ಕೊನೆಯ ದಿನ ಎಂದು ನಿಗದಿಪಡಿಸಲಾಗಿತ್ತು. ಜಿಲ್ಲೆಯಲ್ಲಿ ಕೇವಲ 49 ಮಂದಿ ಮಾತ್ರ ನೋಂದಾಯಿಸಿದ್ದರು. ಅವರೂ ಖರೀದಿ ಕೇಂದ್ರಕ್ಕೆ ಮಾಲು ತಂದಿಲ್ಲ. ಹಾಗಾಗಿ ಜೂನ್ 17ರವರೆಗೆ ಮತ್ತೆ ನೋಂದಣಿಗೆ ಅವಕಾಶ ನೀಡಿರುವ ಸರ್ಕಾರ, ಜೂನ್ 27ರವರೆಗೆ ಖರೀದಿಗೆ ಅವಕಾಶ ಕಲ್ಪಿಸಿದೆ.

ಬೆಂಬಲ ಬೆಲೆಯಡಿ ಕ್ವಿಂಟಲ್‌ಗೆ ₹4620ರಂತೆ ಖರೀದಿ ಮಾಡಲಾಗುತ್ತಿದೆ. ಆದರೆ ಈಗ ಮುಕ್ತ ಮಾರುಕಟ್ಟೆಯಲ್ಲಿಯೇ ₹4500ರಿಂದ 4800ರವರೆಗೆ ಬೆಲೆ ದೊರೆಯುತ್ತಿದೆ. ಇಲ್ಲಿ ನೂರೆಂಟು ಅಡೆತಡೆಗಳು, ದಾಖಲೆಗಳ ಕೊಡಬೇಕಾದ ಕಿರಿಕಿರಿ, ಹಣ ಕೂಡ ತಕ್ಷಣ ಕೈಗೆ ಸಿಗುವುದಿಲ್ಲ. ಜೊತೆಗೆ ಗುಣಮಟ್ಟದ ನೆಪದಲ್ಲಿ ಖರೀದಿಗಿಂತ ಹೆಚ್ಚು ತಿರಸ್ಕಾರ ಆಗುವುದರಿಂದ ನೋಂದಣಿ ಮಾಡಿಸಿಕೊಂಡ ರೈತರು ಖರೀದಿ ಕೇಂದ್ರಗಳಿಗೆ ಕಡಲೆ ತರುತ್ತಿಲ್ಲ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ. 

ಹಂಗಾಮು ಮುಗಿದು 6 ತಿಂಗಳಾಯಿತು!: ‘ಹಿಂಗಾರು ಹಂಗಾಮಿನ ಕಡಲೆ ಕಟಾವು ಮುಗಿದು ಈಗಾಗಲೇ ಆರು ತಿಂಗಳು ಕಳೆದಿದೆ. ರೈತರಿಗೆ ನಿಜವಾಗಲೂ ನೆರವಾಗುವ ಆಶಯವಿದ್ದರೆ ಸರ್ಕಾರ ಕಳೆದ ನವೆಂಬರ್–ಡಿಸೆಂಬರ್‌ನಲ್ಲಿಯೇ ಬೆಂಬಲ ಬೆಲೆಯಡಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕಿತ್ತು. ಈಗಾಗಲೇ ಕಡಲೆ ಮಾರಾಟ ಮಾಡಿ ರೈತರು ಹಳಬರಾಗಿದ್ದಾರೆ. ಹೆಚ್ಚು ಬೆಲೆ ಸಿಗಬಹುದು ಎಂದು ಒಬ್ಬಿಬ್ಬರು ಸಂಗ್ರಹಿಸಿ ಇಟ್ಟಿದ್ದರೂ, ಹೊರಗೆ ಹೆಚ್ಚು ಬೆಲೆ ಸಿಗುತ್ತಿರುವ ಕಾರಣ ಎಪಿಎಂಸಿಗೆ ಒಯ್ಯುತ್ತಿದ್ದಾರೆ’ ಎಂದು ಅವರು ಹೇಳುತ್ತಾರೆ.

ಕೃಷಿ ಇಲಾಖೆ ಮಾಹಿತಿ ಅನ್ವಯ ಜಿಲ್ಲೆಯಲ್ಲಿ ಕಳೆದ ಹಿಂಗಾರು ಹಂಗಾಮಿನಲ್ಲಿ 1.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬಿತ್ತನೆಯಾಗಿದೆ. ಒಟ್ಟು 1.63,589 ಕ್ವಿಂಟಲ್ ಉತ್ಪಾದನೆ ನಿರೀಕ್ಷಿಸಲಾಗಿತ್ತು. ಈಗ ಮಾರಾಟವೂ ಮುಕ್ತಾಯವಾಗಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಹಿಂಗಾರಿ ಕಡಲೆ ಬಿತ್ತನೆಯಾಗಿದೆ. ಅದರಲ್ಲಿ ಅತಿ ಹೆಚ್ಚಿನ ಪ್ರಮಾಣ ಹುನಗುಂದ ತಾಲ್ಲೂಕಿನಲ್ಲಿ ಬೆಳೆಯಲಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !