ಭಾನುವಾರ, ಸೆಪ್ಟೆಂಬರ್ 22, 2019
22 °C

ಬಾಲ್ಯವಿವಾಹ ಪಿಡುಗನ್ನುಕೊನೆಗಾಣಿಸಲು ಪಣ ತೊಡೋಣ

Published:
Updated:
Prajavani

ಬಾಲ್ಯವಿವಾಹವು ನಿಷೇಧಕ್ಕೆ ಒಳಪಟ್ಟಿದ್ದರೂ ಇಂತಹ ಮದುವೆಗಳು ಈಗಲೂ ಎಗ್ಗಿಲ್ಲದೆ ನಡೆಯುತ್ತಿವೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪತ್ನಿಯ ಜೊತೆ ಲೈಂಗಿಕ ಸಂಬಂಧ ಹೊಂದುವುದು ಅತ್ಯಾಚಾರವಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಆದರೂ ಬಾಲ್ಯವಿವಾಹಗಳನ್ನು ನಿಲ್ಲಿಸಲಾಗಿಲ್ಲ. ರಾಜ್ಯದ ಬೆಳಗಾವಿ, ಬಾಗಲಕೋಟೆ, ಬೀದರ್‌, ಚಾಮರಾಜನಗರ ಹಾಗೂ ಕೋಲಾರ ಜಿಲ್ಲೆಗಳಲ್ಲಿ 2018ರಲ್ಲಿ 3,117 ಬಾಲ್ಯವಿವಾಹಗಳು ನಡೆದಿರುವುದು ‘ಚೈಲ್ಡ್‌ ರೈಟ್ಸ್‌ ಟ್ರಸ್ಟ್‌’ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. 

ಈ ಆಘಾತಕಾರಿ ಅಂಕಿಅಂಶವು ಬಾಲ್ಯವಿವಾಹದ ಪಿಡುಗನ್ನಷ್ಟೇ ಬಿಂಬಿಸುವುದಿಲ್ಲ; ರಾಜ್ಯದ ಮಕ್ಕಳ ಮನೋದೈಹಿಕ ಆರೋಗ್ಯ ಹಾಗೂ ಸಾಮಾಜಿಕ ಸ್ವಾಸ್ಥ್ಯವು ಆತಂಕದಲ್ಲಿರುವ ಸ್ಥಿತಿಯನ್ನೂ ಹೇಳುತ್ತದೆ. 13 ವರ್ಷದಿಂದ 17 ವರ್ಷದ ಮಕ್ಕಳನ್ನು ಮದುವೆ ಹೆಸರಿನಲ್ಲಿ ಬಂಧನಕ್ಕೆ ದೂಡಲಾಗಿದೆ. ಅವರಲ್ಲಿ ಕೆಲವರು ಈಗಾಗಲೇ ವಿಧವೆಯರಾಗಿದ್ದರೆ, ಕೆಲವರನ್ನು ವೇಶ್ಯಾವಾಟಿಕೆಗೆ ತಳ್ಳಲಾಗಿದೆ ಎಂಬ ಅಂಶ ಮತ್ತಷ್ಟು ಆಘಾತಕಾರಿ. ಈ ಪಿಡುಗಿಗೆ ಕಾರಣಗಳು ಒಂದೆರಡಲ್ಲ. ಬಡತನ, ಅನಕ್ಷರತೆ, ತಿಳಿವಳಿಕೆ ಕೊರತೆ, ಆರ್ಥಿಕ ಸಮಸ್ಯೆ, ಹೆಣ್ಣುಮಕ್ಕಳ ಬಗೆಗಿನ ಅಸಡ್ಡೆ... ಈ ಎಲ್ಲವೂ ಅವರನ್ನು ಇಂತಹ ಕೂಪಕ್ಕೆ ದೂಡುತ್ತಿವೆ.

ಕೆಲವು ಕುಟುಂಬಗಳಲ್ಲಿ ಮನೆತುಂಬ ಮಕ್ಕಳು. ಆದರೆ ಹೊಟ್ಟೆಗೆ–ಬಟ್ಟೆಗೆ ಹೊಂದಿಸಿಕೊಳ್ಳಲಾರದ ಕಡುಕಷ್ಟ. ಅಂತಹ ಕುಟುಂಬಗಳಲ್ಲಿಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸುವುದು ದೂರದ ಮಾತೇ ಸರಿ. ‘ಯಾವಾಗಿದ್ದರೂ ಪರರ ಮನೆಗೆ ಹೋಗುವ ಹೆಣ್ಣುಮಕ್ಕಳಿಗೇಕೆ ಓದು, ಬರಹ?’ ಎಂಬ ತಾತ್ಸಾರ ಮನೋಭಾವವೂ ಅವರಿಗೆ ಉರುಳಾಗಿ ಪರಿಣಮಿಸುತ್ತದೆ. ಹತ್ತಿರದಲ್ಲಿ ಶಾಲಾ–ಕಾಲೇಜುಗಳು ಇಲ್ಲದಿರುವುದು ಕೂಡ ಬಾಲ್ಯವಿವಾಹಗಳಿಗೆ ಒಂದು ಕಾರಣವಾಗುತ್ತಿದೆ. ಹೆಣ್ಣುಮಕ್ಕಳು ಹೊರೆ ಎಂಬ ಭಾವನೆ ಹೋಗಲಾಡಿಸಲು ಇನ್ನೂ ಸಾಧ್ಯವಾಗಿಲ್ಲ. ಆ ‘ಹೊರೆ’ ಇಳಿಸಿಕೊಳ್ಳುವ ಧಾವಂತದಲ್ಲಿ ಕರುಳಕುಡಿಗೆ ಮಾಡುತ್ತಿರುವ ಅಪಚಾರ, ಪೋಷಕರ ಅರಿವಿಗೆ ಬಾರದಿರುವುದು ಅತ್ಯಂತ ನೋವಿನ ಸಂಗತಿ. ಕದ್ದುಮುಚ್ಚಿ ನಡೆಯುತ್ತಿರುವ ಬಾಲ್ಯವಿವಾಹಗಳ ಮೂಲಕ ಕಾನೂನಿನ ಕಣ್ಣಿಗೆ ಮಣ್ಣೆರಚುವ ಕೆಲಸ ಒಂದೆಡೆಯಾದರೆ, ಇದು ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಮತ್ತೊಂದು ಮುಖವೂ ಹೌದು.

ಹದಿನೆಂಟು ವರ್ಷಕ್ಕೆ ಮೊದಲೇ ಹೆಣ್ಣುಮಕ್ಕಳಿಗೆ ಮದುವೆ ಮಾಡಿ, ಅವರ ಸ್ವಾತಂತ್ರ್ಯಕಸಿದುಕೊಳ್ಳುತ್ತಿರುವುದರ ಹಿಂದೆ ಪೋಷಕರ ಮನಃಸ್ಥಿತಿ ಮತ್ತು ಕೌಟುಂಬಿಕ ಹಿನ್ನೆಲೆ ಪ್ರಮುಖ ಪಾತ್ರ ವಹಿಸುತ್ತವೆ. ಮಗಳಿಗೆ ಆರೋಗ್ಯ, ಶಿಕ್ಷಣ ಮತ್ತು ಸ್ವಾವಲಂಬಿ ಬದುಕು ಕಲ್ಪಿಸುವುದಕ್ಕಿಂತ ಹೆಚ್ಚಾಗಿ, ಸಾಧ್ಯವಾದಷ್ಟು ಬೇಗ ಆಕೆಯನ್ನು ಗಂಡನ ಸುಪರ್ದಿಗೆ ಒಪ್ಪಿಸಿ, ತಮ್ಮ ಜವಾಬ್ದಾರಿಯಿಂದ ಬಿಡುಗಡೆ ಹೊಂದುವ ಅವಸರ ಕೆಲವು ಪೋಷಕರಲ್ಲಿ ಈ ಕಾಲಘಟ್ಟದಲ್ಲೂ ಉಳಿದಿರುವುದು ದುರದೃಷ್ಟಕರ. ಬಾಲ್ಯವಿವಾಹದ ಬಳಿಕ ದೌರ್ಜನ್ಯಕ್ಕೆ ತುತ್ತಾದ, ಆತ್ಮಹತ್ಯೆಗೆ ಪ್ರಯತ್ನಿಸಿದ ಹೆಣ್ಣುಮಕ್ಕಳನ್ನು ಗುರುತಿಸಿ, ಅವರನ್ನು ಕತ್ತಲ ಕೂಪದಿಂದ ಹೊರತರುವ ವಿರಳ ಪ್ರಯತ್ನಗಳೂ ಸರ್ಕಾರ ಮತ್ತು ಸಂಘ ಸಂಸ್ಥೆಗಳಿಂದ ನಡೆಯುತ್ತಿವೆ.

ಆದರೆ ಇಂತಹ ಮಕ್ಕಳ ಬಗ್ಗೆ ಆಶಾ ಕಾರ್ಯಕರ್ತೆಯರು, ಎಎನ್‌ಎಂಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರಿಗೆ ಅರಿವಿದ್ದರೂ ಅವರು ಮಾಹಿತಿ ನೀಡದೆ ಮೌನವಹಿಸುತ್ತಾರೆ ಎಂಬ ಅಂಶವೂ ಸಮೀಕ್ಷೆಯಿಂದ ತಿಳಿದುಬಂದಿದೆ. ಈ ಪ್ರವೃತ್ತಿ ಒಳ್ಳೆಯದಲ್ಲ. ಇಂತಹ ಪಿಡುಗನ್ನು ತಡೆಯಲು ಸಮಾಜದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು. ಕಾನೂನಿನ ಅನ್ವಯ ಕಠಿಣವಾದ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ, ಇದರ ದುಷ್ಪರಿಣಾಮಗಳ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಹೆಣ್ಣುಮಗುವನ್ನು ನೋಡುವ ಸಮಾಜದ ದೃಷ್ಟಿಕೋನ ಸಂಪೂರ್ಣವಾಗಿ ಬದಲಾಗಬೇಕು. ಈ ನಿಟ್ಟಿನಲ್ಲಿ, ವಿವಿಧ ಆಯಾಮಗಳಲ್ಲಿ ಪ್ರಯತ್ನಗಳು ನಡೆಯಬೇಕು.

Post Comments (+)