ದಾಖಲೆ ಸಲ್ಲಿಕೆಗೆ ಹೈಕೋರ್ಟ್‌ ನಿರ್ದೇಶನ

ಮಂಗಳವಾರ, ಜೂನ್ 25, 2019
24 °C

ದಾಖಲೆ ಸಲ್ಲಿಕೆಗೆ ಹೈಕೋರ್ಟ್‌ ನಿರ್ದೇಶನ

Published:
Updated:

ಬೆಂಗಳೂರು: ‘ವಿಧಾನಸಭೆ ಕಾರ್ಯದರ್ಶಿ ಆಗಿದ್ದ ಎಸ್‌.ಮೂರ್ತಿ ಅವರನ್ನು ಅಮಾನತುಗೊಳಿಸುವ ದಿಸೆಯಲ್ಲಿ ವಿಧಾನಸಭೆ ವಿಶೇಷ ಮಂಡಳಿ ಕೈಗೊಂಡ ಕಲಾಪ ಪ್ರಕ್ರಿಯೆಗಳ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

‘ಅಮಾನತು ಆದೇಶಕ್ಕೆ ತಡೆ ನೀಡಬೇಕು’ ಎಂಬ ಎಸ್.ಮೂರ್ತಿ ಅವರ ಕೋರಿಕೆಯನ್ನು ತಿರಸ್ಕರಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಮೂರ್ತಿ ಸಲ್ಲಿಸಿರುವ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕಾ ಮತ್ತು ನ್ಯಾಯಮೂರ್ತಿ ಪಿ.ಎಸ್‌.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಮೂರ್ತಿ ಪರ ವಾದ ಮಂಡಿಸಿದ ಹಿರಿಯ ವಕೀಲ ಎ.ಎಸ್‌.ಪೊನ್ನಣ್ಣ, ‘ಅಮಾನತು ಆದೇಶವನ್ನು ಸಕ್ಷಮ ಪ್ರಾಧಿಕಾರ ನೀಡಿಲ್ಲ. ಅಧೀನ ಅಧಿಕಾರಿ ನೀಡಿದ್ದಾರೆ. ಆರೋಪಕ್ಕೆ ಸಂಬಂಧಿಸಿದ ಅಂಶಗಳ ಬಗ್ಗೆ ವಿಶೇಷ ಮಂಡಳಿ ವಿಚಾರಣೆಯನ್ನೇ ನಡೆಸಿಲ್ಲ’ ಎಂದು ಆಕ್ಷೇಪಿಸಿದರು.

ಇದಕ್ಕೆ ಅಡ್ವೊಕೇಟ್‌ ಜನರಲ್ ಉದಯ ಹೊಳ್ಳ, ‘ಮೇಲ್ನೋಟಕ್ಕೆ ಆರೋಪಗಳಲ್ಲಿ ಸತ್ಯಾಂಶವಿದೆ ಎಂಬ ಕಾರಣಕ್ಕಾಗಿಯೇ ವಿಶೇಷ ಮಂಡಳಿ ಅಮಾನತು ನಿರ್ಣಯ ಕೈಗೊಂಡಿದೆ’ ಎಂದು ಪ್ರತಿಪಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ದಾಖಲೆಗಳನ್ನು ಕೋರ್ಟ್‌ಗೆ ಹಾಜರುಪಡಿಸಿ’ ಎಂದು ಸೂಚಿಸಿ ವಿಚಾರಣೆಯನ್ನು ಇದೇ 19ಕ್ಕೆ ಮುಂದೂಡಿದೆ.

ಪ್ರಕರಣವೇನು?: ವಿಧಾನಸಭೆ ಕಾರ್ಯದರ್ಶಿಯಾಗಿದ್ದ ಎಸ್. ಮೂರ್ತಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ವಿಧಾನಸಭೆ ಅಧೀನ ಕಾರ್ಯದರ್ಶಿ 2018ರ ಡಿಸೆಂಬರ್‌ 27ರಂದು ಆದೇಶ ಹೊರಡಿಸಿದ್ದರು.

‘2016 ಹಾಗೂ 2017ನೇ ಸಾಲಿನಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಅಧಿವೇಶನಕ್ಕೆ ಸಂಬಂಧಿಸಿದಂತೆ ಕೈಗೊಳ್ಳಲಾದ ಕಾಮಗಾರಿ ಹಾಗೂ ಇತರೆ ಖರ್ಚು–ವೆಚ್ಚಗಳಲ್ಲಿ ಅವ್ಯವಹಾರ ನಡೆಸಲಾಗಿದೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿರುವ ಶಾಸಕಾಂಗದ ವಿಶೇಷ ಮಂಡಳಿಯ ಆದೇಶದ ಅನುಸಾರ ಎಸ್.ಮೂರ್ತಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !