ವಿದ್ಯುತ್‌ ಉಳಿತಾಯಕ್ಕೆ ‘ಸ್ಮಾರ್ಟ್‌ ಸ್ವಿಚ್ಚಿಂಗ್‌’

ಮಂಗಳವಾರ, ಜೂನ್ 18, 2019
31 °C
ಕೇಂದ್ರ ಕಚೇರಿಯಲ್ಲೇ ಪ್ರಾಯೋಗಿಕ ಯೋಜನೆ ಅನುಷ್ಠಾನಕ್ಕೆ ಮುಂದಾದ ಮೆಸ್ಕಾಂ

ವಿದ್ಯುತ್‌ ಉಳಿತಾಯಕ್ಕೆ ‘ಸ್ಮಾರ್ಟ್‌ ಸ್ವಿಚ್ಚಿಂಗ್‌’

Published:
Updated:

ಮಂಗಳೂರು: ಕೋಣೆಯ ಒಳಗೆ ಮನುಷ್ಯರು ಇರುವ ಜಾಗಕ್ಕೆ ಹೆಚ್ಚು ಬೆಳಕು, ಇಲ್ಲದೆಡೆಗೆ ಕಡಿಮೆ ಬೆಳಕು. ಕೋಣೆಯ ಬಾಗಿಲು ಮುಚ್ಚಿ ಹೊರಹೋದ 30 ಸೆಕೆಂಡ್‌ನಲ್ಲಿ ಸ್ವಯಂಚಾಲಿತವಾಗಿ ವಿದ್ಯುತ್‌ ದೀಪಗಳು, ಯಂತ್ರೋಪಕರಣಗಳು ಸ್ಥಗಿತಗೊಳ್ಳುವ ’ಸ್ಮಾರ್ಟ್‌ ಸ್ವಿಚ್ಚಿಂಗ್‌’ ತಂತ್ರಜ್ಞಾನದ ಪ್ರಾಯೋಗಿಕ ಅನುಷ್ಠಾನವನ್ನು ತನ್ನ ಕೇಂದ್ರ ಕಚೇರಿಯಲ್ಲೇ ನಡೆಸಲು ಮಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಮೆಸ್ಕಾಂ) ಮುಂದಾಗಿದೆ.

‘ಪ್ರಜಾವಾಣಿ’ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ನೇರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೆಸ್ಕಾಂ ತಾಂತ್ರಿಕ ನಿರ್ದೇಶಕ ಎನ್‌.ರಘು ಪ್ರಕಾಶ್‌ ಈ ಕುರಿತು ಮಾಹಿತಿ ಹಂಚಿಕೊಂಡರು. ನಗರದ ಬಿಜೈನಲ್ಲಿರುವ ಮೆಸ್ಕಾಂ ಭವನದಲ್ಲಿ ₹ 2.5 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಹಣಕಾಸು ಇಲಾಖೆಯ ಅನುಮತಿ ಕೋರಲಾಗಿದೆ ಎಂದು ತಿಳಿಸಿದರು.

ಜಿಐಎಸ್‌ ಸ್ಟೇಷನ್‌: ಕಡಿಮೆ ಸ್ಥಳಾವಕಾಶ ಇರುವಲ್ಲಿ ಗ್ಯಾಸ್‌ ಇನ್ಸುಲೇಟೆಡ್‌ ವಿದ್ಯುತ್‌ ಸ್ಟೇಷನ್‌ (ಜಿಐಎಸ್‌) ನಿರ್ಮಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಉರ್ವ ಮಾರುಕಟ್ಟೆ, ಬಂಟ್ವಾಳ, ಸಾಲಿಗ್ರಾಮ ಮತ್ತು ಉಡುಪಿ ಸಮೀಪದ ಉದ್ಯಾವರದಲ್ಲಿ ಒಟ್ಟು ₹ 80 ಕೋಟಿ ವೆಚ್ಚದಲ್ಲಿ ನಾಲ್ಕು ಜಿಐಎಸ್‌ ಸ್ಟೇಷನ್‌ ನಿರ್ಮಿಸಲು ಟೆಂಡರ್‌ ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು.

‘1945ರಲ್ಲೇ ಸ್ವಿಟ್ಜರ್ಲೆಂಡ್‌ ಜಿಐಎಸ್‌ ಸ್ಟೇಷನ್‌ ನಿರ್ಮಿಸಿತ್ತು. 1997ರಲ್ಲಿ ತಮಿಳುನಾಡಿನಲ್ಲಿ ನಿರ್ಮಿಸಲಾಗಿತ್ತು. 2007ರಲ್ಲಿ ಬೆಂಗಳೂರಿನಲ್ಲಿ ಈ ಪ್ರಯತ್ನ ನಡೆದಿತ್ತು. ಮೆಸ್ಕಾಂ ಈಗ ಇಂತಹ ಪ್ರಯತ್ನಕ್ಕೆ ಕೈಹಾಕಿದೆ’ ಎಂದು ತಿಳಿಸಿದರು.

ಸ್ಮಾರ್ಟ್‌ ಮೀಟರ್ ಅಳವಡಿಸುವ ಯೋಜನೆಯನ್ನು ಕೆಲವು ವರ್ಷಗಳವರೆಗೆ ಅನುಷ್ಠಾನಕ್ಕೆ ತರುವ ಸಾಧ್ಯತೆ ಇಲ್ಲ. ಈಗ ಮೆಸ್ಕಾಂ ಅತ್ಯಾಧುನಿಕ ಮೀಟರ್‌ಗಳನ್ನೇ ಬಳಸುತ್ತಿದೆ. ಸ್ಮಾರ್ಟ್‌ ಮೀಟರ್‌ ಅಳವಡಿಸಲು ಸಾವಿರಾರು ಕೋಟಿ ರೂಪಾಯಿ ಅಗತ್ಯವಿದೆ. ಮೈಸೂರು ಸೇರಿದಂತೆ ದೇಶದ 14 ನಗರಗಳ ಕೆಲವು ಭಾಗಗಳಲ್ಲಿ ಪ್ರಾಯೋಗಿಕ ಯೋಜನೆ ಯಶಸ್ವಿಯಾಗಿದೆ. ಆದರೆ, ಬಂಡವಾಳದ ಕೊರತೆಯಿಂದ ಸಮಗ್ರವಾಗಿ ಸ್ಮಾರ್ಟ್‌ ಮೀಟರ್‌ನತ್ತ ಬದಲಾಗುವುದು ಕಷ್ಟ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮೆಸ್ಕಾಂ ವ್ಯಾಪ್ತಿಯಲ್ಲಿ 19,827 ಕಿಲೋವಾಟ್‌ ಉತ್ಪಾದನಾ ಸಾಮರ್ಥ್ಯದ 771 ಸೌರ ವಿದ್ಯುತ್‌ ಉತ್ಪಾದನಾ ಘಟಕಗಳಿವೆ. ಆರಂಭದಲ್ಲಿ ಸೌರ ವಿದ್ಯುತ್‌ ಖರೀದಿಯ ದರ ಪ್ರತಿ ಯೂನಿಟ್‌ಗೆ ₹ 9.56 ಇತ್ತು. ಈಗ ಅದು ₹ 2.86ಕ್ಕೆ ಕುಸಿದಿದೆ. ಹೀಗಾಗಿ ಸೌರ ವಿದ್ಯುತ್‌ ಘಟಕಗಳನ್ನು ಸ್ಥಾಪಿಸಲು ಆಸಕ್ತಿ ತೋರಿಸುವವರ ಸಂಖ್ಯೆ ಕಡಿಮೆ ಇದೆ ಎಂದರು.

ಭೂಗತ ಕೇಬಲ್‌: ಮಂಗಳೂರು ನಗರದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಗೆ ಪೂರಕವಾಗಿ ಕೆಲವು ಪ್ರದೇಶಗಳಲ್ಲಿ ₹ 113 ಕೋಟಿ ವೆಚ್ಚದಲ್ಲಿ ಭೂಗತ ವಿದ್ಯುತ್‌ ಕೇಬಲ್‌ಗಳನ್ನು ಅಳವಡಿಸಲು ಯೋಜನೆ ಕೈಗೆತ್ತಿಕೊಳ್ಳಲಿದೆ. ಇದಕ್ಕೆ ಮೆಸ್ಕಾಂ ಹಣ ವೆಚ್ಚ ಮಾಡಲಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೆಲವು ರಸ್ತೆಗಳ ಪಕ್ಕದಲ್ಲಿ ಭೂಗತ ಕೇಬಲ್‌ ಅಳವಡಿಕೆಗೆ ₹ 30 ಕೋಟಿ ವೆಚ್ಚದ ಪ್ರಸ್ತಾವ ಸಿದ್ಧವಾಗಿದೆ ಎಂದು ಮೆಸ್ಕಾಂ ಮುಖ್ಯ ಎಂಜಿನಿಯರ್‌ ಮಂಜಪ್ಪ ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !