ನಾಯನಹಳ್ಳಿಗೆ ಜಪಾನ್ ರೈತರ ಭೇಟಿ

ಸೋಮವಾರ, ಜೂನ್ 24, 2019
24 °C
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ಅವರ ಸಾವಯವ ದೇಸಿ ಪದ್ಧತಿಯ ದ್ರಾಕ್ಷಿ ತೋಟ ವೀಕ್ಷಣೆ

ನಾಯನಹಳ್ಳಿಗೆ ಜಪಾನ್ ರೈತರ ಭೇಟಿ

Published:
Updated:
Prajavani

ಚಿಕ್ಕಬಳ್ಳಾಪುರ: ತಾಲ್ಲೂಕಿನ ನಾಯನಹಳ್ಳಿಯಲ್ಲಿ ಕಳೆದ ಮೂರು ವರ್ಷಗಳಿಂದ ಸಾವಯವ ದೇಸಿ ಪದ್ಧತಿಯಲ್ಲಿ ರಾಸಾಯನಿಕ ಗೊಬ್ಬರ ಮುಕ್ತ ದ್ರಾಕ್ಷಿ ಬೆಳೆಯುತ್ತಿರುವ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ಅವರ ತೋಟಕ್ಕೆ ಶನಿವಾರ ಜಪಾನ್‌ನ ಕೆಲ ಪ್ರಗತಿಪರ ರೈತರು ಭೇಟಿ ನೀಡಿ ಮಾಹಿತಿ ಪಡೆದರು.

ಬೆಂಗಳೂರಿನ ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ನಿವೃತ್ತ ವಿಜ್ಞಾನಿ, ಮಹಾರಾಷ್ಟ್ರ ದ್ರಾಕ್ಷಿ ಬೆಳೆಗಾರರ ಸಲಹೆಗಾರ ಜಿ.ಎಸ್‌.ಪ್ರಕಾಶ್ ಅವರು ಜಪಾನ್‌ನ ರೈತರಾದ ಒಕುಡಾ ಮಿಕಿಯೊ, ಎಮಿ ಕೌಜುಮಿ, ಶಿಂಜಿ ಹಾಸಿಮೊಟೊ ಅವರಿಗೆ ಆಂಜನೇಯರೆಡ್ಡಿ ಅವರ ತೋಟದ ವಿಶೇಷತೆ ಪರಿಚಯಿಸಿದರು.

ಈ ವೇಳೆ ಮಾತನಾಡಿದ ಪ್ರಕಾಶ್‌, ‘ಈ ಹಿಂದೆ ಆಂಜನೇಯರೆಡ್ಡಿ ಅವರು ತೋಟದಿಂದ ಒಳ್ಳೆಯ ಬೆಳೆ ತೆಗೆದಿರಲಿಲ್ಲ. ಕೆಲ ವರ್ಷಗಳ ಹಿಂದೆ ನಾವು ನೀಡಿದ ಸಲಹೆಗಳಂತೆ ಬೇಸಾಯ ಕ್ರಮ, ರೋಗ ನಿರ್ವಹಣೆ ಮಾಡುತ್ತ ಬರುತ್ತಿರುವುದರಿಂದ ಕಳೆದ ಮೂರು ವರ್ಷಗಳಿಂದ ಉತ್ತಮ ಫಸಲು ತೆಗೆಯುತ್ತಿದ್ದಾರೆ. ಹಿಂಡಿ, ಸಾವಯವ ಗೊಬ್ಬರಗಳ ಬಳಕೆ, ನೀರಿನ ಮಿತಬಳಕೆಯಿಂದ ಗುಣಮಟ್ಟದ ದ್ರಾಕ್ಷಿ ಬೆಳೆಯುತ್ತಿದ್ದಾರೆ’ ಎಂದು ತಿಳಿಸಿದರು.

‘1975ರಲ್ಲಿ ನಾನು ಅಮೆರಿಕದಿಂದ ಸುಮಾರು 10 ಬಗೆಯ ದ್ರಾಕ್ಷಿ ಬೇರು ಕಾಂಡಗಳನ್ನು ದೇಶಕ್ಕೆ ತೆಗೆದುಕೊಂಡು ಬಂದಿದ್ದೆ. ಆ ಪೈಕಿ ಎಲ್ಲಾ ಬಗೆಯ ಮಣ್ಣು, ಹವಾಗುಣಕ್ಕೆ ಹೊಂದಿಕೊಂಡು ಬೆಳೆಯುವ ಡಾಗ್ರಿಜ್ ಎಂಬ ಬೇರು ಕಾಂಡ ಉತ್ತಮ ಫಲಿತಾಂಶ ನೀಡುತ್ತಿದೆ. ಪ್ರಸ್ತುತ ದೇಶದಲ್ಲಿ 4 ಲಕ್ಷ ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಆ ಪೈಕಿ 3.88 ಲಕ್ಷ ಎಕರೆಯಲ್ಲಿ ಡಾಗ್ರೀಜ್ ಬೇರು ಕಾಂಡ ಬಳಕೆಯಾಗುತ್ತಿದೆ’ ಎಂದು ಹೇಳಿದರು.

‘ದ್ರಾಕ್ಷಿ ಬೆಳೆಯಲ್ಲಿ ಬೇರು ಕಾಂಡ ಉಪಯೋಗಿಸುವುದರಿಂದ ಶೇ 40 ರಷ್ಟು ನೀರಿನಲ್ಲಿ ಕೂಡ ದ್ರಾಕ್ಷಿ ಬೆಳೆಯಬಹುದು. ಅಧಿಕ ಇಳುವಳಿ ಪಡೆದುಕೊಳ್ಳಬಹುದು. ಇವತ್ತು ನಮ್ಮ ರೈತರು ದ್ರಾಕ್ಷಿಗೆ ಅಗತ್ಯಕ್ಕಿಂತ ಹೆಚ್ಚು ಔಷಧಿ ಬಳಕೆ ಮಾಡುತ್ತಿದ್ದಾರೆ. ಇದರಿಂದ ಎಲೆಗಳ ಆಹಾರ ಉತ್ಪಾದನಾ ಶಕ್ತಿ ಕುಂಠಿತಗೊಂಡು ಜತೆಗೆ ಗೊಂಚಲ ಕಿರಿದಾಗುವುದು, ಸಕ್ಕರೆ ಅಂಶ ಕಡಿಮೆಯಾಗುವುದು, ತೂಕ ಕಡಿಮೆಯಾಗುವ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ’ ಎಂದರು.

ಆರ್.ಆಂಜನೇಯರೆಡ್ಡಿ ಮಾತನಾಡಿ, ‘ಪ್ರಕಾಶ್ ಅವರ ಮಾರ್ಗದರ್ಶದಲ್ಲಿ ನಾವು ಕೆಲ ವರ್ಷಗಳಿಂದ ಸಾವಯವ ಪದ್ಧತಿಯಲ್ಲಿ ದ್ರಾಕ್ಷಿ ಬೆಳೆಯುತ್ತಿದ್ದೇವೆ. ಪರಿಣಾಮ ಮೊದಲು ಗಟ್ಟಿಯಾಗಿದ್ದ ಭೂಮಿ ಈಗ ಮೆದುವಾಗಿ, ಪೋಷಕಾಂಶಗಳಿಂದ ಸಮೃದ್ಧವಾಗಿದೆ. ತೇವಾಂಶ ಹೆಚ್ಚಿದೆ. ರೋಗ ಹರಡುವುದು, ರೋಗ ನಿಯಂತ್ರಣಕ್ಕೆ ಬರದಿರುವ ಸಮಸ್ಯೆ ಗಣನೀಯವಾಗಿ ಕಡಿಮೆಯಾಗಿದೆ’ ಎಂದು ಹೇಳಿದರು.

‘ಒಂದೆಡೆ ಬೇರು ಕಾಂಡದ ಬಳಕೆಯಿಂದಾಗಿ ಗಿಡಗಳಿಗೆ ಉತ್ತಮ ರೀತಿಯಲ್ಲಿ ಪೋಷಕಾಂಶಗಳು ದೊರೆಯುತ್ತಿದೆ. ನೀರಿನ ಮಿತಬಳಕೆಯಾಗುತ್ತಿದೆ. ಸಾವಯವ ಪದ್ಧತಿಯಿಂದ ನಮ್ಮ ನಿರೀಕ್ಷೆಗೂ ಮೀರಿ ದ್ರಾಕ್ಷಿ ಇಳುವರಿ ದೊರೆಯುತ್ತಿದೆ. ಸಾವಯವ ಪದ್ಧತಿಯಿಂದ ರೈತರು ಭೂಮಿಗೆ ಆಗುವ ಹಾನಿಯನ್ನು ನಿಯಂತ್ರಿಸಬಹುದು’ ಎಂದು ತಿಳಿಸಿದರು.

ರೈತ ಮುಖಂಡರಾದ ಆನೂರು ದೇವರಾಜ್, ಮಳ್ಳೂರು ಪಿಳ್ಳವೆಂಕಟಶಾಮಪ್ಪ, ಯಣ್ಣೂರು ರಾಮಕೃಷ್ಣಪ್ಪ, ದೊಡ್ಡಮರಳಿ ಮುನಿಕೃಷ್ಣಪ್ಪ, ವಿಜಯಬಾವರೆಡ್ಡಿ, ಜಾತವಾರ ಕೃಷ್ಣಪ್ಪ, ಜಗದೀಶ್‌, ಆನಂದಪ್ಪ, ಬಸವರಾಜ್, ಅನಂತ್, ವೇಣುಗೋಪಾಲ್, ಉಷಾ ಆಂಜನೇಯರೆಡ್ಡಿ ಹಾಜರಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !