ಮಮತಾ ಪರ ಕೆಲಸ: ಕಿಶೋರ್‌ ಬೆನ್ನಿಗೆ ನಿತೀಶ್‌

ಶುಕ್ರವಾರ, ಜೂನ್ 21, 2019
24 °C

ಮಮತಾ ಪರ ಕೆಲಸ: ಕಿಶೋರ್‌ ಬೆನ್ನಿಗೆ ನಿತೀಶ್‌

Published:
Updated:
Prajavani

ಪಟ್ನಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪರವಾಗಿ ಚುನಾವಣಾ ಕಾರ್ಯತಂತ್ರ ತಜ್ಞ ಪ್ರಶಾಂತ್‌ ಕಿಶೋರ್‌ ಅವರು ಕೆಲಸ ಮಾಡಲು ಒಪ್ಪಿರುವುದರ ಬಗ್ಗೆ ಜೆಡಿಯು ವಿವರಣೆ ಕೇಳಲಿದೆ ಎಂಬ ವದಂತಿ ಹುಸಿಯಾಗಿದೆ. 

ಪಶ್ಚಿಮ ಬಂಗಾಳದಲ್ಲಿ ಮಮತಾ ಅವರನ್ನು ಅಧಿಕಾರದಿಂದ ಇಳಿಸಲು ಬಿಜೆಪಿ ಭಾರಿ ಕಾರ್ಯತಂತ್ರ ಹೆಣೆಯುತ್ತಿದೆ. ಜೆಡಿಯು ಮತ್ತು ಬಿಜೆಪಿ ನಡುವೆ ಮೈತ್ರಿ ಇದೆ. ಹಾಗಾಗಿ, ಜೆಡಿಯು ಉಪಾಧ್ಯಕ್ಷರಾಗಿರುವ ಪ್ರಶಾಂತ್‌ ಅವರು ಟಿಎಂಸಿ ಪರವಾಗಿ ಕೆಲಸ ಮಾಡಲು ಒಪ್ಪಂದ ಮಾಡಿಕೊಂಡಿದ್ದು ಚರ್ಚೆಗೆ ಕಾರಣವಾಗಿತ್ತು. 

ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿಯು ಪಕ್ಷದ ಅಧ್ಯಕ್ಷ ನಿತೀಶ್‌ ಕುಮಾರ್ ನೇತೃತ್ವದಲ್ಲಿ ಭಾನುವಾರ ನಡೆಯಿತು. ಕಾರ್ಯಕಾರಿಣಿಯಲ್ಲಿ ಪ್ರಶಾಂತ್‌ ಭಾಗವಹಿಸಿದ್ದರು.

ಈ ಬಗ್ಗೆ ಮಾತನಾಡಿದ ನಿತೀಶ್‌ ಅವರು, ‘ಪ್ರಶಾಂತ್‌ ಅವರ ಸಂಸ್ಥೆ ವಿವಿಧ ರಾಜಕೀಯ ಪಕ್ಷಗಳಿಗಾಗಿ ವೃತ್ತಿಪರವಾಗಿ ಕೆಲಸ ಮಾಡುತ್ತಿದೆ. ಜೆಡಿಯುಗೂ ಆ ಸಂಘಟನೆಗೂ ಯಾವುದೇ ಸಂಬಂಧವಿಲ್ಲ’ ಎಂದು ನಿತೀಶ್‌ ಸ್ಪಷ್ಟಪಡಿಸಿದರು. ಅಷ್ಟಲ್ಲದೆ, ‘ಮಮತಾ ಬ್ಯಾನರ್ಜಿ ಜೊತೆ ಸೇರಿದಾಗ ಪ್ರಶಾಂತ್‌ ಅವರತ್ತ ಬೆರಳು ತೋರಿಸುತ್ತಿದ್ದಾರೆ. ಆದರೆ, ಇದೇ ಪ್ರಶಾಂತ್‌ ಆಂಧ್ರದಲ್ಲಿ ಜಗನ್‌ಮೋಹನ್‌ ರೆಡ್ಡಿ ಜೊತೆಗೂಡಿ ಕೆಲಸ ಮಾಡಿದಾಗ ಈ ಪ್ರಶ್ನೆಯನ್ನು ಏಕೆ ಎತ್ತಲಿಲ್ಲ’ ಎಂದು ಕೇಳಿದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟದಲ್ಲಿ ಜೆಡಿಯು ಪ್ರಾತಿನಿಧ್ಯಕ್ಕೆ ಸಂಬಂಧಿಸಿ ವಿವಾದ ಉಂಟಾಗಿತ್ತು. ಮಿತ್ರಪಕ್ಷಗಳಿಗೆ ಸಂಪುಟದಲ್ಲಿ ಒಂದು ಸ್ಥಾನ ಮಾತ್ರ ಎಂಬ ನಿರ್ಧಾರವನ್ನು ಬಿಜೆಪಿ ಕೈಗೊಂಡಿತ್ತು. ಆದರೆ, ಇದಕ್ಕೆ ಜೆಡಿಯು ಆಕ್ಷೇಪ ವ್ಯಕ್ತಪಡಿಸಿ ಸಂಪುಟ ಸೇರಲು ನಿರಾಕರಿಸಿತ್ತು. ನಿತೀಶ್‌ ಅವರ ಈ ಅತೃಪ್ತಿ ಶಮನವಾಗಿಲ್ಲ ಎಂಬುದನ್ನು ಕಾರ್ಯಕಾರಿಣಿ ಕೂಡ ದೃಢಪಡಿಸಿದೆ. 

‘ಬಿಜೆಪಿ ಜೊತೆಗಿನ ಚುನಾವಣಾ ಮೈತ್ರಿ ಬಿಹಾರಕ್ಕಷ್ಟೇ ಸೀಮಿತ’ ಎಂದು ಜೆಡಿಯು ಸ್ಪಷ್ಟಪಡಿಸಿದೆ. ಹರಿಯಾಣ, ಜಮ್ಮು–ಕಾಶ್ಮೀರ, ದೆಹಲಿ ಮತ್ತು ಜಾರ್ಖಂಡ್‌ನಲ್ಲಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದೂ ಸ್ಪಷ್ಟಪಡಿಸಿದೆ.

‘ಕೇಂದ್ರ ಸಂಪುಟವನ್ನು ಜೆಡಿಯು ಸೇರುವುದು ಮುಗಿದ ಅಧ್ಯಾಯ’ ಎಂದೂ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ತೀರ್ಮಾನಿಸಿತು. ಬಿಜೆಪಿಯ ಹಿರಿಯ ಮುಖಂಡರ ಗಮನಕ್ಕೂ ಇದನ್ನು ತಂದಿದ್ದೇವೆ ಎಂದು ನಿತೀಶ್‌ ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 6

  Angry

Comments:

0 comments

Write the first review for this !