ಶನಿವಾರ, ಆಗಸ್ಟ್ 8, 2020
23 °C

ಒಡಲು ತುಂಬಿಸಿಕೊಳ್ಳಲು 19 ಕೆರೆಗಳು ಸಜ್ಜು

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 19 ಕೆರೆಗಳು ಈ ಬಾರಿಯ ಮಳೆಗಾಲದಲ್ಲಿ ಒಡಲು ತುಂಬಿಕೊಳ್ಳಲು ಸಜ್ಜಾಗಿವೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಸುಮಾರು 14 ಕೆರೆಗಳಿಗೆ ಮಳೆನೀರು ಹರಿದು ಬಂದಿದೆ. 

ಪಾಲಿಕೆಯ ಕೆರೆ ಅಭಿವೃದ್ಧಿ ವಿಭಾಗವು 2016–17 ಹಾಗೂ 2018–19ನೇ ಸಾಲಿನಲ್ಲಿ ₹ 106 ಕೋಟಿ ವೆಚ್ಚದಲ್ಲಿ 19 ಕೆರೆಗಳ ಅಭಿವೃದ್ಧಿ ಕಾಮಗಾರಿ ಕೈಗೊಂಡಿತ್ತು.

‘ಕೆರೆಗೆ ಒಳಚರಂಡಿ ನೀರು ಸೇರದಂತೆ ತಡೆಯುವುದು ಹಾಗೂ ಮಳೆ ನೀರಿನಿಂದಲೇ ಜಲಮೂಲ ಭರ್ತಿಯಾಗುವಂತೆ ನೋಡಿಕೊಳ್ಳುವುದು ನಮ್ಮ ಮುಖ್ಯ ಉದ್ದೇಶವಾಗಿತ್ತು. ಒಳಚರಂಡಿ ಸಂಪರ್ಕಕ್ಕೆ ಪ್ರತ್ಯೇಕ ಕೊಳವೆ ಅಳವಡಿಸುವ, ಕೆರೆ ಹೂಳೆತ್ತುವ ಹಾಗೂ ದಂಡೆಗಳನ್ನು ಬಲಪಡಿಸುವ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಂಡಿದ್ದೇವೆ. 19 ಕೆರೆಗಳ ಅಭಿವೃದ್ಧಿ ಕಾರ್ಯವೂ ಬಹುತೇಕ ಪೂರ್ಣಗೊಂಡಿದೆ’ ಎಂದು ಪಾಲಿಕೆಯ ಕೆರೆ ಅಭಿವೃದ್ಧಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ಪಿ.ಜಗನ್ನಾಥ ರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರದ ಕೆರೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸುತ್ತಿದ್ದೇವೆ. ನಗರೋತ್ಥಾನ ಯೋಜನೆಯಡಿ 2017–18ನೇ ಸಾಲಿನಲ್ಲಿ ಮಂಜೂರಾದ ಅನುದಾನದಲ್ಲಿ ಕೈಗೊಂಡ ಕೆರೆ ಅಭಿವೃದ್ಧಿ ಕಾರ್ಯ ಅಂತಿಮ ಹಂತದಲ್ಲಿವೆ. ಮುಂಗಾರು ಶುರುವಾಗುವ ಮುನ್ನವೇ ಕಾಮಗಾರಿ ಪೂರ್ಣಗೊಳಿಸಲು ಯೋಜಿಸಿದ್ದೆವು. 19 ಕೆರೆಗಳೂ ಮಳೆ ನೀರನ್ನು ತುಂಬಿಕೊಳ್ಳಲು ಸಜ್ಜಾಗಿವೆ’ ಎಂದು ವಿವರಿಸಿದರು.

‘ಗರುಡಾಚಾರ್‌ ಪಾಳ್ಯ, ಇಬ್ಬಲೂರು, ದೇವರಬೀಸನಹಳ್ಳಿ, ಹೊರಮಾವು– ಅಗರ, ಬಾಣಸವಾಡಿ, ಬೆನ್ನಿಗಾನಹಳ್ಳಿ, ವಿಭೂತಿಪುರ, ಬಾಗಲಗುಂಟೆ, ಸಾದರಮಂಗಲ, ಯಲಚೇನಹಳ್ಳಿ, ಚುಂಚಘಟ್ಟ, ಪಣತ್ತೂರು, ಗೊಟ್ಟಿಗೆರೆ ಹಾಗೂ ಕಾಳೇನ ಅಗ್ರಹಾರ ಕೆರೆಗಳಿಗೆ ಈಗಾಗಲೇ ನೀರು ಹರಿದು ಬಂದಿದೆ’ ಎಂದರು.

ಈ ಕೆರೆಗಳ ಬಳಿ ವಾಯುವಿಹಾರ ಪಥ, ಉದ್ಯಾನ ಅಭಿವೃದ್ಧಿ ಕಾರ್ಯಗಳನ್ನು ಪಾಲಿಕೆ ನಂತರದ ಹಂತ
ಗಳಲ್ಲಿ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು