ಪ್ರತಿಭಟನೆ: ನೂರಾರು ರೈತರ ಬಂಧನ 

ಭಾನುವಾರ, ಜೂನ್ 16, 2019
32 °C
ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿಗೆ ವಿರೋಧ

ಪ್ರತಿಭಟನೆ: ನೂರಾರು ರೈತರ ಬಂಧನ 

Published:
Updated:
Prajavani

ದೇವನಹಳ್ಳಿ: ರಾಜ್ಯ ಸರ್ಕಾರದ ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ಕ್ರಮವನ್ನು ಖಂಡಿಸಿ ರಸ್ತೆ ತಡೆ ನಡೆಸಿದ ನೂರಾರು ರೈತರನ್ನು ಪೊಲೀಸರು ಬಂಧಿಸಿದರು.

ರೈತ ಸಂಘ ಮತ್ತು ಪ್ರಗತಿ ಪರ ಸಂಘಟನೆಗಳು ಕರೆ ನೀಡಿದ್ದ ಬಂದ್‌ಗೆ ಬೆಳಿಗ್ಗೆ 9 ರಿಂದ ಜಿಲ್ಲೆಯ ನಾಲ್ಕು ತಾಲ್ಲೂಕಿನ ರೈತರು ಬಂದು ಪ್ರವಾಸಿ ಮಂದಿರದ ಬಳಿ ಜಮಾಯಿಸಿದರು. ಬೆಳಿಗ್ಗೆ 11ಕ್ಕೆ ಹೊಸ ಬಸ್ ನಿಲ್ದಾಣದಲ್ಲಿ ಮತ್ತಷ್ಟು ರೈತರು ಸೇರಿ ಪ್ರತಿಭಟನೆ ನಡೆಸಿದರು. 

ಪರಿಣಾಮ ಬಸ್ ನಿಲ್ದಾಣದ ಇಡಿ ಪ್ರದೇಶದಲ್ಲಿ ಸಂಚಾರ ಅಸ್ತವ್ಯಸ್ತವಾಯಿತು. ಇದನ್ನರಿತ ಹಿರಿಯ ಪೊಲೀಸ್ ಅಧಿಕಾರಿಗಳು ಅಲ್ಲಿ ಪ್ರತಿಭಟನೆ ನಡೆಸದಂತೆ ಕೋರಿದರು. ಕೊನೆಗೆ ರೈತರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇರಿ ಪ್ರತಿಭಟನೆ ನಡೆಸತೊಡಗಿದರು. ಪೊಲೀಸರು ಮತ್ತು ಸರ್ಕಾರದ ವಿರುದ್ಧ ಘೊಷಣೆ ಕೂಗಿದರು. ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು.

ಪರಿಸ್ಥಿತಿಯ ಗಂಭೀರತೆಯ ಬಗ್ಗೆ ಚರ್ಚಿಸುತ್ತಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ರಸ್ತೆ ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರೂ ರೈತರು ಕಿವಿಗೊಡಲಿಲ್ಲ. 

ಪೊಲೀಸರು ಹಸಿರು ಸೇನೆ ಜಿಲ್ಲಾ ಸಂಚಾಲಕ ಹರೀಶ್, ರೈತ ಸಂಘ ರಾಜ್ಯ ಘಟಕ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ಸೇರಿದಂತೆ ಆನೇಕ ರೈತರನ್ನು ಬಂಧಿಸಿ ನಾಲ್ಕು ಬಸ್‌ಗಳಲ್ಲಿ ಬೇರೆಡೆ ಕರೆದೊಯ್ದುರು, ನಂತರ ಬಂದ ರೈತ ಸಂಘ ರಾಜ್ಯ ಘಟಕ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಬಂಧನದಿಂದ ಹೊರಗುಳಿದ್ದ ಕೆಲ ರೈತರೊಂದಿಗೆ ಮಾಹಿತಿ ಪಡೆದು ತೆರಳಿದರು.

ಪ್ರತಿಭಟನೆಗೆ ಮೊದಲು ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಹಸಿರು ಸೇನೆ ಜಿಲ್ಲಾ ಘಟಕ ಸಂಚಾಲಕ ಕೆ.ಎಸ್.ಹರೀಶ್, ಕೇಂದ್ರದಲ್ಲಿ ಆಡಳಿತ ನಡೆಸಿದ್ದ ಯು.ಪಿ.ಎ ಸರ್ಕಾರ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಭೂ ಸ್ವಾಧೀನ ಕಾಯ್ದೆಗೆ ತಿದ್ದು ಪಡಿ ತಂದಿತ್ತು. ಭೂಸ್ವಾಧೀನಕ್ಕೆ ಒಳಗಾಗುವ ರೈತನಿಗೆ ಮಾರುಕಟ್ಟೆ ಮೌಲ್ಯದ ನಾಲ್ಕು ಪಟ್ಟು ಪರಿಹಾರ ನೀಡುವಂತೆ ಕಾಯ್ದೆಗೆ ತಿದ್ದುಪಡಿ ಮಾಡಿ ರೈತರ ಒಪ್ಪಿಗೆ ಇಲ್ಲದೆ ಸ್ವಾಧೀನಕ್ಕೆ ಮುಂದಾಗಬಾರದು ಎಂದು ತಿಳಿಸಿತ್ತು. ನೈಸ್‌ ರಸ್ತೆಯ ಮಾರ್ಗ ಕೆಂಗೇರಿಯಿಂದ ನಂಜನಗೂಡುವರೆಗೆ ರಸ್ತೆಯ ಇಕ್ಕೆಲೆಗಳಲ್ಲಿರುವ ಅಮಾಯಕ ರೈತರ ಭೂಮಿಯನ್ನು ಮಾರುಕಟ್ಟೆ ಮೌಲ್ಯದ ಒಂದು ಪಟ್ಟು ಪರಿಹಾರ ನೀಡಿ ಕಬಳಿಸುವ ಯತ್ನದ ಪ್ರಮುಖ ಒಂದು ಭಾಗವೇ ರಾಜ್ಯ ಸರ್ಕಾರದ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ಉದ್ದೇಶವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಡೀ ಸರ್ಕಾರದಲ್ಲಿನ ಆಡಳಿತ ಮತ್ತು ವಿರೋಧ ಪಕ್ಷಗಳು ಬಂಡವಾಳ ಶಾಹಿಗಳಿಗೆ ನೇರವಾಗಿ ಬೆಂಬಲಿಸುತ್ತಿವೆ. ರಾಜ್ಯ ಸರ್ಕಾರ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡುವ ಸಂಬಂಧ ಚರ್ಚೆ ನಡೆದಾಗ ವಿರೋಧ ಪಕ್ಷದ ಮುಖಂಡರು ತಮಗೂ ಇದಕ್ಕೂ ಸಂಬಂಧವಿಲ್ಲದಂತೆ ಸದನದಿಂದ ಹೊರನಡೆಯುತ್ತಾರೆ ಎಂದರೆ ಇಲ್ಲಿ ಯಾರಿಗೆ ರೈತರ ಬಗ್ಗೆ ಇದೆ ಕಾಳಜಿ ಇದೆ. ನೈಸ್ ಕಂಪನಿಗೂ ಒಂದೆ ತಿದ್ದು ಪಡಿ ಇಡಿ ರಾಜ್ಯಕ್ಕೆ ಒಂದೇ ತಿದ್ದುಪಡಿ ಕಾಯ್ದೆ ಲಕ್ಷಾಂತರ ಕೋಟಿ ರೂಪಾಯಿ ಮೌಲ್ಯದ ರೈತರ ಜಮೀನು ಕಬಳಿಸುವ ಪ್ರಯತ್ನ ನಡೆದಿದೆ ಎಂದು ಹರಿಹಾಯ್ದರು.

ರೈತ ಸಂಘ ರಾಜ್ಯ ಘಟಕ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ಮಾತನಾಡಿ, ರಾಜ್ಯದಲ್ಲಿ ಸರ್ಕಾರ ಗಾದಿಗೆ ಗುದ್ದಾಟ, ಹೇಳಿಕೆ ಪ್ರತಿಹೇಳಿಕೆ, ಆಪರೇಷನ್ ಇಡೀ ವರ್ಷ ಇದೇ ಕತೆಯಾಗಿದೆ. ಕುಡಿಯುವ ನೀರು, ಜನ ಜಾನುವಾರು ಸ್ಥಿತಿಗತಿ, ಬರ ಪರಿಹಾರ ಯಾವುದರ ಬಗ್ಗೆಯು ಆಸಕ್ತಿ ತೊರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘ ಜಿಲ್ಲಾ ಘಟಕ ಅಧ್ಯಕ್ಷ ಕೆಂಚೇಗೌಡ, ತಾಲ್ಲೂಕು ಘಟಕ ಅಧ್ಯಕ್ಷ ಗಾರೆ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ರಮೇಶ್, ಕಸಬಾ ಹೋಬಳಿ ಘಟಕ ಅಧ್ಯಕ್ಷ ಮುನಿನಾರಾಯಣಪ್ಪ, ಕುಂದಾಣ ಹೋಬಳಿ ಘಟಕ ಅಧ್ಯಕ್ಷ ಕೃಷ್ಣಪ್ಪ, ರೈತ ಮುಖಂಡ ಸಿದ್ದಾರ್ಥ ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !