ಕಿತ್ತ ಗಿಡದೊಂದಿಗೆ ಚಾಲಕನ ಪ್ರತಿಭಟನೆ

ಭಾನುವಾರ, ಜೂನ್ 16, 2019
22 °C
ನಗರೋತ್ಥಾನ ಕಾಮಗಾರಿಗಾಗಿ ನಗರದ ಕೆಳಗಿನ ತೋಟ ಪ್ರದೇಶದಲ್ಲಿ ಗಿಡಗಳನ್ನು ಕಿತ್ತು ಹಾಕಿದ ಗುತ್ತಿಗೆದಾರ

ಕಿತ್ತ ಗಿಡದೊಂದಿಗೆ ಚಾಲಕನ ಪ್ರತಿಭಟನೆ

Published:
Updated:
Prajavani

ಚಿಕ್ಕಬಳ್ಳಾಪುರ: ನಗರದ ಕೆಳಗಿನ ತೋಟ ಪ್ರದೇಶದಲ್ಲಿ ನಗರೋತ್ಥಾನ ಕಾಮಗಾರಿಗಾಗಿ ರಸ್ತೆ ಬದಿಯ ಗಿಡಗಳನ್ನು ಕಿತ್ತು ಹಾಕಿದ್ದನ್ನು ಖಂಡಿಸಿ, ಪರಿಸರ ಪ್ರೇಮಿ, ಆಟೊ ಚಾಲಕ ಸುಭಾನ್ ಅವರು ಗುತ್ತಿಗೆದಾರರು ಕಿತ್ತು ಹಾಕಿದ ಗಿಡಗಳನ್ನು ಆಟೊ ಮೇಲೆ ಕಟ್ಟಿಕೊಂಡು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಆಟೊ ಮೇಲೆ ‘ಕೊಲ್ಲಬೇಡಿ ಮರಗಳನ್ನು’ ಎಂಬ ಫಲಕ ಅಂಟಿಸಿಕೊಂಡು ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸಿದ ಸುಭಾನ್ ಅವರು ಜಿಲ್ಲಾಡಳಿತ ಭವನದ ಎದುರು ಕೆಲ ಹೊತ್ತು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲು ಮುಂದಾದರು.

ಈ ವೇಳೆ ಜಿಲ್ಲಾಧಿಕಾರಿ ಅವರು ಕಚೇರಿಯಲ್ಲಿ ಕಚೇರಿಯಲ್ಲಿ ಇರದ ಕಾರಣ ಉಪವಿಭಾಗಾಧಿಕಾರಿ ಶಿವಸ್ವಾಮಿ ಅವರನ್ನು ಕಂಡು ನಗರದಲ್ಲಿ ಮರಗಳನ್ನು ಕಡಿಯುವುದು ತಡೆಗಟ್ಟಲು ಕ್ರಮಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು.

ಇದೇ ವೇಳೆ ಸ್ಥಳದಲ್ಲಿದ್ದ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ನಟರಾಜ್ ಅವರು ನಗರಸಭೆ ಆಯುಕ್ತ ಉಮಾಕಾಂತ್ ಅವರಿಗೆ ಕರೆ ಮಾಡಿ ಯಾವುದೇ ಕಾಮಗಾರಿ ಗಿಡ, ಮರಗಳನ್ನು ತೆರವುಗೊಳಿಸದಂತೆ ಸೂಚನೆ ನೀಡಿದರು.

ಈ ವೇಳೆ ಮಾತನಾಡಿದ ಸುಭಾನ್, ‘ನಮ್ಮದು ಮೊದಲೇ ಬಯಲು ಸೀಮೆ ಪ್ರದೇಶ. ಮಳೆ ಕೊರತೆಯಿಂದ ಅನೇಕ ವರ್ಷಗಳಿಂದ ಬರಗಾಲ ಅನುಭವಿಸುತ್ತಿದ್ದೇವೆ. ಪರಿಸರ ಅಸಮತೋಲನದಿಂದ ರೋಗರುಜಿನಗಳು ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ಗಿಡಗಳನ್ನು ನೆಡುವ ಬದಲು ಅಭಿವೃದ್ಧಿಯ ನೆಪದಲ್ಲಿ ಮರಗಳನ್ನು ಕಡಿದು ಹಾಕುವುದು ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.

‘ನಾವು ಅಭಿವೃದ್ಧಿಯ ವಿರೋಧಿಗಳಲ್ಲ. ಆದರೆ ಅದರ ನೆಪದಲ್ಲಿ ಮರಗಳನ್ನು ಕಡಿದು ಹಾಕುವುದು ನಾವು ಸಹಿಸುವುದಿಲ್ಲ. ಮರಗಳು ಕಾಮಗಾರಿಗಳಿಗೆ ಅಡ್ಡಿಯಾದರೆ ವಿದೇಶಗಳ ಮಾದರಿಯಲ್ಲಿ ಯಂತ್ರಗಳನ್ನು ಬಳಸಿ ಗಿಡ, ಮರಗಳನ್ನು ಕಿತ್ತು ಸ್ಥಳಾಂತರಿಸಿ ಬೇರೆಡೆ ಬೆಳೆಸುವ ವ್ಯವಸ್ಥೆ ಕಡ್ಡಾಯಗೊಳಿಸಬೇಕು. ಇತ್ತೀಚೆಗೆ ಅಂತಹ ಪ್ರಯೋಗ ಸಮೀಪದ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನಡೆಸಲಾಗಿದೆ. ಅಂತಹ ಯಂತ್ರವನ್ನು ಜಿಲ್ಲಾಡಳಿತ ಕೂಡ ಖರೀದಿಸಬೇಕು’ ಎಂದು ಹೇಳಿದರು.

ಉಪವಿಭಾಗಾಧಿಕಾರಿ ಶಿವಸ್ವಾಮಿ ಮಾತನಾಡಿ, ‘ಇದೊಂದು ಅನಿರೀಕ್ಷಿತ ಘಟನೆ. ಇದು ನಡೆಯಬಾರದಿತ್ತು. ನಾವು ಇಡೀ ದೇಶದಾದ್ಯಂತ ಪರಿಸರ ದಿನಾಚರಣೆ ಭಾಗವಾಗಿ ಪರಿಸರಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ನೆಟ್ಟು ಪೋಷಿಸಿದ ಮರ ಕಿತ್ತು ಹಾಕಿರುವುದು ಬೇಸರದ ಸಂಗತಿ. ಕಿತ್ತಿರುವ ಈ ಮರವನ್ನು ಪುನಃ ನೆಟ್ಟು ಸಂರಕ್ಷಿಸಲು ಕ್ರಮಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಅವರ ಸರ್ಕಾರಿ ನಿವಾಸದ ಆವರಣದಲ್ಲಿ ಶಿವಸ್ವಾಮಿ ಅವರು ಸುಭಾನ್‌ ಅವರು ಆಟೊದಲ್ಲಿ ತಂದಿದ್ದ ಗಿಡವನ್ನು ನಾಟಿ ಮಾಡಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !