ನೆರೆಹೊರೆಯ ದೇಶಗಳ ಜೊತೆಗೆ ಬಾಂಧವ್ಯ ವೃದ್ಧಿಗೆ ಮಹತ್ವದ ಕ್ರಮ

ಬುಧವಾರ, ಜೂನ್ 26, 2019
29 °C

ನೆರೆಹೊರೆಯ ದೇಶಗಳ ಜೊತೆಗೆ ಬಾಂಧವ್ಯ ವೃದ್ಧಿಗೆ ಮಹತ್ವದ ಕ್ರಮ

Published:
Updated:
Prajavani

ಮಹಾಚುನಾವಣೆಯಲ್ಲಿ ಜಯ ಗಳಿಸಿ ಎರಡನೇ ಬಾರಿಗೆ ಪ್ರಧಾನಿಯಾದ ಬೆನ್ನಲ್ಲೇ ನರೇಂದ್ರ ಮೋದಿಯವರ ವಿದೇಶ ಪ್ರವಾಸ ಶುರುವಾಗಿದೆ. ಪ್ರಧಾನಿಯಾಗಿ ಮೊದಲ ಐದು ವರ್ಷಗಳ ಅವಧಿಯಲ್ಲಿ ಒಟ್ಟು 92 ದೇಶಗಳಿಗೆ ಅವರು ಭೇಟಿ ಕೊಟ್ಟಿದ್ದರು. ಈಗ ನೆರೆಯ ಮಾಲ್ಡೀವ್ಸ್‌ ಮತ್ತು ಶ್ರೀಲಂಕಾಗೆ ಭೇಟಿ ನೀಡಿ ಮರಳಿದ್ದಾರೆ. ನೆರೆಯ ದೇಶ ಎಷ್ಟೇ ಪುಟ್ಟದಾಗಿದ್ದರೂ, ಅದರ ಜೊತೆಗೆ ವ್ಯಾಪಾರ ಮತ್ತು ರಕ್ಷಣಾ ಮೈತ್ರಿ ಸಾಧಿಸುವುದು ಈ ಕಾಲದ ಅಗತ್ಯ ಎನ್ನುವುದು ಭಾರತಕ್ಕೆ ಅರಿವಾದಂತಿದೆ. ಮಾಲ್ಡೀವ್ಸ್‌ ಭೇಟಿಯ ವೇಳೆ ಅಲ್ಲಿಯ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್‌ ಸಾಲಿಹ್‌ ಜೊತೆಗೆ ಉಭಯದೇಶಗಳ ನಡುವಣ ಸಹಕಾರವನ್ನು ಬಲಗೊಳಿಸಲು ಒಟ್ಟು ಆರು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಮುಖ್ಯವಾಗಿ, ರಕ್ಷಣೆ ಮತ್ತು ಸಾಗರ ಭದ್ರತೆಗೆ ಸಂಬಂಧಿಸಿ ಈ ಒಪ್ಪಂದಗಳಿವೆ. ಕರಾವಳಿ ಕಣ್ಗಾವಲು ರೇಡಾರ್‌ ವ್ಯವಸ್ಥೆ ಮತ್ತು ಮಾಲ್ಡೀವ್ಸ್‌ ರಕ್ಷಣಾ ಪಡೆಗಳಿಗೆ ಸಂಯುಕ್ತ ತರಬೇತಿ ಕೇಂದ್ರವನ್ನು ಮೋದಿ ಮತ್ತು ಸಾಲಿಹ್‌ ಅವರು ಜೊತೆಯಾಗಿ ಉದ್ಘಾಟಿಸಿದ್ದಾರೆ. ಈ ಭೇಟಿಯ ವೇಳೆ ಭಾರತದ ಕ್ರಿಕೆಟ್‌ ರಾಜತಾಂತ್ರಿಕತೆಯೂ ಎದ್ದು ಕಂಡಿದೆ. ಮಾಲ್ಡೀವ್ಸ್‌ನಲ್ಲಿ ಕ್ರಿಕೆಟ್‌ ಅಭಿವೃದ್ಧಿಗೆ ನೆರವು ನೀಡುವುದಾಗಿ ಮೋದಿ ಹೇಳಿದ್ದಾರೆ. ಕ್ರಿಕೆಟ್‌ ಮಾತ್ರವಲ್ಲದೆ, ಕೊಚ್ಚಿಯಿಂದ ಮಾಲ್ಡೀವ್ಸ್‌ಗೆ ಪ್ರಯಾಣಿಕರ ನೌಕೆಯನ್ನು ಆರಂಭಿಸುವ ಮೂಲಕ ಉಭಯದೇಶಗಳ ನಡುವಣ ಸೌಹಾರ್ದ ಹೆಚ್ಚಿಸಲೂ ಒಪ್ಪಂದ ಮಾಡಿಕೊಳ್ಳಲಾಗಿದೆ. ಮಾಲ್ಡೀವ್ಸ್‌ನಲ್ಲಿ ಹಿಂದಿನ ಅಧ್ಯಕ್ಷ ಅಬ್ದುಲ್ಲಾ ಯಾಮಿನ್‌ ಜೊತೆಗೆ ಚೀನಾ ಸರ್ಕಾರವು ವಾಣಿಜ್ಯ ಸಹಕಾರ ಒಪ್ಪಂದಗಳಿಗೆ ಒತ್ತು ನೀಡಿತ್ತು. ಈಗ ಅಲ್ಲಿ ಬದಲಾದ ಸರ್ಕಾರದ ಜೊತೆಗೆ ನಿಕಟಸ್ನೇಹ ಸಾಧಿಸಲು ಇರುವ ಸೂಕ್ತ ವಾತಾವರಣವನ್ನು ಮೋದಿಯವರು ಸಮರ್ಥವಾಗಿಯೇ ಬಳಸಿಕೊಂಡಿದ್ದಾರೆ.

ಇತ್ತೀಚೆಗೆ ನಡೆದ ಬಾಂಬ್‌ ಸ್ಫೋಟದ ಕಾರಣದಿಂದಾಗಿ ಪ್ರಧಾನಿ ಮೋದಿಯವರ ಶ್ರೀಲಂಕಾ ಪ್ರವಾಸಕ್ಕೆ ಹೆಚ್ಚಿನ ಮಹತ್ವವಿದೆ. ದಕ್ಷಿಣ ಏಷ್ಯಾದಲ್ಲಿ ಭಯೋತ್ಪಾದನೆಗೆ ಕಡಿವಾಣ ಹಾಕಲು ನೆರೆಹೊರೆ ದೇಶಗಳ ಜೊತೆಗೆ ಸಂಘಟಿತ ಪ್ರಯತ್ನ ಕೈಗೊಳ್ಳಬೇಕೆಂಬ ಭಾರತದ ಇರಾದೆ ಸ್ಪಷ್ಟವಾಗಿದೆ. ಭಯೋತ್ಪಾದನೆಗೆ ಸರ್ಕಾರಗಳೇ ಕುಮ್ಮಕ್ಕು ಕೊಡುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಮೋದಿ, ಪಾಕಿಸ್ತಾನದ ಹೆಸರು ಹೇಳದೆ, ಭಯೋತ್ಪಾದನೆಯನ್ನು ಸಂಘಟಿತವಾಗಿ ಎದುರಿಸುವ ಅಗತ್ಯವನ್ನು ಶ್ರೀಲಂಕಾ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಈಸ್ಟರ್‌ ಹಬ್ಬದಂದು ಬಾಂಬ್‌ ಸ್ಫೋಟ ನಡೆದ ಕ್ಯಾಥೊಲಿಕ್‌ ಚರ್ಚ್‌ಗೆ ಭೇಟಿ ಕೊಟ್ಟು, ಮೃತರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಿರುವುದು ಈ ನಿಟ್ಟಿನಲ್ಲಿ ಸಮಯೋಚಿತ ನಡೆ. ಶ್ರೀಲಂಕಾದಲ್ಲಿ ರಾಜಕೀಯ ಅಸ್ಥಿರತೆಯ ವಾತಾವರಣವಿದ್ದರೂ ಅದನ್ನು ಭಾರತ ನಿರ್ಲಕ್ಷಿಸುವಂತಿಲ್ಲ. ಹಾಗಾಗಿಯೇ ಮೋದಿಯವರು ಅಲ್ಲಿನ ಅಧ್ಯಕ್ಷರು, ಪ್ರಧಾನಿ ಮತ್ತು ವಿರೋಧ ಪಕ್ಷದ ನಾಯಕರ ಜೊತೆಗೆ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ದಕ್ಷಿಣ ಏಷ್ಯಾದಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಭಾವವನ್ನು ತಗ್ಗಿಸುವ ಇರಾದೆಯೂ ಮೋದಿಯವರ ಈ ಪ್ರವಾಸದಲ್ಲಿ ಅಂತರ್ಗತವಾಗಿದೆ. ಶ್ರೀಲಂಕಾ ಮತ್ತು ಮಾಲ್ಡೀವ್ಸ್‌ನಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚೀನಾ ಸರ್ಕಾರವು ಈಗಾಗಲೇ ಬಹಳಷ್ಟು ಹೂಡಿಕೆ ನಡೆಸಿದ್ದು, ಅದರಲ್ಲಿ ಮಿಲಿಟರಿ ಒಪ್ಪಂದಗಳೂ ಸೇರಿವೆ. ಈ ಹಿನ್ನೆಲೆಯಲ್ಲಿ ನೆರೆಯ ದೇಶಗಳ ಮೇಲೆ ನಮ್ಮ ಪ್ರಭಾವ ಕುಂಠಿತವಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಬೇಕಿದೆ. ಸಾಗರದ ಮೂಲಕ ವ್ಯಾಪಾರ– ವಹಿವಾಟನ್ನು ವೃದ್ಧಿಸಲು ಕೈಗೊಳ್ಳುವ ಕ್ರಮ, ಪರೋಕ್ಷವಾಗಿ ಮಿಲಿಟರಿ ಬಲವರ್ಧನೆಯ ತಂತ್ರಗಾರಿಕೆಯೂ ಹೌದು. ಜಗತ್ತಿನ ಎರಡು ಶಕ್ತರಾಷ್ಟ್ರಗಳಾದ ಚೀನಾ ಮತ್ತು ಅಮೆರಿಕ ಇಂತಹ ತಂತ್ರಗಾರಿಕೆಯನ್ನು ಜಗತ್ತಿನ ಹಲವು ಸಮುದ್ರತೀರದ ದೇಶಗಳ ಜೊತೆಗೆ ನಡೆಸಿವೆ. ಭಾರತವೂ ಇದರಿಂದ ಕಲಿಯಬೇಕಾದ ಪಾಠಗಳಿವೆ. ಈ ನಿಟ್ಟಿನಲ್ಲಿ ಮೋದಿಯವರು ‘ನೆರೆಹೊರೆ ಮೊದಲು’ ಎನ್ನುವ ನೀತಿಯನ್ನು ಇಟ್ಟುಕೊಂಡಿರುವುದು ಸರಿಯಾಗಿದೆ. ದಕ್ಷಿಣ ಏಷ್ಯಾದಲ್ಲಿ ವ್ಯೂಹಾತ್ಮಕ ರಕ್ಷಣಾ ಬಲವರ್ಧನೆಗೆ ಈ ಎರಡೂ ದೇಶಗಳ ಭೇಟಿ ನೆರವಾಗಲಿದೆ. ಪಾಕಿಸ್ತಾನದ ಜೊತೆಗೆ ಚೀನಾದ ಸೌಹಾರ್ದ ಸಂಬಂಧದ ಹಿನ್ನೆಲೆಯಲ್ಲಿ ಎರಡೂ ದೇಶಗಳ ನಡೆಗಳನ್ನು ಎಚ್ಚರಿಕೆಯಿಂದ ನಿಭಾಯಿಸುವ ಅಗತ್ಯ ಈಗ ಹಿಂದೆಂದಿಗಿಂತ ಹೆಚ್ಚಾಗಿದೆ. ಇವೆಲ್ಲವನ್ನೂ ಲೆಕ್ಕ ಹಾಕಿಯೇ ಮೋದಿಯವರು ತಮ್ಮ ಎರಡನೇ ಅಧಿಕಾರಾವಧಿಯ ವಿದೇಶ ಪ್ರವಾಸಗಳನ್ನು ಯೋಜಿಸಿದಂತಿದೆ. ಒಟ್ಟಾರೆ ಪ್ರಧಾನಿಯವರ ಮೊದಲ ವಿದೇಶ ಪ್ರವಾಸ ಫಲಪ್ರದವಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !