‘ಮೂರ್ಖಪ್ರಭುತ್ವ’ದಲ್ಲಿ ಉಂಡವನೇ ಜಾಣ!

ಬುಧವಾರ, ಜೂನ್ 26, 2019
29 °C
ಈ ಬಾರಿಯ ಚುನಾವಣೆಯಲ್ಲಿನ ಭ್ರಷ್ಟ ವಿದ್ಯಮಾನಗಳತ್ತ ದೃಷ್ಟಿ ಹರಿಸಿದರೆ, ಅವು ದೇಶದ ಪ್ರಜಾಪ್ರಭುತ್ವವನ್ನೇ ಹರಾಜಿಗಿಟ್ಟದ್ದು ಸ್ಪಷ್ಟವಾಗುತ್ತದೆ

‘ಮೂರ್ಖಪ್ರಭುತ್ವ’ದಲ್ಲಿ ಉಂಡವನೇ ಜಾಣ!

Published:
Updated:
Prajavani

ಮೂರು ತಿಂಗಳಿನಿಂದ ಚುನಾವಣೆಯ ದೆವ್ವ ಹೊಕ್ಕ ಮನೆಯಂತಾಗಿದ್ದ ಇಡೀ ಭಾರತ, ಈಗ ಎಣ್ಣೆ ಮಸಾಜು ಮಾಡಿ ಎರೆದು ಮಲಗಿಸಿದ ಸ್ಥಿತಿಗೆ ಬಂದಿದೆ. ಬಹುಮತ ಪಡೆದ ಪಕ್ಷ ಅಧಿಕಾರಕ್ಕೆ ಬಂದು, ಅಲ್ಪಮತದ ಪಕ್ಷಗಳ ಮುಖಗಳು ಮೇಲೆತ್ತದಂತೆ ಆಗಿವೆ. 

ನೋವಿನ ಸಂಗತಿಯೆಂದರೆ, ಆಳುವ ಪಕ್ಷದೆದುರು, ಕೊನೆಗೆ ಪಕ್ಷರಾಜಕೀಯ ಕಾರಣಕ್ಕಾದರೂ ಪ್ರತಿಭಟನೆ ವ್ಯಕ್ತಪಡಿಸಲು ಒಂದು ಪ್ರತಿಪಕ್ಷ ಇಲ್ಲದ ಸ್ಥಿತಿ ದೇಶಕ್ಕೆ ಬಂದಿರುವುದು! ಬಹುಮತವೇ ಪ್ರಜಾಪ್ರಭುತ್ವದ ತಳಹದಿ ಎಂಬ ಆಶಯವೀಗ ಅಪಾಯಕಾರಿ ಘಟ್ಟ ತಲುಪಿರುವುದು ಆತಂಕ ಹುಟ್ಟಿಸುತ್ತಿದೆ. ಏಕೆಂದರೆ ಪ್ರತಿಪಕ್ಷವೇ ಇಲ್ಲದ ರಾಜಕೀಯ ವ್ಯವಸ್ಥೆಯು ನಿರಂಕುಶ ಪ್ರಭುತ್ವಕ್ಕೆ ದಾರಿ ಮಾಡಿಕೊಡುವ ಅಪಾಯ ಖಂಡಿತ ಇದೆ. ಇಂಥ ಸಂದರ್ಭದಲ್ಲಿ ಪಕ್ಷರಾಜಕೀಯದ ಅನಾಹುತಗಳನ್ನು ಪಕ್ಕಕ್ಕಿಟ್ಟು, ಈ ಚುನಾವಣೆಯಲ್ಲಿ ನಡೆದ ಭ್ರಷ್ಟ ವಿದ್ಯಮಾನಗಳತ್ತ ಕಣ್ಣು ಹೊರಳಿಸಿದರೆ, ಅವು ಇಡೀ ದೇಶದ ಪ್ರಜಾಪ್ರಭುತ್ವವನ್ನೇ ಹರಾಜಿಗಿಟ್ಟದ್ದು ಸ್ಪಷ್ಟ
ವಾಗಿ ಗೋಚರಿಸುತ್ತದೆ. ಎಲ್ಲ ಪಕ್ಷಗಳೂ ಬಹುಮತ ಸಾಧಿಸಲು ಎಂಥ ಹೀನ ಹೆಜ್ಜೆ ಇಟ್ಟವೆಂಬುದು ಈಗ ಗುಟ್ಟಾಗಿಲ್ಲ.

2019ರ ಲೋಕಸಭಾ ಚುನಾವಣೆಯು ಜಗತ್ತಿನಲ್ಲಿಯೇ ಅತ್ಯಂತ ‘ದುಬಾರಿ’ ಖರ್ಚಿನ ಎಲೆಕ್ಷನ್ ಎಂದು ಈಗಾಗಲೇ ಸಾಬೀತಾಗಿದೆ. ಈ ಚುನಾವಣೆಯಲ್ಲಿ ಎಲ್ಲ ಪಕ್ಷಗಳೂ ಹರಿಸಿದ ಒಟ್ಟು ಹಣದ ಹೊಳೆ ಅಂದಾಜು ₹ 60 ಸಾವಿರ ಕೋಟಿ. ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್‌ (ಸಿಎಂಎಸ್‌) ಸಮೀಕ್ಷೆಯ ಪ್ರಕಾರ, ಈ ಹಣದಲ್ಲಿ ಶೇ 45ರಷ್ಟು ಬಿಜೆಪಿಯದು ಹಾಗೂ ಶೇ 15ರಿಂದ 20ರಷ್ಟು ಕಾಂಗ್ರೆಸ್ಸಿನದು. ಇದರಲ್ಲಿ ಎಲ್ಲ ಪಕ್ಷಗಳೂ ಮತದಾರರಿಗೆ ಹಂಚಿದ ಒಟ್ಟು ಹಣ ₹ 12 ಸಾವಿರ ಕೋಟಿಯಿಂದ ₹ 15 ಸಾವಿರ ಕೋಟಿ! ಸಿಎಂಎಸ್ ಸಂಸ್ಥೆಯು ‘ಇದು ನೀರ್ಗಲ್ಲಿನ ತುತ್ತ ತುದಿ ಮಾತ್ರ. ನೀರ್ಗಲ್ಲು ಎಷ್ಟು ವಿಸ್ತಾರವಾಗಿದೆ ಮತ್ತು ಆಳಕ್ಕಿದೆ ಎಂಬುದು ಊಹೆಗಷ್ಟೇ ಬಿಟ್ಟ ವಿಚಾರ’ ಎಂಬ ಧ್ವನಿಪೂರ್ಣ ಷರಾ ಬರೆದು, ‘ಇದು ಪ್ರಜಾಪ್ರಭುತ್ವಕ್ಕೆ ಹೇಗೆ ಹಾನಿ ಮಾಡಬಹುದು ಎಂಬುದು ಕಲ್ಪನೆಗೆ ಬಿಟ್ಟ ವಿಚಾರ’ ಎಂದೂ ಹೇಳಿದೆ (ಪ್ರ.ವಾ., ಜೂನ್‌ 4). ‘ರಾಜಕೀಯೋದ್ಯಮ’ದಲ್ಲಿ ₹ 60 ಸಾವಿರ ಕೋಟಿ ಹೂಡಿಕೆ ಮಾಡಿದ ಚುನಾವಣಾ ಸರದಾರರು, ₹ 60 ಲಕ್ಷ ಕೋಟಿ ಲಾಭದ ಕಡೆಗೆ ಕಣ್ಣಿಟ್ಟೇ ಆ ಸಾಗರದಲ್ಲಿ ಧುಮುಕಿರುತ್ತಾರೆ ಎಂಬುದೇನೂ ಗುಟ್ಟಿನ ವಿಷಯವಲ್ಲ.

ಇನ್ನೂ ಭಯಾನಕವೆಂದರೆ, ಈ ಚುನಾವಣೆಯಲ್ಲಿ ಮತದಾರರಿಗೆ ನೀಡಲೆಂದೇ ಅಕ್ರಮವಾಗಿ ಸಾಗಿಸುತ್ತಿದ್ದ ಹಣ, ಮದ್ಯ, ಚಿನ್ನ-ಬೆಳ್ಳಿಯ ಆಭರಣಗಳು ಮತ್ತು ಇತರ ಮಾದಕ ವಸ್ತುಗಳ ಪ್ರಮಾಣ. ಚುನಾವಣಾ ಆಯೋಗವು ಕೆಲವೆಡೆ ಮಾತ್ರ ವಶಪಡಿಸಿಕೊಂಡ ಈ ಎಲ್ಲ ವಸ್ತುಗಳ ಒಟ್ಟು ಮೊತ್ತವೇ ₹ 3,447 ಕೋಟಿ! ಈ ಮೊತ್ತವು ಒಟ್ಟಾರೆ ನಡೆದ ಅಡ್ಡಕಸುಬಿನ ಒಂದೆರಡು ಪ್ರತಿಶತ ಮಾತ್ರ ಇರಬಹುದು. ಕತ್ತಲ ವ್ಯವಹಾರದ ಮೊತ್ತ ಎಷ್ಟಿರಬಹುದೆಂದು ಊಹಿಸಬಹುದು. ಅಚ್ಚರಿಯ ಸಂಗತಿಯೆಂದರೆ, ಇದರಲ್ಲಿ ₹ 524 ಕೋಟಿ ಮೌಲ್ಯದ ಮಾದಕ ವಸ್ತು ಸಿಕ್ಕಿದ್ದು ಗಾಂಧೀಜಿಯ ನಾಡು ಗುಜರಾತಿನಲ್ಲಿ! ಹೆಚ್ಚು ಹಣ ಮತ್ತು ಬಂಗಾರ-ಬೆಳ್ಳಿಯ ಸಾಮಾನುಗಳು ಸಿಕ್ಕಿದ್ದು ತಮಿಳುನಾಡಿನಲ್ಲಿ. ಉಳಿದ ರಾಜ್ಯಗಳ ಸಾಧನೆ ಅವರವರ ಕಳ್ಳಸಾಮರ್ಥ್ಯಕ್ಕೆ ತಕ್ಕಂತಿದೆ. ಕಾಣದ ಹಾಗೆ ನಡೆಸಿದ ಕಳ್ಳರ ವ್ಯವಹಾರದ ಲೆಕ್ಕ ಸಿಗುವುದಾದರೂ ಹೇಗೆ? ಹಾಗಾದರೆ ಇದನ್ನು ‘ನೀತಿ-ಧರ್ಮ ಮಾರಿ, ಮತ ಕೊಂಡ ಪ್ರಜಾಪ್ರಭುತ್ವ’ ಎಂದು ಕರೆದರೆ ತಪ್ಪಾಗುವುದೇ? ಇಂಥ ಪ್ರಜಾಪ್ರಭುತ್ವವು ದೇಶದ ನಾಗರಿಕರಿಗೆ ಆರ್ಥಿಕ, ಸಾಮಾಜಿಕ, ರಾಜಕೀಯ ‘ಸಮಾನತೆ’ ತರಲು, ‘ಭ್ರಷ್ಟಮುಕ್ತ’ ರಾಜಕೀಯ ವ್ಯವಸ್ಥೆಯನ್ನು ನಿರ್ಮಿಸಲು ಸಾಧ್ಯವೇ?

ಜಗತ್ತಿನ ವಿದ್ಯಮಾನಗಳಿಗೆ ಅನುಗುಣವಾಗಿ ಆಕ್ಸ್‌ಫರ್ಡ್ ಶಬ್ದಕೋಶ ಸಮಿತಿಯವರು ತಮ್ಮ ಶಬ್ದಕೋಶದಲ್ಲಿ ಹೊಸ ಶಬ್ದಗಳನ್ನು ಸೇರಿಸುತ್ತಾ ಹೋಗುತ್ತಾರೆ. ಕಳೆದ ವರ್ಷ ಅವರು ಹಾಗೆ ಸೇರಿಸಿದ 1,400 ಶಬ್ದಗಳಲ್ಲಿ ಎಲ್ಲರ ಗಮನ ಸೆಳೆದ ಒಂದು ಶಬ್ದ ‘IDIOCRACY’ (ಮೂರ್ಖಪ್ರಭುತ್ವ) ಎಂಬುದು. ಪ್ರಜಾಪ್ರಭುತ್ವದ ಕಾಲ ಮುಗಿದು ‘ಮೂರ್ಖಪ್ರಭುತ್ವ’ ದಾಪುಗಾಲು ಹಾಕಿ ಬರುತ್ತಿದೆ ಎಂಬ ಜಾಗತಿಕ ಸತ್ಯವನ್ನೇ ಈ ಶಬ್ದ ತುಂಬ ಧ್ವನಿಪೂರ್ಣವಾಗಿ ಸಂಕೇತಿಸುತ್ತದೆ. ಇಲ್ಲಿ ಒಂದು ಗಮನಾರ್ಹ ಅರ್ಥವಿದೆ. ‘ಪ್ರಜಾಪ್ರಭುತ್ವ’ ಶಬ್ದ ನಾಮಪದವಾದರೆ, ‘ಮೂರ್ಖಪ್ರಭುತ್ವ’ವು ಗುಣವಾಚಕ ಶಬ್ದ. ಇಂಥ ಗುಣದ ಪ್ರಭುತ್ವದಲ್ಲಿ ಮೂರ್ಖರದೇ ಮುಖ್ಯ ಪಾತ್ರ. ಹಾಗಾದರೆ ಈ ಮೂರ್ಖರು ಯಾರು? ಖಂಡಿತವಾಗಿಯೂ ಇಲ್ಲಿ ರಾಜಕಾರಣಿಗಳು ಮೂರ್ಖರಲ್ಲ, ಅವರನ್ನು ಆರಿಸಿ ಕಳಿಸುವವರೇ ಮೂರ್ಖರು. ಏಕೆಂದರೆ ಅಂಥ ಭ್ರಷ್ಟ ರಾಜಕಾರಣಿಗಳ ಕಳ್ಳ ಕೆಲಸಗಳನ್ನು ತಿಳಿದೂ, ಅವರು ಚುನಾವಣೆಯ ಸಂದರ್ಭದಲ್ಲಿ ಕೊಡುವ ಬಿಡಿಗಾಸಿನ ಭಿಕ್ಷೆಗೆ ಹಾಗೂ ಸುಳ್ಳು ಆಶ್ವಾಸನೆಗೆ ಮೋಸ ಹೋಗುವ ಮೂರ್ಖರು ಯಾರು? ಪ್ರಜೆಗಳೇ ಅಲ್ಲವೇ? ಅಂದರೆ ಆಕ್ಸ್‌ಫರ್ಡ್ ಸಮಿತಿಯವರು ‘IDIOCRACY’ ಶಬ್ದವನ್ನು ತಮ್ಮ ಶಬ್ದಕೋಶದಲ್ಲಿ ಸೇರಿಸಿದ್ದು ರಾಜಕಾರಣಿಗಳ ಕಾರಣಕ್ಕಲ್ಲ; ಪ್ರಜೆಗಳು ಮೂರ್ಖರಾಗುತ್ತಿದ್ದಾರೆ ಎಂಬುದನ್ನು ಸೂಚಿಸುವುದಕ್ಕಾಗಿ. ಇಲ್ಲೂ ರಾಜಕಾರಣಿಗಳು ಸೇಫ್! ಎಚ್ಚರಗೊಳ್ಳಬೇಕಾಗಿರುವುದು ಮೂರ್ಖರ ಪಟ್ಟ ಕಟ್ಟಿಕೊಳ್ಳುತ್ತಿರುವ ಪ್ರಜೆಗಳೇ ಅಲ್ಲವೇ?

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 25

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !