ನೆನಪುಗಳ ಉಳಿಸಿ ಹೋದ ‘ರಂಗನಾಯಕಿ’

ಸೋಮವಾರ, ಜೂನ್ 24, 2019
26 °C

ನೆನಪುಗಳ ಉಳಿಸಿ ಹೋದ ‘ರಂಗನಾಯಕಿ’

Published:
Updated:
Prajavani

ಇವರ ಹೆಸರು ರಂಗನಾಯಕಮ್ಮ. ಅರ್ಧ ಶತಮಾನಕ್ಕೂ ಮಿಕ್ಕಿ ರಂಗದ ಮೇಲೆ ನಾಯಕಿಯಾಗಿ ಮೆರೆದ ಇವರಿಗೆ ಇದು ಅನ್ವರ್ಥನಾಮ.  ತಂದೆ–ತಾಯಿ ನಿರ್ಮಲ ಎಂದು ಕರೆದಿದ್ದರು. ಎಂಟು ವರ್ಷದ ಬಾಲಕಿ ಸುಬ್ಬಯ್ಯ ನಾಯ್ಡು ಅವರ ನಾಟಕ ಕಂಪೆನಿಯನ್ನು ಬಾಲನಟಿ(ಟ)ಯಾಗಿ ಸೇರಿದಳು. ಬಾಲಕಿಯ ಚುರುಕುತನ, ಬದ್ಧತೆ ಗಮನಿಸಿ ಸುಬ್ಬಯ್ಯ ನಾಯ್ಡು ಅವರೇ, ’ನೀನು ರಂಗದ ಮೇಲೆ ನಾಯಕಿ ಆಗು. ಇನ್ನು ಮುಂದೆ ನಿನ್ನ ಹೆಸರು ರಂಗನಾಯಕಿ’ ಎಂದು ಹರಸಿದರು. 

ಕನ್ನಡದ ಹಲವು ಹೆಸರಾಂತ ನಾಟಕ ಕಂಪನಿಗಳು ಹಾಗೂ ಗ್ರಾಮೀಣ ರಂಗಭೂಮಿಯಲ್ಲಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಎಲ್ಲ ಪಾತ್ರಗಳಲ್ಲೂ ಮನೋಜ್ಞವಾಗಿ ಅಭಿನಯಿಸಿದರು.

1940ರಲ್ಲಿ ಬೆಂಗಳೂರಿನಲ್ಲಿ ಟಿ.ಕೇಶವನ್-ಶಾರದಮ್ಮ ದಂಪತಿಗೆ ಜನಿಸಿದ ನಿರ್ಮಲ ರಂಗ ಪ್ರವೇಶಿಸಿದ್ದು ಸಂಗೀತದ ಮೂಲಕ. ತಂದೆಯೇ ಮೂಲ ಪ್ರೇರಣೆ. ಶಾಲೆಯಲ್ಲಿ ಸಂಗೀತ ಹೇಳಿಕೊಡುತ್ತಿದ್ದ ಕೇಶವನ್ ಪತ್ನಿ ತೀರಿ ಹೋದಮೇಲೆ ಮೂವರು ಮಕ್ಕಳನ್ನು ಕಟ್ಟಿಕೊಂಡು ನಾಟಕ ಕಂಪನಿಗೆ ಹೋದರು. 2–3 ವರ್ಷ ಕಳೆದ ಮೇಲೆ ಮಗನ ವಿದ್ಯಾಭ್ಯಾಸಕ್ಕೆ ಅನುವಾಗಲಿ ಎಂದು ಮತ್ತೆ ಬೆಂಗಳೂರಿಗೆ ವಾಪಸ್ ಬಂದರಾದರೂ, ರಂಗನಾಯಕಮ್ಮ ಮಾತ್ರ ಕಂಪನಿಯಲ್ಲೇ ಉಳಿದರು. ಮುಂದೆ ರಂಗನಾಯಕಮ್ಮನ ತಮ್ಮ ಡಿಂಗ್ರಿ ನಾಗರಾಜ್‌ ನಾಟಕ ಕಂಪೆನಿಗೆ ಮರಳಿದರು. 

ಸುಬ್ಬಯ್ಯ ನಾಯ್ಡು ಕಂಪನಿಯ ಬೇಡರ ಕಣ್ಣಪ್ಪ, ಕೃಷ್ಣಲೀಲೆ, ಭೂಕೈಲಾಸ, ಜಗಜ್ಯೋತಿ ಬಸವೇಶ್ವರ, ಭಕ್ತ ಅಂಬರೀಷ್‌ ಮುಂತಾದ ನಾಟಕಗಳಲ್ಲಿ ಬಾಲ ಪಾತ್ರಗಳಲ್ಲಿ ಅಭಿನಯಿಸಿದ ರಂಗನಾಯಕಮ್ಮ ಒಂದು ವರ್ಷದ ನಂತರ ಆ ಕಂಪನಿ ತೊರೆದು ಗುಬ್ಬಿ ವೀರಣ್ಣ ನಾಟಕ ಕಂಪನಿ ಸೇರಿದರು. ಮುಂದಿನ 25 ವರ್ಷಗಳ ಕಾಲ ಗುಬ್ಬಿ ವೀರಣ್ಣ ಕಂಪನಿಯೇ ಅವರ ವೇದಿಕೆ. ಬಾಲ ಪಾತ್ರಗಳಿಂದ ನಾಯಕಿ, ಖಳನಾಯಕಿ, ತಾಯಿ ಪಾತ್ರದವರೆಗೆ ಎಲ್ಲ ರೀತಿಯ ಪಾತ್ರಗಳಲ್ಲಿ ಅಭಿನಯಿಸಿ ಹೆಸರು ಮಾಡಿದರು. ತಂದೆಯ ಗುರು ಸ್ಥಾನವನ್ನು ಇಲ್ಲಿ ಪಿಟೀಲು ಶಂಕರಯ್ಯ ತುಂಬಿದ್ದರು. ಈ ಮಧ್ಯೆ ನಟ ಹಾಗೂ ಸಂಘಟಕ ಕೆ.ನಂಜಪ್ಪ ಅವರನ್ನು ರಂಗನಾಯಕಮ್ಮ ವರಿಸಿದರು.

ನಟಿಯಾಗಿ ಹೆಸರು ಮಾಡಿದ ಹಲವರು ಕಾಣುವ ದೊಡ್ಡ ಕನಸು ಸ್ವಂತ ನಾಟಕ ಕಂಪನಿ ಮಾಡಬೇಕೆಂಬುದು! ಅದೇ ಆಸೆ ಹೊತ್ತು ಗುಬ್ಬಿ ಕಂಪನಿ ತೊರೆದು ಬಂದ ರಂಗನಾಯಕಮ್ಮ ಪತಿಯೊಂದಿಗೆ ಲೋಕನಾಥ ಮಿತ್ರ ಮಂಡಲಿ ಎಂಬ ನಾಟಕ ಕಂಪನಿ ಶುರು ಮಾಡೇಬಿಟ್ಟರು. ಮದುವೆ ಮಾರ್ಕೆಟ್, ರಾಜಸೂಯ ಯಾಗ, ಬಿಡುಗಡೆ ಮುಂತಾದ ನಾಟಕಗಳ ಪ್ರದರ್ಶನದ ಮೂಲಕ ನಾಲ್ಕಾರು ಕಡೆ ಕ್ಯಾಂಪ್ ಮಾಡಿ ನಷ್ಟದೊಂದಿಗೆ ಎರಡೇ ವರ್ಷಕ್ಕೆ ಮುಚ್ಚಬೇಕಾಯಿತು. ಆದರೆ ’ನಾಯಕಿ’ ’ರಂಗ’ ತೊರೆಯಲಿಲ್ಲ. ಪತಿ ನಂಜಪ್ಪ ಉತ್ತರ ಕರ್ನಾಟಕದ ನಾಟಕ ಕಂಪನಿಗಳ ಮ್ಯಾನೇಜರ್ ಆಗಿ ಹೋದರೆ, ಬೆಂಗಳೂರಿನಲ್ಲಿ ನೆಲೆ ನಿಂತ ರಂಗನಾಯಕಮ್ಮ ಹೊನ್ನಪ್ಪ ಭಾಗವತರ್, ಸುಳ್ಳದ ದೇಸಾಯಿ, ಮಹಾಂತೇಶ ಶಾಸ್ತ್ರಿ, ಯೋಗನರಸಿಂಹ, ಮಹದೇವಸ್ವಾಮಿ, ಸ್ತ್ರೀ ನಾಟಕ ಮಂಡಳಿ, ಮಾಸ್ಟರ್ ಹಿರಣ್ಣಯ್ಯ ಮಿತ್ರ ಮಂಡಳಿಯಲ್ಲಿ ಉದ್ದಕ್ಕೂ ನಿವೃತ್ತಿ ವಯಸ್ಸನ್ನು ದಾಟಿದ ನಂತರವೂ ಅಭಿನಯಿಸುತ್ತಲೇ ಬಂದರು. ಈ ಮಧ್ಯೆ ಹಳ್ಳಿ ಪಟ್ಟಣಗಳ ಪೌರಾಣಿಕ ನಾಟಕಗಳಿಗೂ ಅವರಿಗೆ ಆಹ್ವಾನ ಇರುತ್ತಿತ್ತು.

ಯಾವ ಪಾತ್ರಕ್ಕೆ ಕೊರತೆ ಬಿದ್ದರೂ, ತಕ್ಷಣ ನೆನಪಾಗುತ್ತಿದ್ದವರು ರಂಗನಾಯಕಮ್ಮ. ವೃತ್ತಿರಂಗಭೂಮಿಯಲ್ಲಿ ಕೆಲವು ಪಾತ್ರಗಳಿಗೆ ದಂತಕತೆಯಾದ ನಟ ನಟಿಯರೇ ಇದ್ದಾರೆ. ಕೆಲವರು ಮಾತ್ರ ತಮಗೆ ಹೆಸರು ಕೊಟ್ಟ ಪಾತ್ರ ಬಿಟ್ಟು ಬೇರೆ ಪಾತ್ರ ಮಾಡಿದವರಲ್ಲ! ರಂಗನಾಯಕಮ್ಮ ಹಾಗಲ್ಲ, ಯಾವುದೇ ಪಾತ್ರಕ್ಕೆ ಸದಾಸಿದ್ಧ.

ಗುಬ್ಬಿ ವೀರಣ್ಣ ಪ್ರಶಸ್ತಿ ಕನ್ನಡ ರಂಗಭೂಮಿಯ ಅತ್ಯುನ್ನತ ಪ್ರಶಸ್ತಿ. ಆ ಕಾಲದಲ್ಲೇ ದೊಡ್ಡ ಹೆಸರು ಮಾಡಿರುವ ಇನ್ನೂ ನಾಲ್ಕಾರು ಮಂದಿ ಈ ಪ್ರಶಸ್ತಿ ಪಡೆಯಲು ಅರ್ಹರಾದವರಿದ್ದಾರೆ. ಅವರ ಸಾಲಿನಲ್ಲಿ ರಂಗನಾಯಕಮ್ಮನೂ ಒಬ್ಬರು. ಡಾ.ರಾಜಕುಮಾರ್ ಅವರ ತಮ್ಮ ವರದರಾಜು ಅವರ ಹೆಸರಿನಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಮತ್ತು ಗೆಳೆಯರು ಸ್ಥಾಪಿಸಿರುವ ಎಸ್.ಪಿ.ವರದರಾಜು ಪ್ರಶಸ್ತಿ ಕಳೆದ ಆರುವರ್ಷಗಳಿಂದ ಅರ್ಹರನ್ನು ಗೌರವಿಸುತ್ತಿದೆ. ಸಿನಿಮಾ ಹಾಗೂ ರಂಗಭೂಮಿಯ ತಲಾ ಒಬ್ಬರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. 2012 ರಂಗನಾಯಕಮ್ಮನವರಿಗೆ ಈ ಪ್ರಶಸ್ತಿ ದೊರೆಯುವ ಮೂಲಕ ಪ್ರಶಸ್ತಿಯ ಘನತೆಯೂ ಹೆಚ್ಚಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !