ಜಯದ ಲಯ ಉಳಿಸಿಕೊಳ್ಳುವ ಸವಾಲು

ಶುಕ್ರವಾರ, ಜೂನ್ 21, 2019
24 °C
ಅಗ್ರೆಸಿವ್ ಕ್ಯಾಪ್ಟನ್ ಕೊಹ್ಲಿ–ಕೂಲ್ ಕ್ಯಾಪ್ಟನ್ ಕೇನ್ ಮುಖಾಮುಖಿ; ಇನಿಂಗ್ಸ್‌ ಅರಂಭಿಸಲು ರಾಹುಲ್‌ಗೆ ಅವಕಾಶ

ಜಯದ ಲಯ ಉಳಿಸಿಕೊಳ್ಳುವ ಸವಾಲು

Published:
Updated:

ನಾಟಿಂಗಂ: ಕನ್ನಡಿಗ ಕೆ.ಎಲ್. ರಾಹುಲ್ ಅವರು ಗುರುವಾರ ನ್ಯೂಜಿಲೆಂಡ್ ವಿರುದ್ಧ ಟ್ರೆಂಟ್‌ಬ್ರಿಜ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ರೋಹಿತ್ ಶರ್ಮಾ ಜೊತೆಗೆ ಇನಿಂಗ್ಸ್‌ ಆರಂಭಿಸುವುದು ಬಹುತೇಕ ಖಚಿತವಾಗಿದೆ.

ಹೋದ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಶತಕ ಬಾರಿಸಿದ್ದ ಶಿಖರ್ ಧವನ್ ಗಾಯಗೊಂಡು ಎರಡು ಪಂದ್ಯಗಳಿಂದ ಹೊರಬಿದ್ದಿರುವುದರಿಂದ ರಾಹುಲ್ ನಾಲ್ಕನೇ ಸ್ಥಾನದಿಂದ ಮೇಲಿನ ಕ್ರಮಾಂಕಕ್ಕೆ ಬಡ್ತಿ ಪಡೆದಿದ್ದಾರೆ. ಶಿಖರ್ ಕೊರತೆ ಕಾಡದಂತೆ ಆಡುವ ಸವಾಲು ರಾಹುಲ್ ಮುಂದಿದೆ. ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಅವರಿಗೆ ಸಿಕ್ಕಿರುವ ಅವಕಾಶವೂ ಇದಾಗಿದೆ. 

ಭಾರತ ತಂಡವು ಆಡಿರುವ ಎರಡೂ ಪಂದ್ಯಗಳನ್ನು ಗೆದ್ದಿದೆ. ಇದು ತಂಡದ ಆತ್ಮವಿಶ್ವಾಸವನ್ನು ವೃದ್ಧಿಸಿದೆ. ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ಇದುವರೆಗೆ ಆಡಿರುವ ಮೂರು ಪಂದ್ಯಗಳಲ್ಲಿಯೂ ಗೆದ್ದು ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿದೆ. 2015ರಲ್ಲಿ ರನ್ನರ್ಸ್ ಅಪ್ ಆಗಿದ್ದ ಕಿವೀಸ್ ತಂಡದ ಆಟ‌ಗಾರರು ಆಲ್‌ರೌಂಡ್ ಆಟವಾಡುತ್ತಿದ್ದಾರೆ. ‘ಕೂಲ್ ಕ್ಯಾಪ್ಟನ್’ ಕೇನ್ ನಾಯಕತ್ವವು ಪರಿಣಾಮಕಾರಿಯಾಗಿದೆ. ಈಗ ಅವರಿಗೆ ‘ಅಗ್ರೆಸಿವ್ ಕ್ಯಾಪ್ಟನ್’ ಕೊಹ್ಲಿ ಬಳಗದ ಸವಾಲಿದೆ.

ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಎದುರು ಗೆದ್ದಿರುವ ಭಾರತ ತಂಡವು ಜಯದ ಲಯ ಮುಂದುವರಿಸುವ ಹುಮ್ಮಸ್ಸಿನಲ್ಲಿದೆ.

ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಎರಡೂ ತಂಡಗಳು ಮುಖಾಮುಖಿಯಾದಾಗಲೆಲ್ಲ ಕಿವೀಸ್ ಹೆಚ್ಚು ಮೇಲುಗೈ ಸಾಧಿಸಿದೆ. ದೊಡ್ಡ ಸ್ಕೋರ್ ಬೆನ್ನತ್ತಿ ಗೆಲ್ಲುವ ಸಮರ್ಥ ಬ್ಯಾಟ್ಸ್‌ಮನ್‌ಗಳು ತಂಡದಲ್ಲಿದ್ದಾರೆ. ವೇಗಿ ಟಿಮ್ ಸೌಥಿ, ಮ್ಯಾಟ್ ಹೆನ್ರಿ, ಟ್ರೆಂಟ್‌ ಬೌಲ್ಟ್ ಮತ್ತು ಸ್ಪಿನ್ನರ್ ಮಿಷೆಲ್ ಸ್ಯಾಂಟನರ್ ಅವರು ಬೌಲಿಂಗ್ ವಿಭಾಗದ ಶಕ್ತಿಯಾಗಿದ್ದಾರೆ. ಫಿಲ್ಡಿಂಗ್ ವಿಭಾಗವಂತೂ ಪಾದರಸದಷ್ಟೇ ಚುರುಕಾಗಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್. ಆದ್ದರಿಂದ ಭಾರತಕ್ಕೆ ಆಸ್ಟ್ರೇಲಿಯಾ ಎದುರಿನ ಪಂದ್ಯಕ್ಕಿಂತಲೂ ಇಲ್ಲಿ ಹೆಚ್ಚು ಕಠಿಣ ಸವಾಲು ಎದುರಾದರೆ ಅಚ್ಚರಿಯೇನಿಲ್ಲ. 

ಭಾರತ ತಂಡದಲ್ಲಿ ಶಿಖರ್ ಇಲ್ಲದ ಕಾರಣ  ದಿನೇಶ್ ಕಾರ್ತಿಕ್  ಅಥವಾ ಆಲ್‌ರೌಂಡರ್ ರವೀಂದ್ರ ಜಡೇಜ ಅವರಲ್ಲಿ ಒಬ್ಬರು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಬಹುದು.

ಟ್ರೆಂಟ್‌ಬ್ರಿಜ್ ಪಿಚ್‌ನಲ್ಲಿ ಈ ಹಿಂದೆ ರನ್‌ಗಳ ಹೊಳೆ ಹರಿದ ಇತಿಹಾಸವೇ ಇದೆ. ಈ ಪಂದ್ಯದಲ್ಲಿಯೂ ಬ್ಯಾಟ್ಸ್‌ಮನ್‌ಗಳು ಮಿಂಚುವ ಸಾಧ್ಯತೆಯೂ ಹೆಚ್ಚಿದೆ. ರೋಹಿತ್ ಶರ್ಮಾ ಅವರು ಈಗಾಗಲೇ ಒಂದು ಶತಕ ಮತ್ತು ಒಂದು ಅರ್ಧಶತಕ ಹೊಡೆದಿದ್ದಾರೆ. ಕೊಹ್ಲಿ ಹೋದ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದ್ದರು. ಹಾರ್ದಿಕ್ ಪಾಂಡ್ಯ ಯಾವುದೇ ಕ್ರಮಾಂಕದಲ್ಲಿಯೂ ಬ್ಯಾಟ್ ಬೀಸುವ ಪ್ರತಿಭಾವಂತ. ಆದ್ದರಿಂದ ನ್ಯೂಜಿಲೆಂಡ್ ಬೌಲರ್‌ಗಳು ಇವರೆಲ್ಲರನ್ನು ಕಟ್ಟಿಹಾಕಲು ರೂಪಿಸುವ ಯೋಜನೆ ಪಂದ್ಯದ ಫಲಿತಾಂಶ ನಿರ್ಧರಿಸಲಿದೆ. ಒಟ್ಟಿನಲ್ಲಿ ರೋಚಕ ಹಣಾಹಣಿಯ ನಿರೀಕ್ಷೆ ಈಗ ಗರಿಗೆದರಿದೆ.

ರಿಷಭ್ ಪಂತ್‌ಗೆ ಬುಲಾವ್

ಯುವ ವಿಕೆಟ್‌ಕೀಪರ್–ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರನ್ನು ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿರುವ ಭಾರತ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ.

ಎಡಗೈ ಹೆಬ್ಬೆರಳಿನ ಗಾಯದಿಂದಾಗಿ ಎರಡು ವಾರಗಳ ವಿಶ್ರಾಂತಿ ಪಡೆಯಲಿರುವ ಶಿಖರ್ ಧವನ್ ಅವರ ಬದಲಿಗೆ ರಿಷಭ್ ಅವರನ್ನು ಆಯ್ಕೆ ಮಾಡಲಾಗಿದೆ.

ಇದೇ ಭಾನುವಾರ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿರುವ ಪಾಕಿಸ್ತಾನ ಎದುರಿನ ಪಂದ್ಯದ ವೇಳೆಗೆ ರಿಷಭ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

‘ರಿಷಭ್ ಈಗಾಗಲೇ ಭಾರತದಿಂದ ಹೊರಟಿದ್ದಾರೆ.  ತಂಡದ ಮನವಿಯ ಮೇರೆಗೆ ಅವರನ್ನು ಕರೆಸಿಕೊಳ್ಳಲಾಗುತ್ತಿದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಪಂತ್ ಅವರು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ  ನಡೆದಿದ್ದ ಟೆಸ್ಟ್ ಸರಣಿಗಳಲ್ಲಿ ಶತಕ ಬಾರಿಸಿ ಗಮನ ಸೆಳೆದಿದ್ದರು. ಐಪಿಎಲ್‌ನಲ್ಲಿಯೂ  ಉತ್ತಮವಾಗಿ ಆಡಿದ್ದರು.

‘ಇಂಗ್ಲೆಂಡ್‌ಗೆ ಬರಲಿರುವ ಪಂತ್ ಅವರು ಭಾರತದ ಡ್ರೆಸ್ಸಿಂಗ್ ರೂಮ್‌ನಲ್ಲಿರುವುದಿಲ್ಲ. ಭ್ರಷ್ಟಾಚಾರ ನಿಗ್ರಹ ತಡೆ ಕಾಯಿದೆಯಡಿಯಲ್ಲಿ ಇದಕ್ಕೆ ಅವಕಾಶವಿಲ್ಲ. ಆದ್ದರಿಂದ ರಿಷಭ್ ಅವರು ಎಡಗೈ ಬೌಲರ್ ಖಲೀಲ್ ಅಹಮದ್ ಅವರ ಜೊತೆಗೆ ಪ್ರಯಾಣಿಸಲಿದ್ದಾರೆ. ಮ್ಯಾಂಚೆಸ್ಟರ್ ತಲುಪಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

 ಹಿರಿಯ ಕ್ರಿಕೆಟಿಗರಾದ ಸುನಿಲ್ ಗಾವಸ್ಕರ್ ಮತ್ತು ಕೆವಿನ್ ಪೀಟರ್ಸನ್ ಅವರು ಪಂತ್ ಅವರನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂದು  ಸಲಹೆ ನೀಡಿದ್ದರು.

***

ಇದು ವಿಶ್ವಕಪ್ ಟೂರ್ನಿ. ಭಾರತದ ವಿರುದ್ಧ ಗೆದ್ದು ಎರಡು ಪಾಯಿಂಟ್ ಗಳಿಸುವ ಛಲ ನಮ್ಮದು. ಮಳೆ ಬರದಿರಲಿ ಎಂದು ಪ್ರಾರ್ಥಿಸುತ್ತೇನೆ.

–ಲಾಕಿ ಫರ್ಗ್ಯುಸನ್, ನ್ಯೂಜಿಲೆಂಡ್ ಆಟಗಾರ

ಶಿಖರ್ ಧವನ್ ಅವರ ಗಾಯ ವಾಸಿಯಾಗಲು 10–12 ದಿನಗಳ ಅವಶ್ಯಕತೆ ಇದೆ. ಆ ನಂತರವಷ್ಟೇ ಅವರನ್ನು ಆಡಿಸುವ ಕುರಿತು ಯೋಜನೆ ಮಾಡಲಾಗುವುದು,

– ಸಂಜಯ್ ಬಂಗಾರ, ಭಾರತ ತಂಡದ ಬ್ಯಾಟಿಂಗ್ ಕೋಚ್

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !