ಧರ್ಮ, ಸಂಸ್ಕೃತಿ ಜೀವನದ ತಳಹದಿಯಾಗಲಿ

ಬುಧವಾರ, ಜೂನ್ 19, 2019
32 °C
ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೈವಾರ ಯೋಗಿ ನಾರೇಯಣ ಮಠದ ಧರ್ಮಾಧಿಕಾರಿ ಎಂ.ಆರ್.ಜಯರಾಮ್ ಅಭಿಮತ

ಧರ್ಮ, ಸಂಸ್ಕೃತಿ ಜೀವನದ ತಳಹದಿಯಾಗಲಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ಸಮಾಜ ಮತ್ತು ಧರ್ಮ ಎರಡು ಜತೆಯಾಗಿ ಹೋಗಬೇಕು. ಅವುಗಳ ನಡುವೆ ಏರುಪೇರಾದರೆ ಸಮಾಜ ಕೆಟ್ಟ ದಾರಿಗೆ ಹೋಗುತ್ತದೆ’ ಎಂದು ಕೈವಾರ ಯೋಗಿ ನಾರೇಯಣ ಮಠದ ಧರ್ಮಾಧಿಕಾರಿ ಎಂ.ಆರ್.ಜಯರಾಮ್ ಹೇಳಿದರು.

ನಗರದಲ್ಲಿ ಗುರುವಾರ ಆಯೋಜಿಸಿದ್ದ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಧರ್ಮ ಹಾಗೂ ಸಂಸ್ಕೃತಿ ಮನುಷ್ಯನ ಜೀವನದ ತಳಹದಿ ಆಗಬೇಕು. ಆಗ ಮಾತ್ರ ಸಮಾಜದಲ್ಲಿ ದ್ವೇಷ, ಅಸೂಯೆ, ಕ್ರೌರ್ಯ ಇರುವುದಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಧರ್ಮ ಮಾರ್ಗದಲ್ಲಿ ನಡೆಯಬೇಕು. ಮನುಷ್ಯನಿಗೆ ಸಮಾಜದ ಬಗ್ಗೆ ಅರಿವಿರಬೇಕು ತನ್ನ ಸಂಪಾದನೆಯಲ್ಲಿ ಶೇ 20 ರಷ್ಟು ಸಮಾಜಕ್ಕೆ ದಾನವಾಗಿ ನೀಡಬೇಕು. ಇದು ಎಲ್ಲರ ಜವಾಬ್ದಾರಿ ಆಗಬೇಕು’ ಎಂದು ತಿಳಿಸಿದರು.

‘ಮನುಷ್ಯ ತನ್ನ ಜೀವನದಲ್ಲಿ ಸಾಕಷ್ಟು ಸಂಪಾದನೆ ಮಾಡುತ್ತಾನೆ. ತಾನು, ತನ್ನ ಮಕ್ಕಳು ತಿಂದು ಉಳಿದ ಒಂದು ಹಿಡಿಯಷ್ಟನ್ನಾದರೂ ಬಡವರಿಗೆ, ನಿರ್ಗತಿಕರಿಗೆ ದಾನ ಮಾಡಬೇಕು. ಪ್ರತಿಯೊಬ್ಬರೂ ಧರ್ಮ ಮಾರ್ಗದಲ್ಲಿ ನಡೆದಾಗ ಮಾತ್ರ ಸಮಾಜ ಸಮೃದ್ಧಿ, ನೆಮ್ಮದಿಯಿಂದ ಇರಲು ಸಾಧ್ಯ. ಮಾನವ ಅಭ್ಯುದಯಕ್ಕಾಗಿ ಧರ್ಮ ಮತ್ತು ಸಮಾಜ ಉಳಿಸುವ ಕೆಲಸಗಳು ಹೆಚ್ಚಬೇಕು’ ಎಂದರು.

‘ಮನುಷ್ಯರಾದ ನಾವು ಲೌಕಿಕ ಜಾತಿವಾದಿಗಳ ಹಿಂದೆ ಹೋಗಬಾರದು. ಉಪದೇಶಗಳು ಮಾಡುವವರು ಗುರುವಲ್ಲ. ಯಾರು ಜ್ಞಾನವನ್ನು ತಿಳಿಸಿಕೊಡುತ್ತಾರೋ ಅವರು ನಿಜವಾದ ಗುರುಗಳು. ಅಜ್ಞಾನದಲ್ಲಿರುವವವನಿಗೆ ಜ್ಞಾನದ ಮಾರ್ಗ ತೋರಿ ನಿಶ್ಚಲವಾದ ಮನಸ್ಸನ್ನು ನೀಡಿ ಅಂತರಂಗದ ಕಲ್ಮಶಗಳನ್ನು ತೆಗೆದುಹಾಕಿ ಮುಕ್ತಿಯ ದಾರಿಯನ್ನು ತೋರಿಸುವವನೇ ನಿಜವಾದ ಗುರು’ ಎಂದು ಹೇಳಿದರು.

‘ದ್ವೇಷ, ಅಸೂಯೆ ಬಿಟ್ಟು ಪ್ರೀತಿ, ತ್ಯಾಗ, ಔದಾರ್ಯ ತೋರಿಸಿ ದೂರದೃಷ್ಟಿಯ ಸಮಾನ ಆತ್ಮ ಚಿಂತನೆಯಲ್ಲಿ ತೊಡಗಬೇಕು. ಪ್ರತಿ ವರ್ಷ ಈ ಕಲ್ಯಾಣ ಮಂಟಪವನ್ನು 25 ಬಡ ಜೋಡಿಗಳಿಗೆ ಉಚಿತವಾಗಿ ನೀಡಿದರೆ ಇದಕ್ಕೊಂದು ಒಂದು ಅರ್ಥ ಬರುತ್ತದೆ’ ಎಂದು ತಿಳಿಸಿದರು.

ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ರಾಮಕೃಷ್ಣ ಮಠದ ಪೂರ್ಣಾನಂದ ಸ್ವಾಮೀಜಿ ಮಾತನಾಡಿ, ‘ಮನುಷ್ಯ ಸಂಸಾರವೆಂಬ ಚಕ್ರದಲ್ಲಿ ಸುತ್ತುತ್ತಿರುತ್ತಾನೆ. ಯಾವಾಗ ತಾನು ಧರ್ಮ ಎಂಬುವ ಸ್ತಂಭವನ್ನು ಹಿಡಿದುಕೊಳ್ಳುವುದಿಲ್ಲವೋ ಆಗ ಬೀಳುತ್ತಾನೆ. ಹೀಗೆ ಬೀಳುವವರನ್ನು ಪತಿತರು ಎನ್ನಲಾಗುತ್ತದೆ’ ಎಂದರು.

ಬಲಿಜ ಸಂಘದ ರಾಜ್ಯ ಘಟಕದ ಅಧ್ಯಕ್ಷ ಪೆರಿಕಲ್ ಸುಂದರ್, ಪ್ರಧಾನ ಕಾರ್ಯದರ್ಶಿ ಜಗದೀಶ್, ವಕೀಲರ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಉಪಾಧ್ಯಕ್ಷ ಬಿ.ವಿ ಶ್ರೀನಿವಾಸ್, ಕೈವಾರ ಯೋಗಿ ನಾರೇಯಣ ಮಠದ ಸಂಚಾಲಕ ಬಾಲಕೃಷ್ಣ ಭಾಗವತ್, ಲಕ್ಷ್ಮಿ ವೆಂಕಟೇಶ್ವರಸ್ವಾಮಿ ದೇವಾಲಯ ಅಭಿವೃದ್ಧಿ ಸಂಘ ಅಧ್ಯಕ್ಷ ಕೆ.ವಿ.ನವೀನ್ ಕಿರಣ್, ಜಿಲ್ಲಾ ಪಂಚಾಯಿತಿ ಸದಸ್ಯ ಚಿಕ್ಕನರಸಿಂಹಯ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್, ಬಲಿಜ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷರಾದ ಸೋಮಶೇರ್, ಬಾಲಪ್ಪ, ವೈದೇಹಿ ಉಪಸ್ಥಿತರಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !