ಹಸಿರು ಪ್ರೀತಿ ಮೆರೆದ ಮದುವೆ ಮಂಟಪ!

ಮಂಗಳವಾರ, ಜೂನ್ 18, 2019
23 °C
ಮುಧೋಳ: ಕಲ್ಯಾಣಮಂಟಪದಲ್ಲಿ 500 ಸಸಿಗಳ ವಿತರಣೆ, ಪರಿಸರ ರಕ್ಷಣೆ ಬಗ್ಗೆ ಫಲಕಗಳ ಪ್ರದರ್ಶನ

ಹಸಿರು ಪ್ರೀತಿ ಮೆರೆದ ಮದುವೆ ಮಂಟಪ!

Published:
Updated:
Prajavani

ಬಾಗಲಕೋಟೆ: ಮುಧೋಳದ ನಂದಕೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಅಪರೂಪದ ಮದುವೆ ಸಮಾರಂಭ, ಸಮೀಪದ ಮಂಟೂರಿನ ಡೋಣಿ ಪರಿವಾರದ ಪರಿಸರ ಪ್ರೀತಿಗೆ ಸಾಕ್ಷಿಯಾಯಿತು.

ಮದುವೆಯ ಶುಭಗಳಿಗೆಯಲ್ಲಿ ಮಂಗಳವಾದ್ಯದೊಂದಿಗೆ, ಅಕ್ಷತಾರೋಪಣ, ಸಿಹಿಊಟದ ಜೊತೆ ಅತಿಥಿಗಳಿಗೆ ಗಿಡಗಳನ್ನು ನೀಡಲಾಯಿತು. ವಧು–ವರರನ್ನು ಆಶೀರ್ವದಿಸಲು ಬಂದವರು ಫಲತಾಂಬೂಲದ ಬದಲಿಗೆ ಮನೆಗೆ ಗಿಡಗಳನ್ನು ಒಯ್ದರು. ಹೀಗೆ ಜೂನ್ ತಿಂಗಳ ವಿಶ್ವ ಪರಿಸರ ದಿನವನ್ನು ಡೋಣಿ ಬಂಧುಗಳು ಅರ್ಥಪೂರ್ಣವಾಗಿಸಿದರು.

ಎರಡು ಜೋಡಿ ವಿವಾಹ: ಮಂಟೂರಿನ ಬಸಪ್ಪ ಕಲ್ಲಪ್ಪ ಡೋಣಿ ಹಾಗೂ ಸಾವಿತ್ರಿ ದಂಪತಿ ಪುತ್ರಿ ಶೋಭಾ ಹಾಗೂ ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಉಗರಗೋಳದ ಮಲ್ಲಿಕಾರ್ಜುನ ಯಲ್ಲಪ್ಪ ನೀಲಸಾಗರ ಹಾಗೂ ಸಿದ್ದಮ್ಮ ದಂಪತಿ ಪುತ್ರ ಪರಶುರಾಮ ಜೊತೆ ದಾಂಪತ್ಯ ಬದುಕಿಗೆ ಕಾಲಿಟ್ಟರು.

ಇದೇ ವೇಳೆ ಚನ್ನಬಸಪ್ಪ ಕಲ್ಲಪ್ಪ ಡೋಣಿ ಹಾಗೂ ಮಹಾದೇವಿ ದಂಪತಿ ಪುತ್ರ ಸುರೇಶ ಅವರಿಗೆ ವಿಜಯಪುರ ಜಿಲ್ಲೆ ಬಬಲಾದಿಯ ಸದಾಶಿವ ಅಡಿವೆಪ್ಪ ಅಲಬಾಳ ಮತ್ತು ಕಸ್ತೂರಿ ದಂಪತಿ ಪುತ್ರ ರೂಪಾ ಬಾಳ ಸಂಗಾತಿಯಾದರು. ಮದುವೆಯ ಕರೆಯೋಲೆ (ಆಹ್ವಾನ ಪತ್ರಿಕೆ) ಕಾಡು ಬೆಳೆಸಿ ನಾಡು ಉಳಿಸಿ ಸಂದೇಶದ ಜೊತೆಗೆ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಸ್ವಚ್ಛ ಪರಿಸರಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದರು.

ಕಲ್ಯಾಣ ಮಂಟಪದ ಗೋಡೆ, ಕಂಬಗಳು ವನ್ಯ ಸಂಪತ್ತಿನ ಮಹತ್ವ ಸಾರಿದವು. ವನ್ಯ ಜೀವಿಗಳ ಸಂರಕ್ಷಣೆಗೆ ಎಲ್ಲರೂ ಕೈ ಜೋಡಿಸೋಣ, ಇದ್ದರೆ ಹಸಿರು, ಉಳಿದೀತು ಉಸಿರು, ವನ್ಯಪ್ರಾಣಿಗಳನ್ನು ಹಿಂಸಿಸುವುದನ್ನು ನಿಲ್ಲಿಸಿ, ಕಾಡಿಲ್ಲದ ನಾಡು, ನೀರಿಲ್ಲದ ಬೀಡು, ಪರಿಸರ ಅಭಿವೃದ್ಧಿ ದೇಶದ ಅಭಿವೃದ್ಧಿ, ಕೂಡಿ ಕಾಡನ್ನು ಬೆಳೆಸೋಣ, ಮಾನವ ಪರಿಸರದ ಕೂಸು, ವನ್ಯ ಜೀವಿಗಳ ಹಕ್ಕಿಗಾಗಿ ಹೋರಾಡೋಣ, ಅರಣ್ಯವೆಂದರೆ ಆಮ್ಲಜನಕದ ಬ್ಯಾಂಕ್, ಪರಿಸರವೇ ಸತ್ಯ, ಪರಿಸರವೇ ನಿತ್ಯ ಸಂದೇಶಗಳನ್ನು ಹೊತ್ತ ಫಲಕಗಳು ಮದುವೆಗೆ ಬಂದವರ ಗಮನ ಸೆಳೆದವು.

ಮದುವೆಯ ಊಟ, ಮುಂಜಾನೆ ಉಪಾಹಾರದ ವೇಳೆ ನೀರು ಕುಡಿಯಲು, ಚಹಾ ಸೇವನೆಗೆ ‍ಪ್ಲಾಸ್ಟಿಕ್ ಲೋಟ ಬಳಸಲಿಲ್ಲ. ಜೊತೆಗೆ ಎಲ್ಲಿಯೂ ಪ್ಲಾಸ್ಟಿಕ್ ಬಳಕೆಯಾಗದಂತೆ ನೋಡಿಕೊಂಡು ಪರಿಸರ ಕಾಳಜಿ ಮೆರೆದರು. ಡೋಣಿ, ಉಳ್ಳಾಗಡ್ಡಿ, ಬಾಗಲಕೋಟೆ, ಜಗದಾಳ, ಸಂಕೇಶ್ವರ, ಆಲಬಾಳ, ನೀಲಸಾಗರ, ಮಂಟೂರ ಗ್ರಾಮದ ಹಿರಿಯರು ಈ ಸ್ಮರಣೀಯ ಗಳಿಗೆಗೆ ಸಾಕ್ಷಿಯಾದರು.

ಜಿಲ್ಲೆಯ ವನ್ಯಜೀವಿ ವಿಭಾಗದ ವಾರ್ಡನ್ ಡಾ.ಎಂ.ಆರ್.ದೇಸಾಯಿ, ಮಂಟೂರಿನ ಸಿದ್ಧಾರೂಢ ಮಠದ ಸದಾನಂದ ಸ್ವಾಮೀಜಿ, ಹಿರೇಮಠದ ಶ್ರೀಗಳು, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಸೇರಿದಂತೆ ಗಣ್ಯರು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !