ಗುರುವಾರ , ನವೆಂಬರ್ 14, 2019
22 °C
ಚು.ಮು.

ತೆಪರೇಸಿ ವಾಸ್ತವ್ಯ!

Published:
Updated:
Prajavani

‘ಹಲೋ... ಮುಖ್ಯಮಂತ್ರಿಗಳ ಪಿ.ಎ. ಕಚೇರಿನಾ? ನಾನು ಹೆಡ್ ಕಾನ್‌ಸ್ಟೇಬಲ್ ತೆಪರೇಸಿ ಅವರ ಹೆಂಡ್ತಿ ಪಮ್ಮಿ ಮಾತಾಡ್ತಿರೋದು...’

‘ಸರಿ ಇಲ್ಲಿಗ್ಯಾಕೆ ಫೋನ್ ಮಾಡಿದೀರಮ್ಮಾ? ಏನಾಗ್‍ಬೇಕಿತ್ತು?’

‘ಅಲ್ಲ ಸಾರ್, ನಮ್ಮನೆಯೋರು ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯದ ಬಂದೋಬಸ್ತ್‌ಗೆ ಅಂತ ಹೋಗಿ ಮೂರು ದಿನ ಆಯ್ತು, ಇನ್ನೂ ಮನೆಗೆ ಬಂದಿಲ್ಲ. ಮೊಬೈಲ್ ಸ್ವಿಚ್ಚಾಪಾಗಿದೆ, ಇಚಾರಿಸೋಣ ಅಂತ ಫೋನ್ ಮಾಡ್ದೆ’.

‘ಒಳ್ಳೆ ಕತೆಯಾಯ್ತು, ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ ಇನ್ನೂ ಮುಂದಿದೆ ಕಣಮ್ಮ, ನಿಮ್ ಗಂಡ ಈಗ್ಲೇ ಯಾಕೆ ಹೋದ್ರು?’

‘ಏನೋ ಗೊತ್ತಿಲ್ಲ ಸಾ, ಮುಖ್ಯಮಂತ್ರಿಗಳು ಉಳ್ಕಳೋ ಸ್ಕೂಲ್‍ನ ನಾವು ಮೊದ್ಲೇ ಪರಿಶೀಲಿಸಬೇಕು. ಎಲ್ಲ ಸೌಲಭ್ಯ ಅದಾವ ಇಲ್ವ ಅಂತ ಮೊದ್ಲೇ ನೋಡಬೇಕು, ಬಂದೋಬಸ್ತ್ ಮಾಡಬೇಕು ಅಂತಿದ್ರು ಸಾ...’

‘ಹೌದಾ? ಅದನ್ನೆಲ್ಲ ದೊಡ್ಡ ಅಧಿಕಾರಿಗಳು ನೋಡ್ಕೋತಾರೆ. ಹೆಡ್ ಕಾನ್‌ಸ್ಟೆಬಲ್‍ಗಳನ್ನೆಲ್ಲ ಅದಕ್ಕೆ ಕರೆಯಲ್ಲ ಬಿಡಿ...’

‘ಇಲ್ಲ ಸಾ, ಮುಖ್ಯಮಂತ್ರಿಗಳು ಗ್ರಾಮ
ವಾಸ್ತವ್ಯ ಮಾಡೋಕೆ ಮೂರು ದಿನ ಮೊದ್ಲೇ ನಾವು ಆ ಸ್ಕೂಲ್‍ನಲ್ಲಿ ಮಲಗಬೇಕು ಅಂತಿದ್ರು. ಅಲ್ಲಿ ಸೊಳ್ಳೆ, ತಿಗಣೆ ಕಾಟ ಏನರೆ ಐತಾ, ಒಳ್ಳೆ ಗಾಳಿ ಬರುತ್ತ ಇಲ್ವ, ಬಾತ್ ರೂಂ ಕ್ಲೀನ್ ಇದಾವ ಇಲ್ವ, ದೆವ್ವ ಭೂತ ಏನಾದ್ರೂ ಓಡಾಡ್ತವ, ಅದನ್ನೆಲ್ಲ ನಾವೇ ಖುದ್ದು ನೋಡಬೇಕು ಅಂತಿದ್ರು ಸಾ...’

‘ನೋಡಮ್ಮ ಅದೆಲ್ಲ ಸುಳ್ಳು. ಅದಕ್ಕೆಲ್ಲ ಬೇರೆ ಜನ ಇದಾರೆ. ನಿನ್ ಗಂಡ ಸುಳ್ಳು ಹೇಳಿ ಎಲ್ಲೋ ಹೋಗಿರಬೇಕು ನೋಡಿ...’

‘ಹೌದಾ ಸಾ... ನನಗೂ ಅದೇ ಅನುಮಾನ... ಇವತ್ತು ನಿಜ ಆಯ್ತು, ಇಬ್ರು ಎಲ್ಲೋ ಹೋಗಿ
ದಾರೆ ಅನ್ಸುತ್ತೆ, ಮನೆಗೆ ಬರ್ಲಿ, ಅವರನ್ನ ಮಾರಿಗೆ ಬಿಟ್ಟ ಕೋಣನ್ನ ಕಡಿಯಂಗೆ ಕಡೀದಿದ್ರೆ ಕೇಳಿ...’

‘ಅಲ್ಲಮ್ಮಾ ಅನುಮಾನ ಅಂತೀಯ, ಇಬ್ರು ಎಲ್ಲೋ ಹೋಗಿದಾರೆ ಅಂತೀಯ, ಆ ಇನ್ನೊಬ್ರು ಯಾರು?’

‘ನಮ್ ರಸ್ತೆಯ ಕೊನೇ ಮನೆ ಕಮಲಾಕ್ಷಿನೂ ಮೂರು ದಿನದಿಂದ ಕಾಣ್ತಾ
ಇಲ್ಲ ಸಾ...!’

ಪ್ರತಿಕ್ರಿಯಿಸಿ (+)