ಶುಕ್ರವಾರ, ಫೆಬ್ರವರಿ 28, 2020
19 °C
ರಜೆ ನಿರಾಕರಿಸಿದ್ದರಿಂದ ರಾಜೀನಾಮೆ ನೀಡಿದ್ದ ಯುವಕ

ಯುಪಿಎಸ್‌ಸಿ ಪರೀಕ್ಷೆ ತಯಾರಿಗಾಗಿ ಕೆಲಸ ಬಿಟ್ಟಿದ್ದ ಎಸ್. ಪ್ರತಾಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಗುಂಡ್ಲುಪೇಟೆಯಲ್ಲಿ ಬೆತ್ತಲೆ ಮೆರವಣಿಗೆಯಾಗಿ, ಹಲ್ಲೆಗೀಡಾದ ಎಸ್.ಪ್ರತಾಪ್‌, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಂಡ್ಯ ಪ್ರಾದೇಶಿಕ ಕಚೇರಿಯ ದ್ವಿತೀಯ ದರ್ಜೆ ಸಹಾಯಕರಾಗಿ 2 ವರ್ಷ 7 ತಿಂಗಳು ಕೆಲಸ ಮಾಡಿದ್ದರು. ಆ ಬಳಿಕ ರಾಜೀನಾಮೆ ನೀಡಿದ್ದರು.

‘ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುತ್ತಿದ್ದ ಪ್ರತಾಪ್‌, ಯುಪಿಎಸ್‌ಸಿ ಪರೀಕ್ಷೆ ಪಾಸಾಗಬೇಕೆಂಬ ಗುರಿ ಇಟ್ಟುಕೊಂಡಿದ್ದರು. ಸಣ್ಣಪುಟ್ಟ ಕೆಲಸಗಳಿಂದ ಪ್ರಯೋಜನ ಇಲ್ಲ. ದೊಡ್ಡ ಹುದ್ದೆಯಲ್ಲಿ ಕೂರಬೇಕು ಎನ್ನುತ್ತಿದ್ದರು’ ಎಂಬ ಸಂಗತಿ, ಅವರೊಂದಿಗೆ ಇಲ್ಲಿ ಕೆಲಸ ಮಾಡಿದ ಮಂಡಳಿಯ ಸಿಬ್ಬಂದಿಯಿಂದ ತಿಳಿದುಬಂದಿದೆ.

‘ನಾನು ಪ್ರತಾಪ್‌ ಅವರೊಂದಿಗೆ ಆರು ತಿಂಗಳು ಕೆಲಸ ಮಾಡಿದ್ದೇನೆ. ಒಟ್ಟಿಗೆ ಕೂತು ಊಟ, ತಿಂಡಿ ಮಾಡಿದ್ದೇವೆ. ದಿನಕ್ಕೆ ಒಮ್ಮೆಯಾದರೂ ಅವರು ಯುಪಿಎಸ್‌ಸಿ ಕನಸಿನ ಬಗ್ಗೆ ಹೇಳುತ್ತಿದ್ದರು. ಅವರು ಮಾನಸಿಕ ಅಸ್ವಸ್ಥರು ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಕಚೇರಿಗೆ ಸರಿಯಾದ ಸಮಯಕ್ಕೆ ಬರುತ್ತಿದ್ದರು. ಶಿಸ್ತು ಅವರೊಳಗೆ ಇತ್ತು’ ಎಂದು ಮಂಡಳಿಯ ಕಚೇರಿ ಸಿಬ್ಬಂದಿ ಬಿ.ಜಿ.ಉಮಾಶಂಕರ್‌ ಹೇಳಿದರು.

ಆರು ತಿಂಗಳು ರಜೆ ಕೇಳಿದ್ದರು ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಪ್ರತಾಪ್‌, ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿಗೆ ಆರು ತಿಂಗಳು ರಜೆ ನೀಡುವಂತೆ ಮನವಿ ಮಾಡಿದ್ದರು. ಆದರೆ, ಅಷ್ಟು ದಿನ ರಜೆ ಕೊಡಲು ಸಾಧ್ಯವಿಲ್ಲ ಎಂದಾಗ, ‘ನನ್ನ ಐಎಎಸ್‌ ಕನಸಿಗೆ ಅಡ್ಡಿಯಾಗುತ್ತಿದ್ದೀರಿ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಎರಡು ತಿಂಗಳ ರಜೆ ಪೂರೈಸಿ, ನಂತರ ಕಚೇರಿಗೆ ಗೈರು ಹಾಜರಾಗಿದ್ದ ಅವರು, ಒಂದು ದಿನ ಕಚೇರಿಗೆ ಬಂದು ರಾಜೀನಾಮೆ ನೀಡಿ ಹೋದರು. ಅವರ ರಾಜೀನಾಮೆ 2008 ಮೇ 30ರಂದು ಅಂಗೀಕೃತಗೊಂಡಿತ್ತು ಎಂದು ತಿಳಿದುಬಂದಿದೆ.

ದೆಹಲಿಯಲ್ಲಿ ತರಬೇತಿ ಪಡೆದಿದ್ದರು: ಯುಪಿಎಸ್‌ಸಿ ಪರೀಕ್ಷೆಗಾಗಿ, ಕೆಲ ಸಮಯ ನವದೆಹಲಿಯಲ್ಲಿ ತರಬೇತಿ ಪಡೆದಿದ್ದರು ಎಂದು ಮೈಸೂರಿನ ಅವರ ಸಂಬಂಧಿಯೊಬ್ಬರು ತಿಳಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು