ಫಲಿತಾಂಶದ ಬಳಿಕ ಅಸ್ಥಿರತೆ ಹೆಚ್ಚಾಗಿದೆ: ಶಾಸಕ ಡಾ.ಕೆ.ಸುಧಾಕರ್

ಬುಧವಾರ, ಜೂನ್ 19, 2019
28 °C
ಸರ್ಕಾರ ಕಾಪಾಡಿಕೊಳ್ಳಲು ಪಕ್ಷೇತರ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಿರಬಹುದು

ಫಲಿತಾಂಶದ ಬಳಿಕ ಅಸ್ಥಿರತೆ ಹೆಚ್ಚಾಗಿದೆ: ಶಾಸಕ ಡಾ.ಕೆ.ಸುಧಾಕರ್

Published:
Updated:
Prajavani

ಚಿಕ್ಕಬಳ್ಳಾಪುರ: ‘ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಅಸ್ಥಿರತೆ ಇರುವ ಬಗ್ಗೆ ನಾನು ಹೇಳುವುದಲ್ಲ, ಜಗಜ್ಜಾಹೀರಾಗಿದೆ. ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಆ ಅಸ್ಥಿರತೆ ಹೆಚ್ಚಾಗಿದೆ. ಸರ್ಕಾರ ಕಾಪಾಡಿಕೊಳ್ಳಲು ಪಕ್ಷೇತರ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಿರಬಹುದು’ ಎಂದು ಶಾಸಕ ಡಾ.ಕೆ.ಸುಧಾಕರ್ ಹೇಳಿದರು.

ತಾಲ್ಲೂಕಿನ ಮಂಡಿಕಲ್ಲಿನಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕಳೆದ ಒಂದು ವರ್ಷದಲ್ಲಿ ನನಗೆ ವೈಯಕ್ತಿಕವಾಗಿ, ರಾಜಕೀಯವಾಗಿ, ಅಭಿವೃದ್ಧಿ ವಿಚಾರದಲ್ಲಿ ಅನೇಕ ಅಪಮಾನಗಳು ಆಗಿವೆ. ಆದರೂ ನನಗೆ ರಾಜ್ಯದ ಜನರ ಅಭಿವೃದ್ಧಿ ಮುಖ್ಯ. ಹೀಗಾಗಿ, ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನಾನು ಬಹಳ ಚಿಂತನೆ ಮಾಡುತ್ತಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ನನಗೆ ವೈಯಕ್ತಿಕ ಲಾಭಕ್ಕಿಂತ ರಾಜ್ಯದ ಜನರಿಗೆ ಒಳ್ಳೆಯದಾಗಬೇಕು. ರೈತರ ಬದುಕು ಹಸನಾಗಬೇಕು. ರಾಜಕೀಯ ಸ್ಥಿರತೆ ಇರುವ ಸರ್ಕಾರ ಬರಬೇಕು. ಜನಪರ ಆಲೋಚನೆ ಮಾಡುವ ಸರ್ಕಾರ ಬರಬೇಕು. ಹೀಗಾಗಿ, ನನ್ನ ಮುಂದಿನ ನಡೆಯನ್ನು ಮತದಾರರ ಜತೆ ಸಮಾಲೋಚಿಸಿ ನಿರ್ಧರಿಸುತ್ತೇನೆ’ ಎಂದು ತಿಳಿಸಿದರು.

‘ಲೋಕಸಭೆ ಚುನಾವಣೆಯಲ್ಲಿ ಇಡೀ ದೇಶದಲ್ಲಿ ಕಾಂಗ್ರೆಸ್ ದಯನೀಯ ಸ್ಥಿತಿಗೆ ತಲುಪಿದೆ. ಹಾಗಾಗಿ ಪಕ್ಷವನ್ನು ಪುನರ್ ಸಂಘಟನೆ ಮಾಡಿ, ದೇಶದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರ ಹಿಡಿಯಬೇಕು ಎನ್ನುವುದಾದರೆ, ಸಂಘಟನೆ, ನೇಮಕಾತಿಗಳಲ್ಲಿ ನಾವು ಇಡುವ ಪ್ರತಿ ಹೆಜ್ಜೆ ಮುಖ್ಯವಾಗುತ್ತದೆ. ಜವಾಬ್ದಾರಿ ಸ್ಥಾನದಲ್ಲಿರುವ ನಾಯಕರು ಫಲಿತಾಂಶ ಗಮನದಲ್ಲಿಟ್ಟುಕೊಂಡು ಪಕ್ಷಕ್ಕೆ ಏನು ಮಾಡಿದರೆ ಒಳ್ಳೆಯದಾಗುತ್ತೋ ಅದನ್ನು ಮಾಡಬೇಕು’ ಎಂದರು.

‘ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬುದು ಮುಖ್ಯಮಂತ್ರಿ ಅವರ ಪರಮೋಚ್ಛ ಅಧಿಕಾರ. ಹೀಗಾಗಿ, ನನ್ನನ್ನು ಏಕೆ ಸೇರಿಸಿಕೊಳ್ಳಲಿಲ್ಲ ಎಂದು ಕೇಳಲಾಗದು. ಆದರೆ ಸಮ್ಮಿಶ್ರ ಸರ್ಕಾರ ಇರುವುದರಿಂದ ನಮ್ಮ ಪಕ್ಷದಲ್ಲಿ ಇರುವ ಸಮರ್ಥರನ್ನು ಗುರುತಿಸಿ ಸ್ಥಾನ ನೀಡಬೇಕಿತ್ತು. ಆದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ನನ್ನ ಹೆಸರನ್ನು ನಿಗಮದ ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿದರೂ ಮುಖ್ಯಮಂತ್ರಿ ಅವರು ನೇಮಕ ಮಾಡಲಿಲ್ಲ’ ಎಂದು ಹೇಳಿದರು.

‘ಇಡೀ ದೇಶದ ಜನತೆ ಬಿಜೆಪಿಗಿಂತಲೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಷ್ಟಪಟ್ಟಿದ್ದಾರೆ. ಅವರ ನಾಯಕತ್ವದಲ್ಲಿ ನಂಬಿಕೆ ಇಟ್ಟಿದ್ದಾರೆ. ಹಾಗಾಗಿಯೇ ಇಂತಹ ಫಲಿತಾಂಶ ಬಂದಿದೆ. ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ಗೆಲ್ಲಲ್ಲು ಅವಕಾಶವಿತ್ತು. ಆದರೆ ಇವತ್ತು ಬಹಿರಂಗ ಹೇಳಿಕೆ ಕೊಡುವುದರಿಂದ ಒಳ್ಳೆಯದು ಆಗುವುದಿಲ್ಲ. ಹೀಗಾಗಿ ಪಕ್ಷದ ಚೌಕಟ್ಟಿನಲ್ಲಿ ಏನು ಹೇಳಬೇಕೋ ಅಷ್ಟು ಹೇಳುವೆ’ ಎಂದರು.

ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿ ಆಗಿರುವ ಸುಧಾಕರ್ ಅವರು, ತಮ್ಮ ಆಸೆ ಕೈಗೂಡದ ಕಾರಣ ಈ ಹಿಂದೆ ಅತೃಪ್ತರ ಜತೆಗೆ ಗುರುತಿಸಿಕೊಂಡು ಬಿಜೆಪಿ ಸೇರಲು ಹೊರಟಿದ್ದರು ಎಂಬ ವದಂತಿಗಳು ಸಹ ಹರಿದಾಡಿದ್ದವು. ಗುರುವಾರ ನಡೆದ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟದ ವಿಸ್ತರಣೆಯಲ್ಲಿ ಇಬ್ಬರು ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಂಡ ಬೆನ್ನಲ್ಲೇ ಸುಧಾಕರ್ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಎಡೆಮಾಡಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !