ನಡುರಸ್ತೆಯಲ್ಲಿ ಮಂಗಳಮುಖಿಯರ ದಾಂಧಲೆ

ಗುರುವಾರ , ಜೂನ್ 27, 2019
26 °C
ಜಮಖಂಡಿ ಆರ್‌ಟಿಒ ಅಧಿಕಾರಿಗಳೊಂದಿಗೆ ವಾಗ್ಯುದ್ಧ; ರಸ್ತೆ ತಡೆ

ನಡುರಸ್ತೆಯಲ್ಲಿ ಮಂಗಳಮುಖಿಯರ ದಾಂಧಲೆ

Published:
Updated:
Prajavani

ಬಾಗಲಕೋಟೆ: ತಪಾಸಣೆಗೆಂದು ತಾವು ಪ್ರಯಾಣಿಸುತ್ತಿದ್ದ ವಾಹನವನ್ನು ತಡೆದರೆಂಬ ಕಾರಣಕ್ಕೆ ಗುರುವಾರ ಮಧ್ಯಾಹ್ನ ಜಮಖಂಡಿಯಲ್ಲಿ ಆರ್‌ಟಿಒ ಅಧಿಕಾರಿಗಳ ವಿರುದ್ಧ ತಿರುಗಿಬಿದ್ದ ಮಂಗಳಮುಖಿಯರ ತಂಡ ನಡು ರಸ್ತೆಯಲ್ಲಿಯೇ ದಾಂಧಲೆ ನಡೆಸಿದೆ.

ಮಂಗಳಮುಖಿಯರ ಆರ್ಭಟ ಕಂಡು ಅಕ್ಷರಶಃ ಕಂಗೆಟ್ಟ ಅಧಿಕಾರಿಗಳು ಕೊನೆಗೆ ಪೊಲೀಸರನ್ನು ಸ್ಥಳಕ್ಕೆ ಕರೆಸಿ ದಂಡ ವಸೂಲಿ ಮಾಡಿ ಕಳುಹಿಸಿದ್ದಾರೆ. ದಾರಿಹೋಕರೊಬ್ಬರು ದಾಂಧಲೆಯ ವಿಡಿಯೊ ಮಾಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸವದತ್ತಿಯಿಂದ ಮರಳುತ್ತಿದ್ದರು:

ಮಹಾರಾಷ್ಟ್ರದ ಕೊಲ್ಲಾಪುರದ 13 ಮಂದಿ ಮಂಗಳಮುಖಿಯರ ತಂಡ ಮ್ಯಾಕ್ಸಿಕ್ಯಾಬ್‌ನಲ್ಲಿ ಸವದತ್ತಿಗೆ ಹೊರಟಿತ್ತು. ಹಳದಿ ಬೋರ್ಡ್ ವಾಹನದಲ್ಲಿ ನಿಗದಿಗಿಂತ ಹೆಚ್ಚು ಜನರು ಪ್ರಯಾಣಿಸುತ್ತಿರುವುದು ಕಂಡ ಆರ್‌ಟಿಒ ಇನ್‌ಸ್ಪೆಕ್ಟರ್ ಅದನ್ನು ತಡೆದು ದಾಖಲೆಗಳ ತಪಾಸಣೆಗೆ ಮುಂದಾಗಿದ್ದಾರೆ. ಇದು ಮಂಗಳಮುಖಿಯರ ಆಕ್ರೋಶಕ್ಕೆ ದಾರಿಯಾಗಿ ಜಗಳಕ್ಕೆ ಕಾರಣವಾಗಿದೆ.

ಅಧೀನ ಸಿಬ್ಬಂದಿಯೊಂದಿಗೆ ಗಲಾಟೆಯ ವಿಚಾರ ಅರಿತು ಸ್ಥಳಕ್ಕೆ ಬಂದ ಆರ್‌ಟಿಒ ಜಯರಾಮ ನಾಯಕ ಅವರಿಗೂ ಅದರ ಬಿಸಿ ತಟ್ಟಿದೆ.

ಅಧಿಕಾರಿಗಳಿಗೆ ನಿಂದನೆ:

ಜಮಖಂಡಿ ಆರ್‌ಟಿಒ ಜಯರಾಮ ನಾಯಕ ಅವರ ವಾಹನ ಅಡ್ಡಗಟ್ಟಿ, ಟೈರ್‌ ಮುಂದೆ ಮಲಗಿ ಕೆಲ ಕಾಲ ಮುಧೋಳ–ಜಮಖಂಡಿ ರಸ್ತೆಯನ್ನು ಬಂದ್ ಮಾಡಿರುವ ಮಂಗಳಮುಖಿಯರು ಅಧಿಕಾರಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮರಾಠಿ ಭಾಷೆಯಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಕಲ್ಲು ಹಿಡಿದು, ವಾಹನದ ಮುಂದೆ ಬಳೆ ಹೊಡೆದು ಹಿಡಿಶಾಪ ಹಾಕಿದ್ದಾರೆ.

ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದನ್ನು ಅರಿತ ಜಯರಾಮ ನಾಯಕ ಕೊನೆಗೆ ಪೊಲೀಸರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿದ್ದಾರೆ. ನಿಗದಿತ ಸಂಖ್ಯೆಗಿಂತ ಹೆಚ್ಚು ಜನರನ್ನು ಹಾಕಿದ್ದಕ್ಕೆ ದಂಡ ಹಾಗೂ ರಸ್ತೆ ತೆರಿಗೆಯನ್ನು ವಾಹನ ಚಾಲಕನಿಂದ ಕಟ್ಟಿಸಿಕೊಂಡು ಕಳುಹಿಸಿದ್ದಾರೆ.

ನಮ್ಮ ಕೆಲಸ ಮಾಡಿದ್ದೇವೆ; ಆರ್‌ಟಿಒ

‘ವಾಹನ ತಪಾಸಣೆ, ದಂಡ ಪಾವತಿ ಮೊದಲಾದ ಸಂಗತಿಗಳ ಬಗ್ಗೆ ಮ್ಯಾಕ್ಸಿಕ್ಯಾಬ್‌ನಲ್ಲಿ ಮಂಗಳಮುಖಿಯರಿಗೆ ಅರಿವು ಇರಲಿಲ್ಲ. ಜೊತೆಗೆ ಅವರ ಬಗ್ಗೆ ವಿಶೇಷ ಕಾಳಜಿ ಇರುವ ಕಾರಣ ಆಟಾಟೋಪ ಸಹಿಸಿಕೊಂಡೆವು’ ಎಂದು ಆರ್‌ಟಿಒ ಜಯರಾಮ ನಾಯಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಕಾಗವಾಡ ಚೆಕ್‌ಪೋಸ್ಟ್‌ನಲ್ಲಿಯೇ ದಂಡ ‍ಪಾವತಿಸಬೇಕಿತ್ತು. ಚಾಲಕ ಚೆಕ್‌ಪೋಸ್ಟ್ ತಪ್ಪಿಸಿ ಬೇರೆ ರಸ್ತೆಯಲ್ಲಿ ಬಂದಿದ್ದ. ನಾವು ತಪಾಸಣೆಗೆ ಮುಂದಾದಾಗ ಮಂಗಳಮುಖಿಯರನ್ನು ಅಧಿಕಾರಿಗಳ ವಿರುದ್ಧ ಎತ್ತಿಕಟ್ಟಿದ. ಅವರಿಗೆ ಕನ್ನಡ ಬರುತ್ತಿರಲಿಲ್ಲ. ನಮಗೆ ಅವರ ಭಾಷೆ ಅರ್ಥವಾಗುತ್ತಿರಲಿಲ್ಲ. ಹಾಗಾಗಿ ನಾವು ಹೇಳಿದ್ದನ್ನು ಅರ್ಥಮಾಡಿಕೊಳ್ಳುವ ಶಕ್ತಿಯೂ ಅವರಿಗೆ ಇರಲಿಲ್ಲ. ಹಾಗಾಗಿ ವಾಹನ ಮುಟ್ಟುಗೋಲು ಹಾಕಿಕೊಂಡು ದಂಡ ಕಟ್ಟಿದ ಮೇಲೆಯೇ ಬಿಟ್ಟೆವು. ನಮ್ಮ ಕೆಲಸ ನಾವು ಮಾಡಿದ್ದೇವೆ’ ಎಂದು ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !