ನಾಲ್ಕು ವರ್ಷ ನಡೆದ ನೇಮಕ ಪ್ರಕ್ರಿಯೆ

ಸೋಮವಾರ, ಜೂನ್ 24, 2019
25 °C
ಪಿಯು ಉಪನ್ಯಾಸಕ ಹುದ್ದೆ: ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿ ಮೀರುವ ಆತಂಕ

ನಾಲ್ಕು ವರ್ಷ ನಡೆದ ನೇಮಕ ಪ್ರಕ್ರಿಯೆ

Published:
Updated:

ದಾವಣಗೆರೆ: ಪಿಯು ಉಪನ್ಯಾಸಕರ ಹುದ್ದೆ ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿ ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ನೇಮಕಾತಿ ನಡೆಯುತ್ತಿದೆ. ನಡುವೆ ಮೂರು ಬಾರಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆದರೆ ಹುದ್ದೆಗಳ ಸಂಖ್ಯೆ ಹೆಚ್ಚಿಸದೆ ಇರುವುದರಿಂದ ವಯಸ್ಸು ಮೀರುತ್ತಿರುವವರಿಗೆ ಸಮಸ್ಯೆಯಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ 1,204 ಹುದ್ದೆಗಳಿಗೆ 2015ರ ಮೇ 8ರಂದು ಅಧಿಸೂಚನೆ ಹೊರಡಿಸಿತ್ತು. ಅದೇ ವರ್ಷ ಜೂನ್‌ 15ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು, ಜೂನ್‌ 17ರ ವರೆಗೆ ಶುಲ್ಕ ಪಾವತಿಸಲು ಸೂಚಿಸಲಾಗಿತ್ತು. ಆದರೆ ಜೂನ್‌ 15ರಂದು ಈ ಅಧಿಸೂಚನೆಯನ್ನೇ ರದ್ದು ಮಾಡಲಾಗಿತ್ತು.

2016ರ ಜೂನ್‌ 13ರಂದು ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಲಾಯಿತು. ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಲು ಜೂನ್‌ 22 ಕೊನೆಯ ದಿನಾಂಕವಾಗಿತ್ತು. ಮತ್ತೊಮ್ಮೆ ಈ ಪ್ರಕ್ರಿಯೆ ಸ್ಥಗಿತಗೊಂಡಿತು.

2017ರ ಮಾರ್ಚ್‌ 2ರಂದು ಮತ್ತೆ ಅಧಿಸೂಚನೆ ಹೊರಡಿಸಲಾಯಿತು. ಹಿಂದಿನ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸಿದವರು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕಿಲ್ಲ. ಆದರೆ, ಪರೀಕ್ಷಾ ಶುಲ್ಕ ಪಾವತಿಸಬೇಕು ಎಂದು ಹೇಳಲಾಗಿತ್ತು. ಅಲ್ಲದೆ, ಹೊಸ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಹೊಸದಾಗಿ ಮತ್ತಷ್ಟು ಅರ್ಜಿಗಳು ಸಲ್ಲಿಕೆಯಾದವು.

ಇದಕ್ಕೆ ಸಂಬಂಧಪಟ್ಟಂತೆ ಪರೀಕ್ಷಾ ವೇಳಾಪಟ್ಟಿಗಳನ್ನು ಕೂಡ ಮುಂದೂಡುತ್ತಾ ಬರಲಾಯಿತು. 2018ರ ಡಿಸೆಂಬರ್‌ನಲ್ಲಿ ಪರೀಕ್ಷೆ ನಡೆಯಿತು. ಈ ವರ್ಷ ಜೂನ್‌ ಒಂದರಂದು ಮೂಲ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿ 1:2ರಂತೆ ಕೆಲವೇ ದಿನಗಳಲ್ಲಿ ಕೆಇಎ ಪ್ರಕಟಿಸಲಿದೆ.

ಸಮಸ್ಯೆ ಏನು?: 2015ರಲ್ಲಿ ಅರ್ಜಿ ಸಲ್ಲಿಸಿದವರು ಈ ಬಾರಿಯ ಅರ್ಹರ ಪಟ್ಟಿಯಲ್ಲಿ ಇದ್ದರೆ ಸಮಸ್ಯೆ ಇಲ್ಲ. ಒಂದು ವೇಳೆ ಇಲ್ಲದಿದ್ದರೆ ಮುಂದೆ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಿದರೆ ಸಲ್ಲಿಸಲು ವಯಸ್ಸಿನ ಕಾರಣಕ್ಕೆ ಅನರ್ಹ
ರಾಗುತ್ತಾರೆ.

‘ಮೂರು ಬಾರಿ ಅರ್ಜಿ ಕರೆಯಲು ಅವಕಾಶ ನೀಡಿದ್ದರಿಂದ ಮೂರು ಪಟ್ಟು ಅರ್ಜಿಗಳು ಬಂದಿದ್ದವು. ಆದರೆ, ಹುದ್ದೆಗಳ ಸಂಖ್ಯೆ ಹೆಚ್ಚಾಗಿಲ್ಲ. ಹುದ್ದೆಗಳನ್ನು ಕೂಡ ಹೆಚ್ಚಿಸಿದರೆ ವಯಸ್ಸು ಮೀರುತ್ತಿರುವ ನಮ್ಮಂಥವರಿಗೆ ಉಪಯೋಗವಾಗುತ್ತದೆ’ ಎನ್ನುತ್ತಾರೆ 2015ರಲ್ಲಿ ಅರ್ಜಿ ಸಲ್ಲಿಸಿರುವ ಶಿವಕುಮಾರ್‌ ಯರಗಟ್ಟಿಹಳ್ಳಿ.

‘ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಹುದ್ದೆಗಳನ್ನು ನಿರ್ಧರಿಸುವುದಿಲ್ಲ. ಪರೀಕ್ಷೆ ಪ್ರಕ್ರಿಯೆ ಮಾತ್ರ ನಡೆಸುತ್ತದೆ. ಪರೀಕ್ಷೆಗಳು ಮುಗಿದ ಬಳಿಕ ಹುದ್ದೆ ಹೆಚ್ಚಳ ಮಾಡಲು ಅವಕಾಶವಿಲ್ಲ’ ಎನ್ನುತ್ತಾರೆ ಪಿಯು ಉಪ ನಿರ್ದೇಶಕಿ ಸಾವಿತ್ರಮ್ಮ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !