ಗುಂಡ್ಲುಪೇಟೆ ಪ್ರಕರಣ: ಉತ್ತರ ಸಿಗದ ಪ್ರಶ್ನೆಗಳು

ಭಾನುವಾರ, ಜೂನ್ 16, 2019
22 °C

ಗುಂಡ್ಲುಪೇಟೆ ಪ್ರಕರಣ: ಉತ್ತರ ಸಿಗದ ಪ್ರಶ್ನೆಗಳು

Published:
Updated:
Prajavani

ಚಾಮರಾಜನಗರ: ಗುಂಡ್ಲುಪೇಟೆ ತಾಲ್ಲೂಕಿನ ವೀರನಪುರ ಗ್ರಾಮದಲ್ಲಿ ಪ್ರತಾಪ್‌ ಎಂಬುವವರ ಮೇಲೆ ನಡೆದ ಹಲ್ಲೆ ಮತ್ತು ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. 

ತನಿಖೆ ನಡೆಸುತ್ತಿರುವ ಪೊಲೀಸರು ಸ್ಪಷ್ಟವಾಗಿ ಏನೂ ಹೇಳುತ್ತಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ಆಯಾಮಗಳಲ್ಲಿ ಚರ್ಚೆ ನಡೆಯುತ್ತಿದೆ. 

ಘಟನೆಯ ಸಂತ್ರಸ್ತ ಪ್ರತಾಪ್‌ ಅವರ ಮನಸ್ಸಿನ ಆರೋಗ್ಯದ ಸುತ್ತವೇ ಇಡೀ ಪ್ರಕರಣದ ಚರ್ಚೆ ನಡೆಯುತ್ತಿದೆ. ಪ್ರತಾಪ್‌ ಅವರ ತಂದೆ ಜೂನ್‌ 3ರಂದು ಪೊಲೀಸರಿಗೆ ನೀಡಿದ್ದಾರೆ ಎನ್ನಲಾದ ವೈದ್ಯಕೀಯ ಪ್ರಮಾಣಪತ್ರದ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ.

ಮೈಸೂರಿನ ಕೆ.ಆರ್‌.ಆಸ್ಪತ್ರೆಯ ಮನೋರೋಗ ವಿಭಾಗವು 2018ರ ಜೂನ್‌ 12ರಂದು ಈ ಪ್ರಮಾಣಪತ್ರವನ್ನು ಪ್ರತಾಪ್‌ ಅವರಿಗೆ ನೀಡಿದೆ. ಸ್ವಯಂ ಕಾಳಜಿ (ಸೆಲ್ಫ್‌ಕೇರ್‌), ಜನರೊಂದಿಗೆ ಬೆರೆಯುವಿಕೆ, ಕೆಲಸ, ಸಂವಹನ ಮತ್ತು ಅರ್ಥೈಸಿಕೊಳ್ಳುವಿಕೆಯಲ್ಲಿನ ಅವರ ಸಾಮರ್ಥ್ಯವನ್ನು ಪರಿಶೀಲನೆಗೆ ಒಳಪಡಿಸಿ ಮೌಲ್ಯಮಾಪನ ಮಾಡಲಾಗಿದೆ. ವೈದ್ಯರು ಅವರಿಗೆ ಒಟ್ಟು 9 ಅಂಕಗಳನ್ನು ನೀಡಿದ್ದಾರೆ.

‘ಪ್ರತಾಪ್‌ ಮಾನಸಿಕ ವೈಕಲ್ಯದಿಂದ ಬಳಲುತ್ತಿದ್ದು, 1995ರ ಅಂಗವಿಕಲರ ಕಾಯ್ದೆ ಅಡಿಯಲ್ಲಿ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಪಡೆಯಲು ಇವರು ಅರ್ಹರು’ ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ. ಈ ಪ್ರಮಾಣಪತ್ರದ ಆಧಾರದಲ್ಲೇ ಅವರಿಗೆ ಈ ವರ್ಷ ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ಬರೆಯಲು ಅವಕಾಶ ಸಿಕ್ಕಿತ್ತು (ಅಂಗವಿಕಲ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಗರಿಷ್ಠ ವಯೋಮಿತಿ 42 ವರ್ಷ. ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಗಳಿಗೆ ನಿಗದಿಪಡಿಸಿರುವ ವರಿಷ್ಠ ವಯೋಮಿತಿ 37 ವರ್ಷ). 

ಮನಸ್ಸಿಗೆ ಸಂಬಂಧಿಸಿದ ಕಾಯಿಲೆ ಯಿಂದ ಪ್ರತಾಪ್‌ ಬಳಲುತ್ತಿರುವುದು ನಿಜ. ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಕುಟುಂಬವರು ಒಪ್ಪಿ ಕೊಂಡರೂ, ಈ ರೀತಿ ಯಾವತ್ತೂ ಆಗಿರಲಿಲ್ಲ ಎಂದು ಹೇಳುತ್ತಾರೆ. 

ಸರ್ಕಾರಿ ಕೆಲಸ ಸಿಕ್ಕಿದ್ದು ಹೇಗೆ?: ಒಂದು ವೇಳೆ ಪ್ರತಾಪ್‌ ಅವರು ಗಂಭೀರವಾದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರೆ, ಸರ್ಕಾರಿ ಕೆಲಸ ಸಿಕ್ಕಿದ್ದಾದರೂ ಹೇಗೆ? ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದುದಾದರೂ ಹೇಗೆ ಎಂಬುದು ದಲಿತ ಸಂಘಟನೆಗಳ ಮುಖಂಡರು ಕೇಳುತ್ತಿರುವ ಪ್ರಶ್ನೆ.

ಆದರೆ, ಹಲವು ವರ್ಷಗಳಿಂದ ಪ್ರತಾಪ್‌ ಅವರು ಮಾನಸಿಕ ವೈದ್ಯ ರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂಬು ದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ಗೊತ್ತಾಗಿದೆ. ಘಟನೆಗೆ ಮುನ್ನ ಕೆಲ ದಿನಗಳಿಂದ ಮಾತ್ರೆ ತೆಗೆದುಕೊಂಡಿರಲಿಲ್ಲ ಎನ್ನಲಾಗುತ್ತಿದೆ.

ದರೋಡೆ ನಿಜವೇ?: ಜೂನ್‌ 2ರಂದು ಮೈಸೂರಿನಿಂದ ಸ್ಕೂಟರ್‌ನಲ್ಲಿ ಶ್ಯಾನಡ್ರಹಳ್ಳಿಗೆ ಹೊರಟ ಪ್ರತಾಪ್‌ ಅವರನ್ನು ರಾತ್ರಿ 12 ಗಂಟೆ ಸುಮಾರಿಗೆ ರಾಘವಾಪುರದಲ್ಲಿ ದರೋಡೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಪೊಲೀಸರು ಇದನ್ನು ನಿರಾಕರಿಸುತ್ತಾರೆ. ಹಾಗಾಗಿ, ಇದು ಇನ್ನು ನಿಗೂಢವಾಗಿಯೇ ಇದೆ. 

ರಾಘವಾಪುರದ ರಾಷ್ಟ್ರೀಯ ಹೆದ್ದಾರಿಯಿಂದ ಒಂದು ಕಿ.ಮೀ ದೂರದಲ್ಲಿ ಕೆರೆಯಲ್ಲಿ ಅವರ ಸ್ಕೂಟರ್‌ ಹಾಗೂ ಅವರದ್ದು ಎನ್ನಲಾದ ಬಟ್ಟೆಗಳು ಸಿಕ್ಕಿವೆ. ಪಾಸ್‌ಪೋರ್ಟ್‌ ಕೂಡ ಪತ್ತೆಯಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿದ್ದವರು ಇಲ್ಲಿಗೆ ಯಾಕೆ ಬಂದರು ಎಂಬ ಪ್ರಶ್ನೆಯೂ ಉದ್ಭವವಾಗಿದೆ. ರಾಘವಾಪುರದ ಬಳಿ ಸ್ಕೂಟರ್‌ನಲ್ಲಿ ಪೆಟ್ರೋಲ್‌ ಖಾಲಿಯಾಗಿತ್ತು ಎಂದು ಮೂಲಗಳು ಹೇಳಿವೆ. ಆದರೆ, ಅಲ್ಲಿಂದ ಕೆರೆಯತ್ತ ಯಾಕೆ ಮತ್ತು ಹೇಗೆ ಹೋದರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ಈ ಮಧ್ಯೆ ಆರೋಪಿ ಅರ್ಚಕ ಶಿವಪ್ಪ ನನ್ನು ಪೊಲೀಸರು ಇನ್ನೂ ಬಂಧಿಸಿಲ್ಲ. ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.


ರಾಘವಪುರ ಬಳಿ ಪತ್ತೆಯಾಗಿರುವ ಪ್ರತಾಪ್‌ ಅವರದ್ದು ಎನ್ನಲಾದ ಬಟ್ಟೆಗಳು

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !