ಸರಿಯಾಗಿ ಬಾರದ ವೇತನ, ನೌಕರಿ ತೊರೆಯುತ್ತಿರುವ ಸಿಬ್ಬಂದಿ

ಬುಧವಾರ, ಜೂಲೈ 17, 2019
29 °C
ಕಾವೇರಿ ವನ್ಯಧಾಮ: ಪಿಎಫ್‌, ಇಎಸ್‌ಐ ಕಾರ್ಡ್‌ ವಿತರಣೆ ಆಗಿಲ್ಲ– ಹೊರ ಗುತ್ತಿಗೆ ಅರಣ್ಯ ವೀಕ್ಷಕರ ಆರೋಪ

ಸರಿಯಾಗಿ ಬಾರದ ವೇತನ, ನೌಕರಿ ತೊರೆಯುತ್ತಿರುವ ಸಿಬ್ಬಂದಿ

Published:
Updated:

ಹನೂರು: ರಾಜ್ಯದಲ್ಲೇ ಹೆಚ್ಚು ವಿಸ್ತೀರ್ಣ ಹೊಂದಿರುವ ವನ್ಯಧಾಮ ವಾಗಿರುವ ಕಾವೇರಿ ವನ್ಯಧಾಮದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಅರಣ್ಯ ವೀಕ್ಷಕರಿಗೆ (ವಾಚರ್‌) ನಿಗದಿತ ಸಮಯಕ್ಕೆ ಸರಿಯಾಗಿ ವೇತನ ಬಾರದೆ ಹಲವರು ನೌಕರಿ ತೊರೆದಿದ್ದಾರೆ. ಇನ್ನಷ್ಟು ಮಂದಿ ಕೆಲಸ ಬಿಡಲು ಮುಂದಾಗಿದ್ದಾರೆ.

ಸಿಬ್ಬಂದಿ ಕೊರತೆ ನೀಗಿಸುವ ಉದ್ದೇಶದಿಂದ ಇಲಾಖೆಯೇ ಗುತ್ತಿಗೆ ಆಧಾರದ ಮೇಲೆ ಅರಣ್ಯ ವೀಕ್ಷಕರನ್ನು ನೇಮಕ ಮಾಡಿಕೊಂಡು ನಿಗದಿತ ವೇತನ ನೀಡುತ್ತಿತ್ತು. ಆದರೆ, ಒಂದು ವರ್ಷದಿಂದ ಹೊರ ಗುತ್ತಿಗೆ ಆಧಾರದಲ್ಲಿ ಅರಣ್ಯ ವೀಕ್ಷಕರನ್ನು ನೇಮಕ ಮಾಡಲಾಗುತ್ತಿದೆ.

‘ಗುತ್ತಿಗೆ ಪಡೆದ ಸಂಸ್ಥೆಗಳು ನಿಗದಿತ ಸಮಯಕ್ಕೆ ವೇತನ ನೀಡುತ್ತಿಲ್ಲ. ಸಿಬ್ಬಂದಿ ಅಲ್ಲದೇ ಪಿ.ಎಫ್ ಖಾತೆ
ಸಂಖ್ಯೆ ಹಾಗೂ ಇಎಸ್‍ಐ ಕಾರ್ಡ್‌ ವಿತರಿಸುತ್ತಿಲ್ಲ’ ಎಂಬುದು ಸಿಬ್ಬಂದಿ ಆರೋಪ.

‘ನಮ್ಮನ್ನೇ ನಂಬಿದ್ದ ಕುಟುಂಬ, ನಾವು ಕಳುಹಿಸುವ ಅಲ್ಪ ಹಣಕ್ಕಾಗಿ ಕಾದು ಕುಳಿತಿತ್ತು. ಹಿಂದೆ ಇಲಾಖೆ ವತಿಯಿಂದ ನೀಡಲಾಗುತ್ತಿದ್ದ ವೇತನ ಸರಿಯಾದ ಸಮಯಕ್ಕೆ ಬರು ತ್ತಿತ್ತು. ಆದರೆ ಹೊರಗುತ್ತಿಗೆ ಪದ್ಧತಿ ಜಾರಿಗೆ ಬಂದ ಮೇಲೆ ಜೀವನ ನಿರ್ವ ಹಣೆಯೇ ಕಷ್ಟವಾಯಿತು. ಮೂರು ಅಥವಾ 4 ತಿಂಗಳಿಗೊಮ್ಮೆ ಸಂಬಳ ನೀಡುತ್ತಿದ್ದುದ್ದರಿಂದ ಬೇಸತ್ತು ವಾಚರ್ ಕೆಲಸ ಬಿಟ್ಟು ಈಗ ಕೂಲಿ ಕೆಲಸ ಮಾಡಿಕೊಂಡಿದ್ದೇನೆ’ ಎಂದು ಗೋಪಿನಾಥಂ ವನ್ಯಜೀವಿ ವಲಯದಲ್ಲಿ ಕೆಲಸ ಮಾಡುತ್ತಿದ್ದವರೊಬ್ಬರು ‘ಪ್ರಜಾವಾಣಿ’ ಮುಂದೆ ಅಳಲು ತೋಡಿ ಕೊಂಡರು.

‘ಬಿಸಿಲು ಮಳೆ ಎನ್ನದೇ ವರ್ಷವಿಡೀ ಅರಣ್ಯದೊಳಗೆ ಗಸ್ತು ತಿರುಗುತ್ತೇವೆ. ತಿಂಗಳಿಗೆ ಸರಿಯಾಗಿ ನಮಗೆ ಸಂಬಳ ನೀಡುತ್ತಿಲ್ಲ. ನಿಗದಿತ ಸಮಯಕ್ಕೆ ಸರಿಯಾಗಿ ವೇತನ ನೀಡದೇ ಇರು ವುದರಿಂದ ಈಗಾಗಲೇ ಕೆಲವು ವಲಯಗಳಲ್ಲಿ ಅರಣ್ಯ ವೀಕ್ಷಕರು ಕೆಲಸವನ್ನೇ ತೊರೆದು ಹೋಗಿದ್ದಾರೆ. ಅಲ್ಲದೇ ನಮ್ಮ ಸಂಬಳದಲ್ಲಿ ಪ್ರತಿ ತಿಂಗಳು ₹1,300 ಅನ್ನು ಪಿಎಫ್ ಎಂದು ಕಡಿತಗೊಳಿಸುತ್ತಿದ್ದಾರೆ. ಆದರೆ, ವರ್ಷವಾದರೂ ಇನ್ನೂ
ಸಹ ಪಿಎಫ್ ಖಾತೆ ಸಂಖ್ಯೆಯನ್ನೇ ನೀಡಿಲ್ಲ. ಹೀಗಾದರೆ, ಏಜೆನ್ಸಿಯವರು ನಮ್ಮ ಖಾತೆಗೆ ಪಿಎಫ್ ಹಣ ಹಾಕು ತ್ತಿದ್ದಾರೆ ಎಂದು ನಂಬುವುದು ಹೇಗೆ’ ಎಂದು ಹೆಸರು ಹೇಳಲಿಚ್ಛಿಸದ ಸಿಬ್ಬಂದಿ ಅಸಹಾಯಕತೆ ತೋಡಿಕೊಂಡರು. 

ವರ್ಷವಾದರೂ ಬಾರದ ಇಎಸ್‍ಐ ಕಾರ್ಡ್: ವನ್ಯಧಾಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಳ್ಳಬೇಟೆ ತಡೆ ಶಿಬಿರ ಹಾಗೂ ಹೊರಗುತ್ತಿಗೆ ಆಧಾರದಮೇಲೆ ಕಾರ್ಯನಿರ್ವಹಿಸುತ್ತಿರುವ ಅರಣ್ಯ ವೀಕ್ಷಕರಿಗೆ ವರ್ಷವಾದರೂ ಇಎಸ್‍ಐ ಕಾರ್ಡ್ ವಿತರಣೆಯಾಗಿಲ್ಲ.

ಸಿಬ್ಬಂದಿ ಅಥವಾ ಕುಟುಂಬದ ಸದಸ್ಯರಿಗೆ ಆರೋಗ್ಯ ಸಮಸ್ಯೆ ಎದುರಾದರೆ, ಅವರು ತಮ್ಮ ಸ್ವಂತ ಹಣದಿಂದಲೇ ಚಿಕಿತ್ಸೆ ಪಡೆದು ಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

‘ರಾತ್ರಿಯಿಡೀ ಗಸ್ತು ತಿರುಗುವ ಸಿಬ್ಬಂದಿ ಅನಾರೋಗ್ಯಕ್ಕೀಡಾದರೆ ಅವರ ಕುಟುಂಬಕ್ಕೆ ಯಾರು ಹೊಣೆ’ ಎಂಬುದು ಇಲ್ಲಿನ ಸಿಬ್ಬಂದಿ ಪ್ರಶ್ನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !