ಗೌರವ ಇಲ್ಲದ ಕಡೆ ಮಹಿಳೆ ಇರಲಾರಳು : ಆಶಾಲತಾ ಸುವರ್ಣಾ ಹೇಳಿಕೆ

ಗುರುವಾರ , ಜೂಲೈ 18, 2019
29 °C
ಮಹಿಳೆಯರ ಸ್ಥಿತಿಗತಿಗಳ ಕುರಿತ ಸಂವಾದ

ಗೌರವ ಇಲ್ಲದ ಕಡೆ ಮಹಿಳೆ ಇರಲಾರಳು : ಆಶಾಲತಾ ಸುವರ್ಣಾ ಹೇಳಿಕೆ

Published:
Updated:
Prajavani

ಮಂಡ್ಯ: ‘ಗೌರವ ಇಲ್ಲದ ಜಾಗದಲ್ಲಿ ಯಾವೊಬ್ಬ ವ್ಯಕ್ತಿಯೂ ಜೀವಿಸಲು ಇಷ್ಟಪಡುವುದಿಲ್ಲ. ಮಹಿಳೆಗೆ ಗೌರವ ಇಲ್ಲದಿರುವ ಜಾಗದಲ್ಲಿ ಆಕೆ ಇರುವುದಿಲ್ಲ. ಕುಟುಂಬ ಒಳಗೆ, ಹೊರಗೆ ಮಹಿಳೆಯನ್ನು ಗೌರವಿಸಬೇಕು’ ಎಂದು ಕರ್ನಾಟಕ ರಾಜ್ಯ ಮಹಿಳಾ ತರಬೇತುದಾರರ ಸಂಚಲನ ಸಮನ್ವಯ ಸಮಿತಿ ರಾಜ್ಯ ಘಟಕದ ಸಂಚಾಲಕಿ ಆಶಾಲತಾ ಸುವರ್ಣಾ ಹೇಳಿದರು.

ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆ, ವಿ ಹೆಲ್ಪ್ ಗ್ರಾಮೀಣ ಮತ್ತು ನಗರಾಭಿವೃದ್ದಿ ಸಂಸ್ಥೆ, ಅನನ್ಯ ಹಾರ್ಟ್ ಸಂಸ್ಥೆ ವತಿಯಿಂದ ನಗರದ ಗಾಂಧಿಭವನದಲ್ಲಿ ಶನಿವಾರ ನಡೆದ ‘ಮಹಿಳೆಯರ ಸ್ಥಿತಿಗತಿಗಳ ಕುರಿತ ಜಿಲ್ಲಾ ಮಟ್ಟದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಆಧುನಿಕ ಹಾಗೂ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವೆಲ್ಲರೂ ದುಡಿಮೆಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಮಹಿಳೆಯರು ಕೂಡ ಸಮಾಜದಲ್ಲಿ ಪುರುಷರಿಗೆ ಸಮಾನಳಾಗಿ ಎಲ್ಲಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾಳೆ. ಆದರೆ ಮನೆಯ ಕೆಲವು ಸಾಂಪ್ರದಾಯಿಕ ಕೆಲಸಗಳಾದ ಅಡುಗೆ, ಪಾತ್ರೆ, ಬಟ್ಟೆ ತೊಳೆಯುವುದು, ಮಕ್ಕಳ ಪಾಲನೆ–ಪೋಷಣೆ ಜವಾಬ್ದಾರಿಗಳು ಮಹಿಳೆಗೆ ಸೀಮಿತವಾಗಿದೆ. ಇದರಿಂದ ಮಹಿಳೆಯರು ಸಮಾನತೆ ಸಾಧಿಸಲಾಗದೆ, ಸಮಾಜದಲ್ಲಿ ಸೂಕ್ತ ಗೌರವ ಸ್ಥಾನ–ಮಾನ ಸಿಗದೆ ದ್ವಿತೀಯ ದರ್ಜೆಯ ಪ್ರಜೆಯಾಗಿ ಬದುಕುವಂತಾಗಿದೆ’ಎಂದರು.

‘ಮಹಿಳೆ ಸಮಾನತೆ ಸಾಧಿಸಲು ಯಾವ ಕ್ಷೇತ್ರದಲ್ಲಿ ಮಹಿಳಾ ಶಕ್ತಿ ಕೊರತೆಯಾಗಿದೆ ಎಂಬುದನ್ನು ಗುರುತಿಸಬೇಕು. ಅದರ ಪರಿಹಾರಕ್ಕಾಗಿ ವಿಚಾರವಂತ ಮಹಿಳಾ ಹೋರಾಟಗಾರ್ತಿಯರೊಂದಿಗೆ ಸಂವಾದ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಮಹಿಳೆಯರ ಶಕ್ತಿಯನ್ನು ಅನಾವರಣ ಮಾಡುವ ಮೂಲಕ ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗಬೇಕು. ಭವಿಷ್ಯದಲ್ಲಿ ಸಮ ಸಮಾಜ ನಿರ್ಮಾಣ ಮಾಡುವ ಸಲುವಾಗಿ ಮನೆಯಲ್ಲಿ ಮಕ್ಕಳಿಗೆ ಸಮಾನತೆ ಮನೋಭಾವ ಬೆಳೆಸಬೇಕು. ಹೆಣ್ಣು–ಗಂಡು ಎಂದು ವರ್ಗೀಕರಿಸದೆ ಸಮಾನ ಪೋಷಣೆ ಮಾಡಬೇಕು’ ಎಂದರು.

ಎಸ್‌.ಬಿ.ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಮಾತನಾಡಿ, ‘ಮನೆಯೊಳಗಿನ ಸಾಂಪ್ರದಾಯಿಕ ಕೆಲಸ ಹಾಗೂ ಹೊರಗಿನ ಕೆಲಸ ನಿರ್ವಹಣೆಯಿಂದ ಮಹಿಳೆ ಮಾನಸಿಕ ಹಾಗೂ ದೈಹಿಕವಾಗಿ ಸಮತೋಲನ ಕಳೆದುಕೊಳ್ಳುತ್ತಿದ್ದಾಳೆ. ಎರಡೂ ಕಡೆಗಳಲ್ಲಿ ನಿರ್ವಹಣೆ ಮಾಡುವುದು ಸುಲಭ ಸಾಧ್ಯವಲ್ಲ. ಸರಿಯಾದ ವಿಶ್ರಾಂತಿ ಪಡೆಯುವ ಮೂಲಕ ಆರೋಗ್ಯದ ಕಡೆಗೂ ಗಮನಹರಿಸಬೇಕು. ಕೌಟಂಬಿಕ ಕೆಲಸಗಳನ್ನು ಮಹಿಳೆ ಮತ್ತು ಪುರುಷರು ಸಮಾನವಾಗಿ ಹಂಚಿಕೊಂಡಾಗ, ಮಹಿಳೆಯರು ವೃತ್ತಿ ಮತ್ತು ಕುಟುಂಬ ನಿರ್ವಹಣೆ ಒತ್ತಡದಿಂದ ಮುಕ್ತರಾಗಬಹುದು ಎಂದರು.

ಸಂಚಲನ ಸಮನ್ವಯ ಸಮತಿ ರಾಜ್ಯ ಘಟಕದ ಸಂಚಾಲಕಿ ವತ್ಸಲಾ ನಾಯಕ್, ಜಿಲ್ಲಾ ಘಟಕದ ಅಧ್ಯಕ್ಷೆ ರಾಣಿ ಚಂದ್ರಶೇಖರ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ನಾರಾಯಣಸ್ವಾಮಿ, ಅನನ್ಯ ಹಾರ್ಟ್ ಸಂಸ್ಥೆ ನಿರ್ದೇಶಕಿ ಬಿ.ಎಸ್.ಅನುಪಮಾ, ಮಹಿಳಾ ಮುಖಂಡರಾದ ನೀನಾ ಪಟೇಲ್, ರಶ್ಮಿ, ಗಜಲಕ್ಷ್ಮಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !