ಆ್ಯರನ್ ಫಿಂಚ್ ಶತಕದ ಪಂಚ್: ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾಗೆ ಗೆಲುವು

ಗುರುವಾರ , ಜೂಲೈ 18, 2019
23 °C
ಕರುಣಾರತ್ನೆ ಹೋರಾಟಕ್ಕೆ ಸಿಗದ ಫಲ

ಆ್ಯರನ್ ಫಿಂಚ್ ಶತಕದ ಪಂಚ್: ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾಗೆ ಗೆಲುವು

Published:
Updated:

ಲಂಡನ್: ಶನಿವಾರ ದಿಮುತ್‌ ಕರುಣಾರತ್ನೆ ಮೂರು ರನ್‌ಗಳಿಂದ ಶತಕ ತಪ್ಪಿಸಿಕೊಂಡರು. ಅದರೊಂದಿಗೆ ಶ್ರೀಲಂಕಾ ತಂಡದ ಜಯದ ಅವಕಾಶವೂ ಕೈತಪ್ಪಿತು. ಆ್ಯರನ್ ಫಿಂಚ್ ಶತಕದ ಬಲದಿಂದ ಆಸ್ಟ್ರೇಲಿಯಾ ಗೆದ್ದು ಬೀಗಿತು.

ಹೋದ ಎರಡು ಪಂದ್ಯಗಳಲ್ಲಿ ಮಳೆಯಲ್ಲಿ ತೊಯ್ದು ತೊಪ್ಪೆಯಾಗಿದ್ದ ಶ್ರೀಲಂಕಾ ತಂಡವು ಇಲ್ಲಿ ಟಾಸ್ ಗೆದ್ದು ಎದುರಾಳಿಯನ್ನು ಆಡಲಿಳಿಸಿತು. ಡೇವಿಡ್ ವಾರ್ನರ್ (26 ರನ್) ಮತ್ತು ಶತಕ ದಾಖಲಿಸಿದ ಆ್ಯರನ್ ಫಿಂಚ್ (153; 132ಎಸೆತ, 15ಬೌಂಡರಿ, 5ಸಿಕ್ಸರ್) ಅವರು ಅಸ್ಟ್ರೇಲಿಯಾ ತಂಡಕ್ಕೆ ಉತ್ತಮ ಆರಂಭ ನೀಡಿದರು. ಈ ಬುನಾದಿಯ ಮೇಲೆ ಇನಿಂಗ್ಸ್‌ ಕಟ್ಟಿದ ತಂಡವು 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 334 ರನ್‌ಗಳನ್ನು ಗಳಿಸಿತು. ಶ್ರೀಲಂಕಾ ತಂಡವು 45.5 ಓವರ್‌ಗಳಲ್ಲಿ 247 ರನ್‌ ಗಳಿಸಿತು. ಆಸ್ಟ್ರೇಲಿಯಾ ತಂಡವು 87 ರನ್‌ಗಳಿಂದ ಜಯಿಸಿತು.

ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೆ ಉತ್ತಮ ಆರಂಭ ಲಭಿಸಿತ್ತು. ನಾಯಕ ದಿಮುತ್‌ ಕರುಣಾರತ್ನೆ (97; 108ಎಸೆತ, 9 ಬೌಂಡರಿ) ಮತ್ತು ಕುಶಾಲ ಪೆರೆರಾ (52; 36ಎಸೆತ, 5ಬೌಂಡರಿ, 1ಸಿಕ್ಸರ್) ಮೊದಲ ವಿಕೆಟ್ ಜೊತೆಯಾಟದಲ್ಲಿ 15.3 ಓವರ್‌ಗಳಲ್ಲಿ 115 ರನ್‌ಗಳನ್ನು ಪೇರಿಸಿದರು. ಇದರಿಂದಾಗಿ ಗೆಲುವಿನ ನಿರೀಕ್ಷೆ ಮೂಡಿತ್ತು. ಆದರೆ, ಮಿಷೆಲ್ ಸ್ಟಾರ್ಕ್‌ (55ಕ್ಕೆ4) ಅವರು ಬಲವಾದ ಪೆಟ್ಟು ಕೊಟ್ಟರು. ಅವರಿಗೆ ಪ್ಯಾಟ್ ಕಮಿನ್ಸ್‌ (38ಕ್ಕೆ2) ಮತ್ತು ಕೇನ್ ರಿಚರ್ಡ್ಸನ್ (47ಕ್ಕೆ3) ಜೊತೆ ನೀಡಿದರು. ಇದರಿಂದಾಗಿ ಲಂಕಾ ತಂಡವು ಕುಸಿಯಿತು.

ಫಿಂಚ್–ಪಂಚ್: ಟೂರ್ನಿಯ ಮೊದಲ ಎರಡು ಪಂದ್ಯಗಳಲ್ಲಿ ಫಿಂಚ್ ಫಾರ್ಮ್‌ನಲ್ಲಿರಲಿಲ್ಲ. ಆದರೆ, ಪಾಕ್ ಎದುರಿನ ಪಂದ್ಯದಲ್ಲಿ ಅವರು ಅರ್ಧಶತಕ ಗಳಿಸಿದ್ದರು. ಈ ಪಂದ್ಯದಲ್ಲಿ ಕ್ರೀಸ್‌ಗೆ ಬಂದವರೇ ಬೀಸಾಟವಾಡಿದರು. ಇನ್ನೊಂದು ಬದಿಯಲ್ಲಿದ್ದ ವಾರ್ನರ್  ತಾಳ್ಮೆಯ ಆಟವಾಡಿದರು. ಅವರು ಏಕಾಗ್ರತೆ ಸಾಧಿಸಲು ಪರದಾಡಿದ್ದು ಸ್ಪಷ್ಟವಾಗಿತ್ತು. ಆದರೂ 17ನೇ ಓವರ್‌ನವರೆಗೆ ಫಿಂಚ್ ಆಟಕ್ಕೆ ಹೆಚ್ಚು ಅವಕಾಶ ಕೊಟ್ಟರು. ಮೊದಲ ವಿಕೆಟ್ ಜೊತೆಯಾಟದಲ್ಲಿ  80 ರನ್‌ಗಳು ಹರಿದುಬಂದವು. ಧನಂಜಯ ಡಿಸಿಲ್ವಾ ಎಸೆತವನ್ನು ಆಡುವಲ್ಲಿ ಎಡವಿದ ವಾರ್ನರ್ ಬೌಲ್ಡ್ ಆದರು. ಉಸ್ಮಾನ್ ಖ್ವಾಜಾ (10ರನ್) ಅವರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಇರಲಿಲ್ಲ. ಸ್ಮಿತ್ ಅವರು ಫಿಂಚ್‌ ಜೊತೆಗೆ ರನ್‌ ವೇಗ ಹೆಚ್ಚಿಸಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ  173 ರನ್‌ಗಳನ್ನು ಸೇರಿಸಿದರು. ಇದರಿಂದಾಗಿ ತಂಡ 350 ರನ್‌ಗಳಿಗಿಂತಲೂ ಹೆಚ್ಚು ಮೊತ್ತ ಗಳಿಸುವ ನಿರೀಕ್ಷೆ ಮೂಡಿತ್ತು.  43ನೇ ಓವರ್‌ನಲ್ಲಿ ಫಿಂಚ್‌, ಇಸುರು ಉಡಾನ ಅವರ ಎಸೆತದಲ್ಲಿ ಕರುಣಾರತ್ನೆಗೆ ಕ್ಯಾಚಿತ್ತರು. ಅದರೊಂದಿಗೆ ಜೊತೆಯಾಟವೂ ಮುರಿದುಬಿತ್ತು. ನಂತರದ ಓವರ್‌ನಲ್ಲಿ ಸ್ಮಿತ್ (73; 59ಎಸೆತ, 7ಬೌಂಡರಿ 1 ಸಿಕ್ಸರ್) ಲಸಿತ್ ಮಾಲಿಂಗ ಎಸೆತದಲ್ಲಿ ಬೌಲ್ಡ್‌ ಆದರು.

ಕ್ರೀಸ್‌ಗೆ ಬಂದ ಗ್ಲೆನ್ ಮ್ಯಾಕ್ಸ್‌ವೆಲ್ 25 ಎಸೆತಗಳಲ್ಲಿ 46 ರನ್‌ ಚಚ್ಚಿದರು. ಅವರು ಐದು ಬೌಂಡರಿ ಮತ್ತು ಒಂದು ಸಿಕ್ಸರ್‌ ಕೂಡ ಸಿಡಿಸಿದರು. ಆದರೆ, ಅವರಿಗೆ ಉಳಿದ ಬ್ಯಾಟ್ಸ್‌ಮನ್‌ಗಳು ಉತ್ತಮ ಬೆಂಬಲ ನೀಡಲಿಲ್ಲ.

ಇಸುರು ಉಡಾನ ಅವರು ಕೊನೆಯ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು. ಅವರು ಶಾನ್ ಮಾರ್ಷ್ ವಿಕೆಟ್ ಕಬಳಿಸಿದ್ದಷ್ಟೇ ಅಲ್ಲ, ಅಲೆಕ್ಸ್ ಕ್ಯಾರಿ ಮತ್ತು ಪ್ಯಾಟ್ ಕಮಿನ್ಸ್‌ ಅವರನ್ನು ರನ್‌ಔಟ್ ಮಾಡಿ ಮಿಂಚಿದರು.

ಆ್ಯರನ್ ಫಿಂಚ್ ಸಾಧನೆ
ಆಸ್ಟ್ರೇಲಿಯಾ ತಂಡದ ನಾಯಕ ಆ್ಯರನ್ ಫಿಂಚ್ ಅವರು 2019ರಲ್ಲಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು. ಅವರು ತಮ್ಮ ಸಹ ಆಟಗಾರ ಉಸ್ಮಾನ್ ಖ್ವಾಜಾ ಅವರನ್ನು ಹಿಂದಿಕ್ಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !