ಮೇಕೆದಾಟು: ಶೀಘ್ರ ಮುಖ್ಯಮಂತ್ರಿಗಳ ಸಭೆ

ಬುಧವಾರ, ಜೂಲೈ 17, 2019
29 °C
ಕರ್ನಾಟಕದ ಮುಖ್ಯಮಂತ್ರಿಗೆ ಕೇಂದ್ರ ಜಲಶಕ್ತಿ ಸಚಿವ ಶೇಖಾವತ್‌ ಭರವಸೆ

ಮೇಕೆದಾಟು: ಶೀಘ್ರ ಮುಖ್ಯಮಂತ್ರಿಗಳ ಸಭೆ

Published:
Updated:

ನವದೆಹಲಿ: ‘ಮೇಕೆದಾಟು ಯೋಜನೆಗೆ ಸಂಬಂಧಿಸಿ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಶೀಘ್ರವೇ ಕರ್ನಾಟಕ ಮತ್ತು ತಮಿಳುನಾಡಿನ ಮುಖ್ಯಮಂತ್ರಿಗಳ ಸಭೆ ಕರೆಯಲಾಗುವುದು’ ಎಂದು ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಭರವಸೆ ನೀಡಿದರು.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಶನಿವಾರ ಶೇಖಾವತ್‌ ಅವರನ್ನು ಭೇಟಿಮಾಡಿ ಮೇಕೆದಾಟು ಮತ್ತು ಮಹದಾಯಿ ಯೋಜನೆಗಳಿಗೆ ಅನುಮೋದನೆ ನೀಡಬೇಕು ಎಂದು ಕೋರಿದ್ದರು. ಆ ಸಂದರ್ಭದಲ್ಲಿ ಮುಖ್ಯಮಂತ್ರಿಗೆ ಈ ಭರವಸೆ ನೀಡಿದ ಶೇಖಾವತ್‌, ‘ಪ್ರಧಾನಿ ಜೊತೆಗೆ ಚರ್ಚಿಸಿ ಶೀಘ್ರವೇ ಸಭೆ ಆಯೋಜಿಸಲಾಗುವುದು’ ಎಂದರು.

ನೀತಿ ಆಯೋಗದ ಸಭೆಗೆ ಬಂದಿದ್ದ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಪ್ರತ್ಯೇಕವಾಗಿ ಶೇಖಾವತ್‌ ಅವರನ್ನು ಭೇಟಿಯಾದರು. ಕುಮಾರಸ್ವಾಮಿ ಅವರು ಯೋಜನೆಗೆ ಶೀಘ್ರ ಅನುಮೋದನೆ ಕೋರಿದರೆ, ತಮಿಳುನಾಡು ಮುಖ್ಯಮಂತ್ರಿ ಪ್ರಸ್ತಾವವನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರ ಜಲಸಂಪನ್ಮೂಲ ಸಚಿವಾಲಯ ಅಧೀನದ ನೋಡಲ್‌ ಸಂಸ್ಥೆ, ಕೇಂದ್ರ ಜಲ ಆಯೋಗವು (ಸಿಡಬ್ಲ್ಯೂಸಿ) ಈಗಾಗಲೇ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಯೋಜನೆ ಅನುಷ್ಠಾನ ಸಾಧ್ಯತಾ ವರದಿಗೆ ಅನುಮೋದನೆ ನೀಡಿ, ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಲ್ಲಿಸಲು ಸೂಚನೆ ನೀಡಿತ್ತು. ಅದರಂತೆ ಕರ್ನಾಟಕವು ಡಿಪಿಆರ್‌ ಅನ್ನು ಸಲ್ಲಿಸಿದೆ.

‘ಡಿಪಿಆರ್‌ ಅನ್ನು ಜಲ ಆಯೋಗವು ತಮಿಳುನಾಡಿನ ಅವಗಾಹನೆಗೆ ತಂದಿದೆ. ಆದರೆ, ತಮಿಳುನಾಡು ಈವರೆಗೆ ತನ್ನ ಅಭಿಪ್ರಾಯ ದಾಖಲಿಸಿಲ್ಲ. ತಮಿಳುನಾಡಿನ ಅಭಿಪ್ರಾಯ ಆಧರಿಸಿ ಕೇಂದ್ರವು ಯೋಜನೆ ಕುರಿತು ನಿರ್ಧಾರ ಕೈಗೊಳ್ಳಬೇಕಿದೆ ಎಂದು ಕುಮಾರಸ್ವಾಮಿ ಅವರು ಸಚಿವ ಶೇಖಾವತ್‌ ಅವರಿಗೆ ಮಾಹಿತಿ ನೀಡಿದರು.

ಮೇಕೆದಾಟು ಬಳಿ ಕಾವೇರಿ ನದಿಗೆ ಜಲಾಶಯ ನಿರ್ಮಿಸಲು ಕರ್ನಾಟಕ ಉದ್ದೇಶಿಸಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಲಭ್ಯವಾಗುವ ಹೆಚ್ಚುವರಿ 66 ಟಿಎಂಸಿ ಅಡಿ ನೀರು ಸಂಗ್ರಹಣೆ ಇದರ ಉದ್ದೇಶ. ಈ ಪೈಕಿ 16 ಟಿಎಂಸಿ ಅಡಿ ನೀರನ್ನು ರಾಮನಗರ, ಕನಕಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲ ಪಟ್ಟಣಗಳಿಗೆ ಕುಡಿಯುವ ನೀರು ಉದ್ದೇಶಕ್ಕಾಗಿಯೂ ಬಳಸಲು ಉದ್ದೇಶಿಸಲಾಗಿದೆ.

ಆದರೆ, ತಮಿಳುನಾಡು ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ‘ಇದರಿಂದ ಕಾವೇರಿ ನದಿ ನೀರು ಹಂಚಿಕೆಯಲ್ಲಿ ತನ್ನ ಪಾಲಿನ ನೀರಿಗೆ ಕಡಿತ ಆಗಬಹುದು. ಅಲ್ಲದೆ, ಇದು ಸುಪ್ರೀಂ ಕೋರ್ಟ್‌ ಆದೇಶದ ಉಲ್ಲಂಘನೆ ಆಗಲಿದೆ ಎಂಬುದು ಆ ರಾಜ್ಯದ ತಕರಾರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !