ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ

ಗುರುವಾರ , ಜೂಲೈ 18, 2019
22 °C
ಎಲ್‌ಕೆಜಿ, ಇಂಗ್ಲಿಷ್‌ ಮಾಧ್ಯಮ 1ನೇ ತರಗತಿಗೆ ಶಾಸಕ ತನ್ವೀರ್‌ ಚಾಲನೆ

ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ

Published:
Updated:
Prajavani

ಮೈಸೂರು: ‘ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವುದಿಲ್ಲ ಎಂಬ ಕಾರಣಕ್ಕೆ ಮಕ್ಕಳನ್ನು ಸೇರಿಸಲು ಪೋಷಕರು ಹಿಂಜರಿಯುತ್ತಿದ್ದರು. ಹೀಗಾಗಿ, ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ರಾಜ್ಯ ಸರ್ಕಾರ ಪ್ರಾರಂಭಿಸಿದೆ’ ಎಂದು ಶಾಸಕ ತನ್ವೀರ್‌ ಸೇಠ್‌ ಹೇಳಿದರು.

ರಾಜೇಂದ್ರ ನಗರದ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಶನಿವಾರ ಪೂರ್ವ ಪ್ರಾರ್ಥಮಿಕ ತರಗತಿ (ಎಲ್‌ಕೆಜಿ) ಹಾಗೂ ಇಂಗ್ಲಿಷ್‌ ಮಾಧ್ಯಮದ 1ನೇ ತರಗತಿ ಉದ್ಘಾಟಿಸಿ ಮಾತನಾಡಿದರು.

‘ಸಚಿವನಾಗಿದ್ದಾಗ ರೂಪಿಸಿದ ಕಾರ್ಯಕ್ರಮವನ್ನು ನನ್ನ ಕ್ಷೇತ್ರದಲ್ಲಿ ಉದ್ಘಾಟಿಸಲು ಅವಕಾಶ ಲಭಿಸಿದೆ. ಬಡಮಕ್ಕಳು ಕೂಡ ಗುಣಮಟ್ಟದ ಶಿಕ್ಷಣ ಪಡೆಯಬೇಕು. ಸರ್ಕಾರಿ ಶಾಲೆಗಳಿಗೆ ಆದ್ಯತೆ ನೀಡಲು ಪ್ರಾರಂಭದಿಂದಲೇ ಇಂಗ್ಲಿಷ್‌ ಮಾಧ್ಯಮ ಹಾಗೂ ಒಂದೇ ಕಡೆ ಎಲ್‌ಕೆಜಿಯಿಂದ 12ನೇ ತರಗತಿ ವರೆಗೆ ಶಿಕ್ಷಣ ಒದಗಿಸಲು ಕರ್ನಾಟಕ ಪಬ್ಲಿಕ್ ಶಾಲೆ ಹೆಸರಿನಲ್ಲಿ ಶಾಲೆಗಳನ್ನು ಆರಂಭಿಸಲಾಗುತ್ತಿದೆ’ ಎಂದರು.

ಎಸ್‌ಡಿಎಂಸಿಗಳು ಆಸಕ್ತಿ ವಹಿಸಿದ ಕಡೆಗಳಲ್ಲಿ ಎಲ್‌ಕೆಜಿ ಆರಂಭಿಸಿದ್ದೇವೆ. ಜೊತೆಗೆ ಒಂದನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮ ಪರಿಚಯಿಸುತ್ತಿದ್ದೇವೆ. ಹೀಗಾಗಿ, ಈಗ ಸರ್ಕಾರಿ ಶಾಲೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಕನ್ನಡ ಮಾಧ್ಯಮ ಶಾಲೆಗಳೂ ಇರಲಿವೆ ಎಂದು ತಿಳಿಸಿದರು.

ಕನ್ನಡ ಭಾಷೆಗೆ ಇದರಿಂದ ತೊಡಕು ಉಂಟಾಗುವುದಿಲ್ಲ. ಸರ್ಕಾರಿ ಶಾಲೆಗೆ ಬರುವವರು ಬಡಮಕ್ಕಳು. ಆ ಮಕ್ಕಳಿಗೆ ಉತ್ತಮ ಭವಿಷ್ಯ ಕಲ್ಪಿಸುವುದು ನಮ್ಮ ಕರ್ತವ್ಯ. ಬಹುಭಾಷೆ ಕಲಿಸಲಾಗುವುದು. ಖಾಸಗಿ ಶಾಲೆಗಳಿಗಿಂತ ನಮ್ಮ ಶಾಲೆಗಳು ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ತೋರಿಸುತ್ತೇವೆ ಎಂದು ನುಡಿದರು.

‘ಶಿಕ್ಷಕರಿಗೆ ಅನುಗುಣವಾಗಿ ಪ್ರಾರಂಭದಲ್ಲಿ 30 ಮಕ್ಕಳನ್ನು ಮಾತ್ರ ಸೇರಿಸಿಕೊಳ್ಳುತ್ತಿದ್ದೇವೆ. ಪ್ರತಿ 30 ಮಕ್ಕಳಿಗೆ ಒಬ್ಬರು ಶಿಕ್ಷಕರು ಇರುತ್ತಾರೆ. ಬೇಡಿಕೆ ಹೆಚ್ಚಿದ್ದಲ್ಲಿ ಮತ್ತೊಂದು ಸೆಕ್ಷನ್‌ ತೆಗೆಯುವ ಬಗ್ಗೆ ರಾಜ್ಯ ಸರ್ಕಾರ ನಿರ್ಧರಿಸಲಿದೆ’ ಎಂದು ಹೇಳಿದರು. ‌

ಡಿಡಿಪಿಐ ಡಾ.ಪಾಂಡುರಂಗ ಮಾತನಾಡಿ, ‘ಕರ್ನಾಟಕ ಪಬ್ಲಿಕ್ ಶಾಲೆಯ ಗುಣಮಟ್ಟವು ಖಾಸಗಿ ಶಾಲೆಗಳ ಶಿಕ್ಷಣಕ್ಕಿಂತ ಉತ್ತಮವಾಗಿರುತ್ತದೆ. ಬೇಡಿಕೆ ಹೆಚ್ಚಿರುವುದರಿಂದ ಮುಂದಿನ ದಿನಗಳಲ್ಲಿ ಸಂಖ್ಯೆಯನ್ನು ಹೆಚ್ಚಿಸಬೇಕು’ ಎಂದರು.

ಈ ಶಾಲೆಯಲ್ಲಿ ಎಲ್‌ಕೆಜಿಗೆ 17 ಮಕ್ಕಳು ಹಾಗೂ ಇಂಗ್ಲಿಷ್‌ ಮಾಧ್ಯಮದ 1ನೇ ತರಗತಿಗೆ 30 ಮಕ್ಕಳು ಇದ್ದಾರೆ. ಇಬ್ಬರು ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗಿದೆ. ಮೈಸೂರಿನಲ್ಲಿ 12 ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭಿಸಲಾಗಿದೆ.

ಪಾಲಿಕೆ ಸದಸ್ಯ ಪ್ರದೀಪ್ ಚಂದ್ರ, ಸಮಗ್ರ ಶಿಕ್ಷಣ ಯೋಜನಾ ಉಪಸಮನ್ವಯಾಧಿಕಾರಿ ಬಸವರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಉದಯಕುಮಾರ್‌, ಕ್ಷೇತ್ರ ಶಿಕ್ಷಣಾಧಿಕಾರಿ ಎ,ಜೆ.ಸೋಮಶೇಖರ್‌, ಕಾಲೇಜು ಅಭಿವೃದ್ಧಿ ಅಧ್ಯಕ್ಷ ಮಹದೇವು, ಪ್ರಾಂಶುಪಾಲ ಎಚ್‌.ಎಂ.ನಂಜುಂಡಸ್ವಾಮಿ, ಉಪಪ್ರಾಂಶುಪಾಲರಾದ ಎಸ್‌.ಶ್ವೇತಾ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !