ಕಾಡು ಪ್ರಾಣಿ ದಾಳಿ; 58 ಕುರಿಗಳು ಸಾವು

ಶನಿವಾರ, ಜೂಲೈ 20, 2019
26 °C
ಆತಂಕದಲ್ಲಿ ಮಂಡಿಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ಲರಾಳ್ಳಹಳ್ಳಿ ಗ್ರಾಮಸ್ಥರು

ಕಾಡು ಪ್ರಾಣಿ ದಾಳಿ; 58 ಕುರಿಗಳು ಸಾವು

Published:
Updated:
Prajavani

ಚಿಕ್ಕಬಳ್ಳಾಪುರ: ತಾಲ್ಲೂಕಿನ ಮಂಡಿಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ಲರಾಳ್ಳಹಳ್ಳಿಯಲ್ಲಿ ಕಾಡುಪ್ರಾಣಿಗಳ ದಾಳಿಯಲ್ಲಿ ಮಂಜುನಾಥ್‌ ಎಂಬುವರು 58 ಕುರಿಗಳು ಮೃತಪಟ್ಟು, ಮೂರು ಕುರಿಗಳು ಗಂಭೀರವಾಗಿ ಗಾಯಗೊಂಡಿವೆ.

ಮಂಜುನಾಥ್ ಅವರು ತಮ್ಮ ಮನೆ ಸಮೀಪದ ದೊಡ್ಡಿಯಲ್ಲಿ 61 ಕುರಿಗಳನ್ನು ಬಿಟ್ಟಿದ್ದರು. ಶನಿವಾರ ರಾತ್ರಿ ನಡೆದ ಈ ಘಟನೆ ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಕಾಡು ಪ್ರಾಣಿಗಳು ಬಹುಪಾಲು ಕುರಿಗಳ ಕತ್ತು, ದೇಹದ ವಿವಿಧ ಭಾಗದಲ್ಲಿ ಕಚ್ಚಿ ರಕ್ತ ಹಿರಿದ ಸ್ಥಿತಿಯಲ್ಲಿ ಕುರಿಗಳ ಮೃತದೇಹಗಳು ಪತ್ತೆಯಾಗಿವೆ. ಈ ಘಟನೆಯ ಬೆನ್ನಲ್ಲೇ ನಲ್ಲರಾಳ್ಳಹಳ್ಳಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ಘಟನೆಯ ಬೆನ್ನಲ್ಲೇ ಪಶು ವೈದ್ಯಕೀಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳು ಕುರಿಗಳ ದೇಹದ ಅಂಗಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಪ್ರಾಣಿಗಳ ಪತ್ತೆಗಾಗಿ ಗ್ರಾಮದ ವಿವಿಧೆಡೆ ಕ್ಯಾಮೆರಾ ಅಳವಡಿಸಿ, ನಿಗಾ ಇಟ್ಟಿದ್ದಾರೆ.

ಅಚ್ಚರಿ ಮೂಡಿಸಿದ ದಾಳಿ:
ಭದ್ರವಾಗಿರುವ ದೊಡ್ಡಿ ಒಳಗೆ ಕಾಡು ಪ್ರಾಣಿಗಳು ನುಗ್ಗಿ ಎಲ್ಲ ಕುರಿಗಳ ಮೇಲೆ ದಾಳಿ ನಡೆಸಿ ಪರಾರಿಯಾಗಿರುವುದು ಗ್ರಾಮಸ್ಥರಿಗೆ ಭೀತಿಯ ಜತೆಗೆ ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿದೆ. ಸುಮಾರು 6 ಅಡಿಗಿಂತಲೂ ಎತ್ತರದ ಕಲ್ಲಿನ ತಡೆಗೋಡೆಯ ಮೇಲೆ ಶಿಟ್‌ ಹೊದ್ದಿಸಿ ನಿರ್ಮಿಸಿರುವ ದೊಡ್ಡಿಗೆ ಸುಲಭವಾಗಿ ಪ್ರಾಣಿಗಳು ಒಳ ನುಸುಳಲು ಸಾಧ್ಯವಿಲ್ಲ. ಮೇಲ್ಭಾಗದಲ್ಲಿ ಇರುವ ಸಣ್ಣ ಕಿಂಡಿಯೊಂದರ ಮೂಲಕ ಪ್ರಾಣಿಗಳು ಒಳ ಪ್ರವೇಶಿಸಿವೆ ಎನ್ನಲಾಗಿದೆ.

ಮಂಜುನಾಥ್‌ ಅವರು ಚಿರತೆ ದಾಳಿ ನಡೆಸಿದೆ ಎಂದು ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ‘ನಮ್ಮ ಭಾಗದಲ್ಲಿ ಚಿರತೆ, ತೋಳ ಅಥವಾ ಕತ್ತೆ ಕಿರುಬದಂತ ಪ್ರಾಣಿಗಳಿವೆ. ಈ ಪೈಕಿ ಚಿರತೆ, ತೋಳ ಕುರಿಗಳ ಮೇಲೆ ದಾಳಿ ನಡೆಸಿರುವ ಸಾಧ್ಯತೆ ಇದೆ’ ಎಂದು ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳು ತಿಳಿಸಿದರು.

‘ನಲ್ಲರಾಳ್ಳಹಳ್ಳಿಯಲ್ಲಿ ಚಿರತೆ ಕುರಿಗಳ ಮೇಲೆ ದಾಳಿ ನಡೆಸಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಆದರೆ ಅದು ಈವರೆಗೆ ನಮಗೆ ಖಚಿತವಾಗಿಲ್ಲ. ಕುರಿಗಳ ದೇಹದ ಮೇಲಿನ ಗಾಯದ ಗುರುತುಗಳು ಸಂಶಯ ಉಂಟು ಮಾಡುತ್ತಿವೆ. ಆ ಭಾಗದಲ್ಲಿ ಈವರೆಗೆ ಚಿರತೆ ಕಾಣಿಸಿಕೊಂಡಿಲ್ಲ. ಹೀಗಾಗಿ ಘಟನೆ ನಡೆದ ಸ್ಥಳದ ಪರಿಸರದಲ್ಲಿ ಕಾಡುಪ್ರಾಣಿಯ ಪತ್ತೆಗೆ ಕ್ಯಾಮೆರಾ ಅಳವಡಿಸುತ್ತಿದ್ದೇವೆ. ಎರಡ್ಮೂರು ದಿನಗಳಲ್ಲಿ ಪ್ರಾಣಿ ಪತ್ತೆ ಮಾಡಲಿದ್ದೇವೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !