ಬಿದಾಯಿ: ವರ್ಷದಿಂದ ಹಣ ಬಾಕಿ!

ಗುರುವಾರ , ಜೂಲೈ 18, 2019
23 °C
ಪ್ರಗತಿ ಪರಿಶೀಲನೆ ಬಳಿಕ ಅಸಮಾಧಾನ ವ್ಯಕ್ತಪಡಿಸಿದ ಐವನ್‌ ಡಿಸೋಜ

ಬಿದಾಯಿ: ವರ್ಷದಿಂದ ಹಣ ಬಾಕಿ!

Published:
Updated:
Prajavani

ಮಂಗಳೂರು: ಅಲ್ಪಸಂಖ್ಯಾತ ಸಮುದಾಯದ ಬಡ ಹೆಣ್ಣು ಮಕ್ಕಳ ಮದುವೆಗೆ ಸಹಾಯಧನ ನೀಡುವ ಬಿದಾಯಿ ಯೋಜನೆಯಡಿ ಒಂದು ವರ್ಷದಿಂದ ಹಣ ಬಿಡುಗಡೆಯಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2,123 ಫಲಾನುಭವಿಗಳಿಗೆ ವರ್ಷದಿಂದ ಸಹಾಯಧನ ವಿತರಿಸಿಲ್ಲ ಎಂದು ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಐವನ್‌ ಡಿಸೋಜ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ಅಬುಲ್‌ ಕಲಾಂ ಆಜಾದ್‌ ಭವನದಲ್ಲಿ ಸೋಮವಾರ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿದಾಯಿ ಯೋಜನೆಯಡಿ ₹ 10.50 ಕೋಟಿ ಸಹಾಯಧನ ಬಿಡುಗಡೆಗೆ ಬಾಕಿ ಇದೆ. ತಕ್ಷಣವೇ ಈ ಮೊತ್ತವನ್ನು ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2013ರಿಂದ ಈವರೆಗೆ ಮುಸ್ಲಿಂ ಧರ್ಮದ 5,463, ಕ್ರೈಸ್ತ ಧರ್ಮದ 724 ಮತ್ತು ಜೈನ ಧರ್ಮದ 31 ಮಂದಿ ಸೇರಿ ಒಟ್ಟು 6,218 ಅರ್ಜಿಗಳು ಬಿದಾಯಿ ಯೋಜನೆಯಡಿ ಸಹಾಯಧನ ಕೋರಿ ಅರ್ಜಿ ಸಲ್ಲಿಸಿದ್ದರು. 284 ಅರ್ಜಿಗಳು ತಿರಸ್ಕೃತವಾಗಿವೆ. ಮುಸ್ಲಿಂ ಧರ್ಮದ 2,011, ಕ್ರೈಸ್ತ ಧರ್ಮದ 107 ಮತ್ತು ಜೈನ ಧರ್ಮದ ಐದು ಮಂದಿಗೆ 2018ರ ಮಾರ್ಚ್‌ನಿಂದ ಹಣ ಬಿಡುಗಡೆ ಆಗಿಲ್ಲ ಎಂದರು.

‘ಇಲಾಖೆಯ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕವಷ್ಟೇ ಈ ವಿಷಯ ನನಗೆ ತಿಳಿಯಿತು. ಬಿದಾಯಿ ಒಂದು ಮಹತ್ವದ ಯೋಜನೆ. ಅರ್ಜಿ ಸಲ್ಲಿಸಿದವರು ವರ್ಷಗಟ್ಟಲೆ ಕಾಯುವಂತೆ ಆಗಬಾರದು. ತಕ್ಷಣವೇ ಅನುದಾನ ಬಿಡುಗಡೆ ಮಾಡುವಂತೆ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯುತ್ತೇನೆ’ ಎಂದು ಐವನ್‌ ತಿಳಿಸಿದರು.

ಗುರಿ ನಿಗದಿ ಬೇಡ: ಹಾಸ್ಟೆಲ್‌ ಸೌಕರ್ಯ ಇಲ್ಲದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸುವ ವಿದ್ಯಾಸಿರಿ ಯೋಜನೆಗೆ ಕಳೆದ ವರ್ಷ ಜಿಲ್ಲೆಯಲ್ಲಿ 1,900 ವಿದ್ಯಾರ್ಥಿಗಳ ಗುರಿ ನಿಗದಿ ಮಾಡಲಾಗಿತ್ತು. 7,814 ಅರ್ಜಿಗಳು ಬಂದಿದ್ದವು. 5,900 ಜನರಿಗೆ ನೆರವು ದೊರಕಿಲ್ಲ. ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಗುರಿ ನಿಗದಿ ಪಡಿಸದಂತೆ ಒತ್ತಾಯ ಮಾಡಲಾಗುವುದು ಎಂದರು.

ಶ್ರಮಶಕ್ತಿ ಯೋಜನೆಯಡಿ 314 ಫಲಾನುಭವಿಗಳ ಆಯ್ಕೆಗೆ ಗುರಿ ನಿಗದಿ ಮಾಡಲಾಗಿದೆ. 29,000 ಅರ್ಜಿಗಳು ಬಂದಿವೆ. ಈ ಯೋಜನೆಯಲ್ಲೂ ಗುರಿ ಹೆಚ್ಚಿಸುವಂತೆ ಆಗ್ರಹಿಸಲಾಗುವುದು. ಅರಿವು ಯೋಜನೆಯಡಿ ಕಳೆದ ವರ್ಷದ ಬಾಬ್ತು ₹16.48 ಕೋಟಿ ಪ್ರೋತ್ಸಾಹಧನ ವಿತರಣೆಗೆ ಬಾಕಿ ಇದೆ. ಈ ಕಾರಣದಿಂದ ಈ ವರ್ಷ 200 ಅರ್ಜಿಗಳು ಮಾತ್ರ ಬಂದಿವೆ. ಈ ಎಲ್ಲ ಸಮಸ್ಯೆಗಳನ್ನೂ ಪರಿಹರಿಸುವಂತೆ ಅಧಿಕಾರಿಗಳನ್ನು ಕೋರಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯ 10 ವಿದ್ಯಾರ್ಥಿ ನಿಲಯಗಳಿವೆ. ಒಬ್ಬರೇ ಮೇಲ್ವಿಚಾರಕರು ಇದ್ದಾರೆ. ಹೆಚ್ಚಿನ ಸಂಖ್ಯೆಯ ಮೇಲ್ವಿಚಾರಕರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು. ಎರಡು ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದ್ದು, ಇನ್ನೂ ಒಂದು ಬಾಲಕರ ವಿದ್ಯಾರ್ಥಿ ನಿಲಯ ಆರಂಭಕ್ಕೆ ಬೇಡಿಕೆ ಸಲ್ಲಿಸಲಾಗುವುದು ಎಂದರು.

ಜಿಲ್ಲಾ ಅಲ್ಪಸಂಖ್ಯಾತರ ಅಭಿವೃದ್ಧಿ ಅಧಿಕಾರಿ ಸನಾವುಲ್ಲಾ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮೊಹಮ್ಮದ್ ಸಫ್ವಾನ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !