2 ಕೆ.ಜಿ. ಗಾಂಜಾ ವಶ: ನಾಲ್ವರ ಬಂಧನ

ಗುರುವಾರ , ಜೂಲೈ 18, 2019
23 °C
ಅಂತರ ಜಿಲ್ಲಾ ಗಾಂಜಾ ಪೂರೈಕೆ ಜಾಲ ಪೊಲೀಸರ ಬಲೆಗೆ

2 ಕೆ.ಜಿ. ಗಾಂಜಾ ವಶ: ನಾಲ್ವರ ಬಂಧನ

Published:
Updated:
Prajavani

ಮಂಗಳೂರು: ಅಂತರ ಜಿಲ್ಲಾ ಗಾಂಜಾ ಪೂರೈಕೆ ಜಾಲವೊಂದನ್ನು ಭಾನುವಾರ ಪತ್ತೆ ಮಾಡಿರುವ ಮಂಗಳೂರು ಉತ್ತರ ಉಪ ವಿಭಾಗದ ಅಪರಾಧ ಪತ್ತೆ ದಳದ ಪೊಲೀಸರು, 2 ಕೆ.ಜಿ. ಗಾಂಜಾ ಸಮೇತ ನಾಲ್ವರನ್ನು ಬಂಧಿಸಿದ್ದಾರೆ.

ಮಂಗಳೂರಿನ ಕೊಟ್ಟಾರದವನಾಗಿದ್ದು, ಹಾಲಿ ಉಡುಪಿ ಜಿಲ್ಲೆಯ ಮಲ್ಪೆ ನಿವಾಸಿ ಕಿರಣ್ ಮೆಂಡನ್ ಅಲಿಯಾಸ್‌ ಕಿರಣ್ (34), ಬಂಟ್ವಾಳ ತಾಲೂಕಿನ ಸಜಿಪಮೂಡ ಸುಭಾಷ್‌ನಗರದ ಆಸಿಫ್ (27), ಕುದ್ರೋಳಿಯವನಾಗಿದ್ದು, ಈಗ ಉಳ್ಳಾಲ ನಿವಾಸಿಯಾಗಿರುವ ಅಬ್ದುಲ್ ರಹೀಂ ಅಲಿಯಾಸ್‌ ಅಂಕುಶ್ ರಹೀಂ (47) ಮತ್ತು ಬೋಳಿಯಾರು ಕುರ್ನಾಡು ನಿವಾಸಿ ಹಫೀಝ್ ಅಲಿಯಾಸ್‌ ಮೊಯ್ದೀನ್ (33) ಬಂಧಿತ ಆರೋಪಿಗಳು.

‘ಬಂಧಿತ ಆರೋಪಿಗಳಿಂದ ₹ 40,000 ವೌಲ್ಯದ 2 ಕೆ.ಜಿ. ಗಾಂಜಾ, ₹ 2 ಲಕ್ಷ ಮೌಲ್ಯದ ಆಟೊ, ₹ 30,000 ಮೌಲ್ಯದ ಐದು ಮೊಬೈಲ್‌ಗಳು ಸೇರಿದಂತೆ ₹ 2.70 ಲಕ್ಷ ವೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಸಂದೀಪ್ ಪಾಟೀಲ್‌ ತಿಳಿಸಿದ್ದಾರೆ.

ರೈಲಿನಲ್ಲಿ ಸಾಗಿಸಲು ಯತ್ನ:

ಭಾನುವಾರ ವಿಶ್ವ ಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಭಾಗವಾಗಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಪಂದ್ಯವಿತ್ತು. ಈ ಕಾರಣದಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸಲಾಗಿತ್ತು. ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಶ್ರೀನಿವಾಸ್‌ ಆರ್‌. ಗೌಡ ನೇತೃತ್ವದ ತಂಡ ಸುರತ್ಕಲ್‌ನ ಚೊಕ್ಕಬೆಟ್ಟು ಪ್ರದೇಶದಲ್ಲಿ ಗಸ್ತು ತಿರುಗುತ್ತಿತ್ತು.

ಅದೇ ಸಮಯಕ್ಕೆ ತಂಡವೊಂದು ಬಿ.ಸಿ.ರೋಡ್‌ ಕಡೆಯಿಂದ ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಆಟೊ ರಿಕ್ಷಾದಲ್ಲಿ ಬೃಹತ್‌ ಪ್ರಮಾಣದ ಗಾಂಜಾ ತರುತ್ತಿದ್ದು, ಕಿರಣ್‌ ಮೆಂಡನ್‌ ಎಂಬಾತನಿಗೆ ಹಸ್ತಾಂತರಿಸಲಾಗುತ್ತದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಅಪರಾಧ ಪತ್ತೆದಳದ ಪೊಲೀಸರನ್ನು ಎಸಿಪಿ ಕಾರ್ಯಾಚರಣೆಗೆ ನಿಯೋಜಿಸಿದ್ದರು.

‘ನಮ್ಮ ಪೊಲೀಸರು ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಕಾರ್ಯಾಚರಣೆಯಲ್ಲಿದ್ದರು. ರಾತ್ರಿ 7 ಗಂಟೆಗೆ ಆಟೊ ಅಲ್ಲಿಗೆ ಬಂದಿತು. ಮಾಹಿತಿದಾರರು ನೀಡಿದ್ದ ಚಹರೆಯನ್ನು ಹೋಲುತ್ತಿದ್ದ ವ್ಯಕ್ತಿಯ ಬಳಿ ವಾಹನ ನಿಂತಿತು. ಅದರಲ್ಲಿದ್ದ ಇಬ್ಬರು ಕೆಳಕ್ಕಿಳಿದು ಗಾಂಜಾ ಕಟ್ಟನ್ನು ಆತನಿಗೆ ಹಸ್ತಾಂತರಿಸಿದರು. ತಕ್ಷಣವೇ ನಾಲ್ವರನ್ನೂ ಬಂಧಿಸಿ, ಗಾಂಜಾ ವಶಪಡಿಸಿಕೊಳ್ಳಲಾಯಿತು. ವಶಕ್ಕೆ ಪಡೆದ ಸ್ವತ್ತು ಮತ್ತು ಆರೋಪಿಗಳನ್ನು ಮುಂದಿನ ಕ್ರಮಕ್ಕಾಗಿ ಸುರತ್ಕಲ್‌ ಪೊಲೀಸ್‌ ಠಾಣೆಗೆ ಹಸ್ತಾಂತರಿಸಲಾಗಿದೆ’ ಎಂದು ಕಮಿಷನರ್‌ ತಿಳಿಸಿದ್ದಾರೆ.

ಬಜ್ಪೆ ಠಾಣೆ ಇನ್‌ಸ್ಪೆಕ್ಟರ್‌ ಪರಶಿವಮೂರ್ತಿ, ಸುರತ್ಕಲ್ ಠಾಣೆ ಇನ್‌ಸ್ಪೆಕ್ಟರ್‌ ರಾಮಕೃಷ್ಣ ಕೆ.ಜಿ., ಮಂಗಳೂರು ಉತ್ತರ ವಿಭಾಗದ ವಿಶೇಷ ಅಪರಾಧ ಪತ್ತೆ ದಳ ಸಬ್‌ ಇನ್‌ಸ್ಪೆಕ್ಟರ್‌ ಮುಹಮ್ಮದ್, ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಕುಶಲ ಮಣಿಯಾಣಿ, ಕಾನ್‌ಸ್ಟೆಬಲ್‌ಗಳಾದ ಸತೀಶ್ ಎಂ., ವಿಜಯ ಕಾಂಚನ್, ಇಸಾಕ್ ಮತ್ತು ಶರಣ್ ಕಾಳಿ, ಪಣಂಬೂರು ಹಾಗೂ ಸುರತ್ಕಲ್ ಠಾಣೆಗಳ ಸಿಬ್ಬಂದಿ ಕಾರ್ಯಾಚರನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !