ಯುಪಿಒಆರ್‌ ಕಡ್ಡಾಯ: ಇಂದು ಚರ್ಚೆ

ಗುರುವಾರ , ಜೂಲೈ 18, 2019
22 °C
ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಐವನ್‌ ಡಿಸೋಜ ಹೇಳಿಕೆ

ಯುಪಿಒಆರ್‌ ಕಡ್ಡಾಯ: ಇಂದು ಚರ್ಚೆ

Published:
Updated:
Prajavani

ಮಂಗಳೂರು: ನಗರದ ವ್ಯಾಪ್ತಿಯಲ್ಲಿ ನಗರ ಆಸ್ತಿ ಹಕ್ಕುಗಳ ದಾಖಲೆ (ಯುಪಿಒಆರ್‌) ಕಡ್ಡಾಯ ಜಾರಿ ಕುರಿತು ಮಂಗಳವಾರ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಚರ್ಚಿಸಿ, ನಿರ್ಧಾರಕ್ಕೆ ಬರಲಾಗುವುದು ಎಂದು ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಐವನ್‌ ಡಿಸೋಜ ತಿಳಿಸಿದರು.

ಇಲ್ಲಿನ ಮಿನಿ ವಿಧಾನಸೌಧದಲ್ಲಿರುವ ಯುಪಿಒಆರ್‌ ಕಚೇರಿಗೆ ಸೋಮವಾರ ಭೇಟಿನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ನಗರದಲ್ಲಿ ಶೇಕಡ 26ರಷ್ಟು ಆಸ್ತಿಗಳಿಗೆ ಮಾತ್ರ ಯುಪಿಒಆರ್‌ ವಿತರಿಸಲಾಗಿದೆ. ಶೇ 74ರಷ್ಟು ಆಸ್ತಿಗಳಿಗೆ ಇನ್ನೂ ಕಾರ್ಡ್‌ ವಿತರಣೆ ಆಗಿಲ್ಲ. ಈ ಹಂತದಲ್ಲಿ ಸ್ಥಿರಾಸ್ತಿ ನೋಂದಣಿಗೆ ಯುಪಿಒಆರ್‌ ಕಡ್ಡಾಯ ಮಾಡಬೇಕೆ? ಬೇಡವೆ? ಎಂಬುದರ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು’ ಎಂದರು.

ಯುಪಿಒಆರ್‌ ಕಚೇರಿಯಲ್ಲಿ ಮೂಲಸೌಕರ್ಯದ ಕೊರತೆ ಇದೆ. ಸಿಬ್ಬಂದಿ ಕೊರತೆಯೂ ಇದೆ. 36 ಭೂಮಾಪಕರು ಮಾತ್ರ ಇದ್ದಾರೆ. ಕಂಪ್ಯೂಟರ್‌ಗಳ ಕೊರತೆಯೂ ಇದೆ. ಹೆಚ್ಚಿನ ಸಂಖ್ಯೆಯ ಭೂಮಾಪಕರು ಮತ್ತು ಕಂಪ್ಯೂಟರ್‌ಗಳನ್ನು ಒದಗಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಹೆಚ್ಚಿನ ಸೌಲಭ್ಯ ಒದಗಿಸುವಂತೆ ಕಂದಾಯ ಸಚಿವರನ್ನು ಕೋರಲಾಗುವುದು ಎಂದು ತಿಳಿಸಿದರು.

ಶೇ 40ರಷ್ಟು ಪ್ರಗತಿ: ಯುಪಿಒಆರ್‌ ಕೋರಿ 1.53 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಈವರೆಗೆ 41,000 ಕಾರ್ಡ್‌ಗಳನ್ನು ವಿತರಿಸಲಾಗಿದೆ. 25,000 ಅರ್ಜಿಗಳು ವಿಲೇವಾರಿ ಹಂತದಲ್ಲಿವೆ. ಶೇಕಡ 40ರಷ್ಟು ಪ್ರಗತಿ ಸಾಧಿಸಲಾಗಿದೆ. ತಕರಾರು ಮತ್ತು ಆಕ್ಷೇಪಣೆಗಳ ಕಾರಣದಿಂದ ಕೆಲವು ಅರ್ಜಿಗಳ ವಿಲೇವಾರಿ ವಿಳಂಬ ಆಗಿದೆ. ತುರ್ತಾಗಿ ಕಾರ್ಡ್‌ ಬೇಕಿದ್ದವರಿಗೆ ಪ್ರಮಾಣಪತ್ರ ಪಡೆದು, ಹತ್ತು ದಿನಗಳೊಳಗೆ ವಿತರಿಸಲಾಗುತ್ತಿದೆ ಎಂದು ಯುಪಿಒಆರ್‌ ಘಟಕದ ಉಸ್ತುವಾರಿ ಅಧಿಕಾರಿಯಾಗಿರುವ ಪ್ರಸಾದಿನಿ ವಿವರ ನೀಡಿದರು.

ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ಟೋಕನ್‌ ನೀಡಲಾಗುತ್ತಿದೆ. ಸಂಜೆ 5ರ ನಂತರವೂ ಸರದಿಯಲ್ಲಿರುವ ಎಲ್ಲರಿಂದಲೂ ಬೆರಳಚ್ಚು ಮತ್ತು ದಾಖಲೆ ಪಡೆದು ಕಳುಹಿಸಲಾಗುತ್ತಿದೆ. ಇದಕ್ಕಾಗಿ ರಾತ್ರಿ 7.30ರವರೆಗೂ ಕೆಲಸ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

‘ಆಸ್ತಿಗಳ ಮಾಲೀಕರ ಹತ್ತು ಬೆರಳಚ್ಚುಗಳನ್ನೂ ಪಡೆಯುವ ಪದ್ಧತಿ ಇದೆ. ಇದರಿಂದ ಪ್ರಕ್ರಿಯೆ ವಿಳಂಬವಾಗುತ್ತಿದೆ. ಒಂದು ಬೆರಳಚ್ಚು ಮಾತ್ರ ಪಡೆಯುವ ಕುರಿತು ಸಚಿವರ ಜೊತೆ ಚರ್ಚಿಸಲಾಗುವುದು’ ಎಂದು ಐವನ್‌ ತಿಳಿಸಿದರು.

‘ಯುಪಿಒಆರ್‌ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಸ್ಥಳೀಯ ಶಾಸಕರು ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. ಆದ್ದರಿಂದಲೇ ಇಲ್ಲಿನ ಸಮಸ್ಯೆಗಳ ಕುರಿತು ಅರಿಯಲು ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ’ ಎಂದರು.

ಮಂಗಳೂರು ಉಪ ವಿಭಾಗಾಧಿಕಾರಿ ರವಿಚಂದ್ರ ನಾಯಕ್, ತಹಸೀಲ್ದಾರ್ ಗುರುಪ್ರಸಾದ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !