ಗುರುವಾರ , ಏಪ್ರಿಲ್ 22, 2021
28 °C
ಪೊಲೀಸರಿಗೆ ನಗರ ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ್‌ ಸಲಹೆ

ಹುದ್ದೆಗೆ ತಕ್ಕ ಸಾಮರ್ಥ್ಯ ಬೆಳೆಸಿಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಪೊಲೀಸ್‌ ಇಲಾಖೆಯಲ್ಲಿ ಸೇವೆಯಲ್ಲಿರುವವರು ಹೆಜ್ಜೆ ಹೆಜ್ಜೆಗೂ ಹೊಸತನ್ನು ಕಲಿಯಬೇಕಾದ ಅಗತ್ಯವಿದೆ. ಬಡ್ತಿ ಹೊಂದಿದ ಮೇಲಿನ ಹುದ್ದೆಗೇರುವ ಪೊಲೀಸರು ಅದಕ್ಕೆ ತಕ್ಕ ಸಾಮರ್ಥ್ಯವನ್ನೂ ಗಳಿಸಿಕೊಳ್ಳಬೇಕು ಎಂದು ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ್‌ ಹೇಳಿದರು.

ನಗರದ ಪೊಲೀಸ್‌ ಸಮುದಾಯ ಭವನದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ನಗರ ಪೊಲೀಸ್‌ ಕಮಿಷನರೇಟ್‌ನಲ್ಲಿ ವಿವಿಧ ಹುದ್ದೆಗಳಿಗೆ ಬಡ್ತಿ ಹೊಂದಿರುವ 143 ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ‘ಸ್ಟಾರ್‌’ ಹಾಗೂ ‘ಬ್ಯಾಡ್ಜ್‌ ಫ್ಲ್ಯಾಪ್‌’ ಪ್ರದಾನ ಮಾಡಿ ಅವರು ಮಾತನಾಡಿದರು.

ಪೊಲೀಸರು ಸಮಯಕ್ಕೆ ತಕ್ಕಂತೆ ಜ್ಞಾನ ವೃದ್ಧಿಸಿಕೊಳ್ಳಬೇಕು. ಆಗ ಮಾತ್ರ ವೃತ್ತಿಯಲ್ಲಿ ಯಶಸ್ಸು ಗಳಿಸಲು ಸಾಧ್ಯ. ಈಗ ಎಲ್ಲರೂ ಕಂಪ್ಯೂಟರ್‌ ಜ್ಞಾನ ಹೊಂದುವುದು ಮುಖ್ಯ. ಭವಿಷ್ಯದ ದಿನಗಳಲ್ಲಿ ಸೈಬರ್‌ ಅಪರಾಧ ನಿಯಂತ್ರಣ ಪೊಲೀಸ್‌ ಇಲಾಖೆ ಎದುರಿಸಲಿರುವ ದೊಡ್ಡ ಸವಾಲಾಗಲಿದೆ. ಅದಕ್ಕೆ ಈಗಿನಿಂದಲೇ ಅಧಿಕಾರಿಗಳು ಮತ್ತು ಸಿಬ್ಬಂದಿ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಭಯೋತ್ಪಾದನೆ ಮತ್ತು ನಕ್ಸಲ್‌ ಚಟುವಟಿಕೆಗಳ ನಿಗ್ರಹಕ್ಕೂ ವಿಶೇಷ ನೈಪುಣ್ಯ ಸಾಧಿಸಬೇಕಿದೆ ಎಂದು ಸಲಹೆ ನೀಡಿದರು.

ಜವಾಬ್ದಾರಿ ಹೆಚ್ಚಳ:

ವೃತ್ತಿ ಜೀವನದಲ್ಲಿ ಬಡ್ತಿ ಪಡೆಯುವುದು ಒಂದು ಮುಖ್ಯವಾದ ಘಟ್ಟ ಮತ್ತು ಸಂತಸದ ಸಂದರ್ಭ. ಹಿಂದಿನ ದಿನಗಳಲ್ಲಿ ಪೊಲೀಸ್‌ ಸಿಬ್ಬಂದಿಗೆ ಬಡ್ತಿ ದೊರಕುವುದು ವಿಳಂಬವಾಗುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಕಮಿಷನರೇಟ್‌ ವ್ಯಾಪ್ತಿಯಲ್ಲಿ ಕೆಲವು ವರ್ಷಗಳಿಂದ ಬಾಕಿ ಉಳಿದಿದ್ದ ಕಡತಗಳನ್ನು ವಿಲೇವಾರಿ ಮಾಡಿ 143 ಮಂದಿಗೆ ಬಡ್ತಿ ನೀಡಲಾಗಿದೆ ಎಂದರು.

ಪದೋನ್ನತಿಯಿಂದ ಜವಾಬ್ದಾರಿ ಹೆಚ್ಚುತ್ತದೆ. ಕೆಲಸದ ವಿಧಾನದಲ್ಲೂ ಬದಲಾವಣೆ ಆಗುತ್ತದೆ. ಆಯಾ ಹುದ್ದೆಗಳನ್ನು ನಿರ್ವಹಿಸುವಾಗ ಅದಕ್ಕೆ ತಕ್ಕಂತೆ ಹೆಚ್ಚಿನ ಕಾನೂನು ಮತ್ತು ನಿಯಮಗಳ ಅರಿವು ಅಗತ್ಯ. ಪದೋನ್ನತ ಹೊಂದಿದ ಬಳಿಕ ತಂಡವೊಂದರ ನೇತೃತ್ವ ವಹಿಸುವ ಅವಕಾಶಗಳು ದೊರಕುತ್ತವೆ. ಜನರಿಗೆ ವೇಗವಾಗಿ ಸ್ಪಂದಿಸುವುದಕ್ಕೆ ಎಲ್ಲರೂ ಸಿದ್ಧರಾಗಬೇಕು ಎಂದು ಹೇಳಿದರು.

ಈ ಬಾರಿ ಬಡ್ತಿ ಹೊಂದಿದ ಅಧಿಕಾರಿ ಮತ್ತು ಸಿಬ್ಬಂದಿಗೆ ಜೇಷ್ಠತೆ ಹಾಗೂ ಖಾಲಿ ಹುದ್ದೆಗಳ ಸಂಖ್ಯೆಯನ್ನು ಆಧರಿಸಿ ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ನೀಡಲಾಗಿದೆ. ಕಡಿಮೆ ಕೆಲಸ ಇರುವ ಠಾಣೆಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಯಿತು. ಇದು ಸರಿಯಲ್ಲ. ಸವಾಲು ಇರುವ ಸ್ಥಳದಲ್ಲಿ ಕೆಲಸ ಮಾಡುವ ಮೂಲಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಪೊಲೀಸರು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ ಸ್ವಾಗತಿಸಿದರು. ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಲಕ್ಷ್ಮೀಗಣೇಶ್‌ ವಂದಿಸಿದರು. ಎಸಿಪಿಗಳಾದ ಕೆ. ರಾಮರಾವ್‌, ಭಾಸ್ಕರ್‌ ಒಕ್ಕಲಿಗ, ಕೆ. ಮಂಜುನಾಥ ಶೆಟ್ಟಿ, ಎಂ.ವಿ. ಉಪಾಸೆ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.