ಆಕಾಶ್‌ಗೆ ನೋಟಿಸ್‌: ಗೊಂದಲ

ಗುರುವಾರ , ಜೂಲೈ 18, 2019
27 °C

ಆಕಾಶ್‌ಗೆ ನೋಟಿಸ್‌: ಗೊಂದಲ

Published:
Updated:

ಭೋಪಾಲ್‌ (ಪಿಟಿಐ): ಅಧಿಕಾರಿಯೊಬ್ಬರನ್ನು ಬ್ಯಾಟ್‌ನಿಂದ ಥಳಿಸಿದ್ದ ಮಧ್ಯಪ್ರದೇಶದ ಶಾಸಕ ಆಕಾಶ್‌ ವಿಜಯವರ್ಗೀಯ ಅವರಿಗೆ ನೋಟಿಸ್‌ ನೀಡಿದ ವಿಚಾರದಲ್ಲಿ ಬಿಜೆಪಿ ನಾಯಕರು ವಿಭಿನ್ನ ಹೇಳಿಕೆ ನೀಡುತ್ತಿದ್ದು, ಗೊಂದಲ ಸೃಷ್ಟಿಯಾಗಿದೆ.

‘ಆಕಾಶ್‌ಗೆ ಪಕ್ಷವು ನೋಟಿಸ್‌ ನೀಡಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಾನು ಈಗಷ್ಟೇ ದೆಹಲಿಯಿಂದ ಬಂದಿದ್ದೇನೆ. ಆದರೆ ಆಕಾಶ್‌ಗೆ ಏನನ್ನೋ ಕೊಟ್ಟಿದ್ದಾರೆ ಎಂಬ ಸುದ್ದಿಯನ್ನು ಇಲ್ಲಿನ ಪತ್ರಿಕೆಗಳಲ್ಲಿ ಓದಿದೆ’ ಎಂದು ಅವರ ತಂದೆ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಕೈಲಾಶ್‌ ವಿಜಯವರ್ಗೀಯ ಹೇಳಿದ್ದಾರೆ.

ಪುತ್ರನಿಗೆ ನೀವು ಬುದ್ಧಿಮಾತು ಹೇಳಿರುವಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡುತ್ತಾ, ‘ನಾನು ಮಾಡಬೇಕಾದ್ದನ್ನು ಮಾಡಿದ್ದೇನೆ. ಅದನ್ನೆಲ್ಲ ಸಾರ್ವಜನಿಕವಾಗಿ ಚರ್ಚಿಸಲು ಇಚ್ಛಿಸುವುದಿಲ್ಲ’ ಎಂದರು.

ಆದರೆ ಪಕ್ಷದ ರಾಷ್ಟ್ರೀಯ ನಾಯಕರೊಬ್ಬರು, ‘ಆಕಾಶ್‌ಗೆ ಪಕ್ಷದಿಂದ ನೋಟಿಸ್‌ ಜಾರಿ ಮಾಡಲಾಗಿದೆ’ ಎಂದಿದ್ದಾರೆ. ಈ ನಡುವೆ, ‘ನೋಟಿಸ್‌ ನೀಡುವ ವಿಚಾರದಲ್ಲಿ ಯಾವುದೇ ನಿರ್ಧಾರ ಕೈಗೊಂಡಿಲ್ಲ’ ಎಂದು ಪಕ್ಷದ ಮಧ್ಯಪ್ರದೇಶ ಘಟಕದ ಅಧ್ಯಕ್ಷರು ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಧ್ಯಪ್ರದೇಶದ ಬಿಜೆಪಿ ಶಾಸಕ ಸತ್ಯೆಂದ್ರ ಭೂಷಣ್‌ ಸಿಂಗ್‌ ಅವರು, ‘ಅಂಥ ಯಾವುದೇ ಬೆಳವಣಿಗೆ ನಡೆದಿರುವುದು ನನ್ನ ಗಮನಕ್ಕಂತೂ ಬಂದಿಲ್ಲ’ ಎಂದಿದ್ದಾರೆ.

ಆಕಾಶ್‌ ಅವರ ವರ್ತನೆಯನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಹೇಳಿಕೆ ನೀಡಿದ ನಂತರ, ಅವರ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರ ಮುನ್ನೆಲೆಗೆ ಬಂದಿತ್ತು.

‘ಮೋದಿ ಅವರ ಟೀಕೆಯ ನಂತರ ಆಕಾಶ್‌ ಎಲ್ಲೂ ಕಾಣಿಸುತ್ತಿಲ್ಲ, ಎಲ್ಲಿಗೆ ಹೋಗಿದ್ದಾರೆ’ ಎಂದು ಮಾಧ್ಯಮದವರು ಶನಿವಾರ ಕೈಲಾಶ್‌ ಅವರನ್ನು ಪ್ರಶ್ನಿಸಿದಾಗ, ‘ಸೋಮವಾರದಿಂದ ಆರಂಭವಾಗಲಿರುವ ವಿಧಾನಸಭೆಯ ಅಧಿವೇಶನದಲ್ಲಿ ಅವರು ಪಾಲ್ಗೊಳ್ಳಲು ಬರುತ್ತಾರೆ. ಆಗ ಈ ಪ್ರಶ್ನೆಯನ್ನು ಅವರಿಗೇ ಕೇಳಿ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !