ಸೋರಿಕೆ ತಡೆ: 3 ವಲಯಗಳಲ್ಲಿ ಕಾಮಗಾರಿ

ಬುಧವಾರ, ಜೂಲೈ 17, 2019
26 °C
ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣವನ್ನು ಮತ್ತಷ್ಟು ಕಡಿಮೆಗೊಳಿಸಲು ಮುಂದಾದ ಜಲಮಂಡಳಿ

ಸೋರಿಕೆ ತಡೆ: 3 ವಲಯಗಳಲ್ಲಿ ಕಾಮಗಾರಿ

Published:
Updated:
Prajavani

ಬೆಂಗಳೂರು: ಜಲಮಂಡಳಿಯು ಉತ್ತರ, ಕೇಂದ್ರ ಮತ್ತು ಆಗ್ನೇಯ ವಲಯಗಳಲ್ಲಿ ನೀರಿನ ಸೋರಿಕೆ ತಡೆಯುವ ಕಾಮಗಾರಿ ಕೈಗೆತ್ತಿಕೊಂಡಿದೆ.

ಯಲಹಂಕ (ಉತ್ತರ 2), ಸಹಕಾರ ನಗರ (ಉತ್ತರ 3), ಶಿವಾಜಿನಗರ (ಕೇಂದ್ರ) ಮತ್ತು ಇಂದಿರಾನಗರ (ಆಗ್ನೇಯ) ಉಪ ವಿಭಾಗಗಳಲ್ಲಿ ಕಾಮಗಾರಿಗಳು ಈಗಾಗಲೇ ಆರಂಭಗೊಂಡಿವೆ. ₹ 203 ಕೋಟಿ ವೆಚ್ಚದ ಈ ಕಾಮಗಾರಿಗಳ ಗುತ್ತಿಗೆಯನ್ನು ಇಸ್ರೇಲ್‌ನ ತಹಲ್‌ ಕಂಪನಿಗೆ ನೀಡಲಾಗಿದೆ.

‘ಈ ಹಿಂದೆ ನಗರದ ಕೇಂದ್ರ, ಪಶ್ಚಿಮ ಮತ್ತು ದಕ್ಷಿಣ ವಲಯದಲ್ಲಿ ಸೋರಿಕೆ ತಡೆಗೆ ಕ್ರಮ ಕೈಗೊಂಡ ಬಳಿಕ ಸರಾಸರಿ ವರಮಾನ ಪ್ರತಿ ತಿಂಗಳು ₹ 20 ಕೋಟಿ ಹೆಚ್ಚಳ ಆಗಿದೆ. ಯೋಜನೆ ಅನುಷ್ಠಾನಕ್ಕೆ ಮುನ್ನ ₹ 90 ಕೋಟಿ ವರಮಾನ ಬರುತ್ತಿತ್ತು. ಈಗ ತಿಂಗಳಿಗೆ ಸರಾಸರಿ ₹ 110 ಕೋಟಿ ವರಮಾನ ಬರುತ್ತಿದೆ’ ಎಂದು ಜಲಮಂಡಳಿಯ ಪ್ರಧಾನ ಮುಖ್ಯ ಎಂಜಿನಿಯರ್‌ ಕೆಂಪರಾಮಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ನಗರಕ್ಕೆ ಪ್ರತಿನಿತ್ಯ 135 ಕೋಟಿ ಲೀಟರ್‌ ಕಾವೇರಿ ನೀರು ಪೂರೈಕೆಯಾಗುತ್ತಿದೆ. ಅದರಲ್ಲಿ ಶೇ 48ರಷ್ಟು ನೀರು ಲೆಕ್ಕಕ್ಕೆ ಸಿಗುತ್ತಿರಲಿಲ್ಲ. ಅಂದರೆ 65 ಕೋಟಿ ಲೀಟರ್‌ ನೀರಿನಿಂದ ಜಲಮಂಡಳಿಗೆ ಯಾವುದೇ ವರಮಾನ ಬರುತ್ತಿರಲಿಲ್ಲ. ನೀರಿನ ಸೋರಿಕೆ ತಡೆಗಟ್ಟಲು ದಕ್ಷಿಣ ವಿಭಾಗದಲ್ಲಿ 2012ರಲ್ಲಿ ₹153 ಕೋಟಿ ವೆಚ್ಚದಲ್ಲಿ ಸೋರಿಕೆ ತಡೆ ಯೋಜನೆಗೆ ಚಾಲನೆ ನೀಡಲಾಗಿತ್ತು. ಎಲ್‌ ಆ್ಯಂಡ್‌ ಟಿ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಸೋರಿಕೆ ಪ್ರಮಾಣವನ್ನು ಶೇ 16ಕ್ಕೆ ಇಳಿಸಬೇಕು ಎಂದು ಸೂಚಿಸಲಾಗಿತ್ತು.

2014ರಲ್ಲಿ ಕೇಂದ್ರ ವಿಭಾಗದಲ್ಲಿ ₹160 ಕೋಟಿ, ಪಶ್ಚಿಮ ವಿಭಾಗದಲ್ಲಿ ₹257 ಕೋಟಿ ವೆಚ್ಚದ ಕಾಮಗಾರಿ ಆರಂಭಿಸಲಾಗಿತ್ತು. ನಗರದಲ್ಲಿ ಲೆಕ್ಕಕ್ಕೆ ಸಿಗದ ನೀರಿನ ‍‍ಪ್ರಮಾಣ ಈಗ ಶೇ 36ಕ್ಕೆ ಇಳಿದಿದೆ ಎಂದು ಜಲಮಂಡಳಿಯ ಅಧಿಕಾರಿಗಳು ತಿಳಿಸಿದರು.

ಅಂತರರಾಷ್ಟ್ರೀಯ ಮಾನದಂಡದ ಪ್ರಕಾರ ನೀರು ಪೂರೈಕೆ ಸಂದರ್ಭದಲ್ಲಿ ಶೇ 16ರಷ್ಟು ಸೋರಿಕೆಯಾಗುತ್ತದೆ. ಆದರೆ ನಗರದಲ್ಲಿ ಅದರ ಪ್ರಮಾಣ ಶೇ 20ರಷ್ಟು ಇದೆ. ಉಳಿದದ್ದು ವಾಣಿಜ್ಯ ನಷ್ಟ. ಅನೇಕ ಕಡೆಗಳಿಗೆ ನೀರು ಪುಕ್ಕಟೆಯಾಗಿ ಪೂರೈಕೆಯಾಗುತ್ತಿದೆ. ಇದರಿಂದ ಮಂಡಳಿ ಪ್ರತಿ ತಿಂಗಳು ₹20 ಕೋಟಿ ನಷ್ಟ ಅನುಭವಿಸುತ್ತಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !