ದಶಕದ ಬಳಿಕ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಕೇನ್–ಕೊಹ್ಲಿ ಬಳಗ ಮತ್ತೆ ಮುಖಾಮುಖಿ

ಬುಧವಾರ, ಜೂಲೈ 17, 2019
26 °C
ಭಾರತಕ್ಕೆ ಕಿವೀಸ್; ಆಸ್ಟ್ರೇಲಿಯಾಗೆ ಇಂಗ್ಲೆಂಡ್ ಎದುರಾಳಿ

ದಶಕದ ಬಳಿಕ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಕೇನ್–ಕೊಹ್ಲಿ ಬಳಗ ಮತ್ತೆ ಮುಖಾಮುಖಿ

Published:
Updated:

ಲಂಡನ್: ಹನ್ನೊಂದು ವರ್ಷಗಳ ಹಿಂದಿನ ಮಾತು. ವಿರಾಟ್ ಕೊಹ್ಲಿ ಮತ್ತು ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಅವರಿಬ್ಬರೂ ಮುಖಾಮುಖಿಯಾಗಿದ್ದರು.

ಕ್ವಾಲಾಲಂಪುರದಲ್ಲಿ ನಡೆದಿದ್ದ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಆಡಿದ್ದ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳಿಗೆ ನಾಯಕರಾಗಿದ್ದರು. ಇದೀಗ ಮತ್ತೊಮ್ಮೆ ಇಬ್ಬರೂ ಎದುರಾಳಿಗಳಾಗಲಿದ್ದಾರೆ. ಇದೇ 9ರಂದು ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಉಭಯ ತಂಡಗಳ ಜಿದ್ದಾಜಿದ್ದಿ ನಡೆಯಲಿದೆ.

ರೌಂಡ್‌ ರಾಬಿನ್ ಲೀಗ್‌ನ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ವಿರಾಟ್ ಕೊಹ್ಲಿ ಬಳಗವು, ನಾಲ್ಕನೇ ಸ್ಥಾನದಲ್ಲಿರುವ ಕಿವೀಸ್ ತಂಡವನ್ನು ಎದುರಿಸಲಿದೆ. ಶನಿವಾರ ರಾತ್ರಿ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ದಕ್ಷಿಣ ಆಫ್ರಿಕಾ ತಂಡವು ಹತ್ತು ರನ್‌ಗಳಿಂದ ಸೋಲಿಸಿದ್ದರಿಂದ ಈ ಅವಕಾಶ ಭಾರತಕ್ಕೆ ಲಭಿಸಿದೆ. ಒಂದೊಮ್ಮೆ ಆಸ್ಟ್ರೇಲಿಯಾ ಗೆದ್ದಿದ್ದರೆ ಅದು ನ್ಯೂಜಿಲೆಂಡ್ ಎದುರು ಆಡಬೇಕಿತ್ತು. ಆಗ ಭಾರತವು ಆತಿಥೇಯ ಇಂಗ್ಲೆಂಡ್‌ ಎದುರು ಕಣಕ್ಕಿಳಿಯಬೇಕಿತ್ತು.

ಇಂಗ್ಲೆಂಡ್ ತಂಡವು ಭಾರತವನ್ನು ಲೀಗ್ ಹಂತದಲ್ಲಿ ಸೋಲಿಸಿತ್ತು. ಇದೀಗ ಆತಿಥೇಯ ತಂಡವು ಅದ್ಭುತ ಫಾರ್ಮ್‌ನಲ್ಲಿದೆ.  ಆದ್ದರಿಂದ ಸೆಮಿಯಲ್ಲಿ ಭಾರತಕ್ಕೆ ಕಠಿಣವಾದ ಸವಾಲೊಡ್ಡುವ ಸಂಭವವಿತ್ತು. ಇದೀಗ ವಿರಾಟ್ ಪಡೆಯು ತುಸು ನಿರುಮ್ಮಳವಾಗಿದೆ. ಏಕೆಂದರೆ, ಲೀಗ್ ಹಂತದಲ್ಲಿ ಕಿವೀಸ್ ಎದುರು ತಂಡವು ಆಡಿಲ್ಲ. ಉಭಯ ತಂಡಗಳ ನಡುವಣ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಆದ್ದರಿಂದ ಈಗ ನಾಲ್ಕರ ಘಟ್ಟವು ಕುತೂಹಲ ಕೆರಳಿಸಿದೆ.

ಟೂರ್ನಿಯ ಆರಂಭದಲ್ಲಿ ತನ್ನ ‘ಆಲ್‌ರೌಂಡ್’ ಆಟದಿಂದ ಗಮನ ಸೆಳೆದಿದ್ದ ನ್ಯೂಜಿಲೆಂಡ್ ತಂಡವು ನಂತರದ ಹಂತದಲ್ಲಿ ತುಸು ಮಂಕಾಗಿತ್ತು. ಸತತ ಐದು ಪಂದ್ಯಗಳನ್ನು ಗೆದ್ದಿದ್ದ ತಂಡವು ನಂತರದ ಮೂರು ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಅದರಿಂದಾಗಿ ತಂಡದ ಆತ್ಮವಿಶ್ವಾಸವು ಕುಸಿದಿದೆ. ಅದನ್ನು ಬಿಟ್ಟರೆ ತಂಡದಲ್ಲಿ ಉತ್ತಮ ಆಟಗಾರರಿಗೆ ಕೊರತೆಯಿಲ್ಲ. ಕೇವಲ ಒಂದು ಪಂದ್ಯದಲ್ಲಿ ಏಳರಲ್ಲಿ ಗೆದ್ದಿರುವ ಭಾರತ ತಂಡವು ಈಗ ಸರ್ವಸನ್ನದ್ಧವಾಗಿದೆ.

ಆರಂಭಿಕ ಹಂತದಲ್ಲಿದ್ದ ಕೆಲವು ಲೋಪದೋಷಗಳನ್ನು ಸರಿಪಡಿಸಿಕೊಂಡಿದೆ. ಶನಿವಾರ ಶ್ರೀಲಂಕಾ ಎದುರಿನ ಪಂದ್ಯದಲ್ಲಿ  ಕೆ.ಎಲ್. ರಾಹುಲ್ ಮತ್ತು ರೋಹಿತ್ ಶರ್ಮಾ ಮೊದಲ ವಿಕೆಟ್ ಜೊತೆಯಾಟದಲ್ಲಿ 189 ರನ್‌ ಗಳಿಸಿದ್ದರು. ವಿರಾಟ್ ಮತ್ತೊಮ್ಮೆ ಬ್ಯಾಟ್ ಬೀಸಿದ್ದರು. ರಿಷಭ್ ಪಂತ್ ಕೂಡ ಮಿಂಚಿದ್ದರು. ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಬಿಟ್ಟರೆ ಉಳಿದವರು ನಿರೀಕ್ಷೆಯಂತೆ ಉತ್ತಮವಾಗಿಯೇ ಆಡಿದ್ದರು. ಆದರಲ್ಲೂ ಜಸ್‌ಪ್ರೀತ್ ಬೂಮ್ರಾ ತಾವು ವಿಶ್ವದ ಅಗ್ರಕ್ರಮಾಂಕದ ಬೌಲರ್‌ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ‘ಡೆತ್ ಓವರ್‌’ಗಳಲ್ಲಿ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸುತ್ತಿದ್ದಾರೆ. ಅವರ ಯಾರ್ಕರ್‌ಗಳು ದಿನಗಳೆದಂತೆ ಮೊನಚಾಗುತ್ತಿವೆ. ಇನ್ನೊಂದೆಡೆ ಮೊಹಮ್ಮದ್ ಶಮಿ ಕೂಡ ಅಮೋಘ ಲಯದಲ್ಲಿದ್ದಾರೆ. ಇದು ತಂಡದ ಆತ್ಮವಿಶ್ವಾಸವನ್ನು ಉತ್ತುಂಗಕ್ಕೆ ಏರಿಸಿರುವುದರಲ್ಲಿ ಸಂಶಯವೇ ಇಲ್ಲ.

2008ರಲ್ಲಿ ಜೂನಿಯರ್ ವಿಶ್ವಕಪ್‌ನಲ್ಲಿ ನಾಲ್ಕರ ಘಟ್ಟದ ಪಂದ್ಯದಲ್ಲಿ ವಿರಾಟ್ ನಾಯಕತ್ವದ ಭಾರತವು ಗೆದ್ದಿತ್ತು. ಆಗ ತಂಡದಲ್ಲಿ ಇದ್ದ ರವೀಂದ್ರ ಜಡೇಜ ಈಗಲೂ ಕೊಹಲ್ಲಿ ಬಳಗದಲ್ಲಿದ್ದಾರೆ. ಆಗ ಕಿವೀಸ್ ತಂಡದಲ್ಲಿ ಕೇನ್ ಜೊತೆಗಿದ್ದ ಮಾರ್ಟಿನ್ ಗಪ್ಟಿಲ್, ಟಿಮ್ ಸೌಥಿ ಮತ್ತು  ಟ್ರೆಂಟ್ ಬೌಲ್ಟ್‌ ಈಗಿನ ತಂಡದಲ್ಲಿದ್ದಾರೆ. ಇದೀಗ ಮತ್ತೊಮ್ಮೆ ಕೊಹ್ಲಿ ಮತ್ತು ಕೇನ್ ಅವರ ನಾಯಕತ್ವದ ಪರೀಕ್ಷೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 6

  Happy
 • 2

  Amused
 • 0

  Sad
 • 2

  Frustrated
 • 1

  Angry

Comments:

0 comments

Write the first review for this !