ಸೋಮವಾರ, ನವೆಂಬರ್ 18, 2019
23 °C
ರಾಷ್ಟ್ರ ಹಾಗೂ ನಾಡ ಧ್ವಜಗಳ ಆರೋಹಣ ನೆರೆವೇರಿಸಿದ ಜಿಲ್ಲಾಧಿಕಾರಿ, ಕನ್ನಡ ನಾಡಿಗೆ ಜಿಲ್ಲೆಯ ಕೊಡುಗೆಗಳ ಸ್ಮರಣೆ

ಚಾಮರಾಜನಗರ: ಜಿಲ್ಲೆಯಾದ್ಯಂತ ಸಂಭ್ರಮದ ಕನ್ನಡದ ಹಬ್ಬ

Published:
Updated:
Prajavani

ಚಾಮರಾಜನಗರ: 64ನೇ ಕನ್ನಡ ರಾಜ್ಯೋತ್ಸವವನ್ನು ಜಿಲ್ಲೆಯಾದ್ಯಂತ ಶುಕ್ರವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಜಿಲ್ಲಾಡಳಿತದ ವತಿಯಿಂದ ಡಾ.ಬಿ.ಆರ್‌.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಧಾನ ಕಾರ್ಯಕ್ರಮ ನಡೆದರೆ, ಶಾಲಾ ಕಾಲೇಜು, ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳ ಕಚೇರಿಗಳಲ್ಲೂ ಕನ್ನಡದ ಹಬ್ಬ ಕಳೆ ಕಟ್ಟಿತ್ತು. 

ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ರಾಷ್ಟ್ರಧ್ವಜ ಹಾಗೂ ನಾಡ ಧ್ವಜಗಳ ಧ್ವಜಾರೋಹಣ ನಡೆಸಿದರು. ನಂತರ ತೆರೆದ ವಾಹನದಲ್ಲಿ ಸಾಗಿ ಗೌರವ ವಂ‌ದನೆ ಸ್ವೀಕರಿಸಿದರು.

ಪಥಸಂಚಲನ: ಪೊಲೀಸ್‌ ಸಿಬ್ಬಂದಿ, ಅರಣ್ಯ ರಕ್ಷಕ, ಗೃಹರಕ್ಷಕ ದಳ, ವಿವಿಧ ಶಾಲೆಗಳ ಸ್ಕೌಟ್ಸ್‌ ಮತ್ತು ಗೈಡ್ಸ್‌ ತಂಡಗಳು ಹಾಗೂ ವಿದ್ಯಾರ್ಥಿಗಳು ನಡೆಸಿದ ಪಥಸಂಚಲನ ಗಮನಸೆಳೆಯಿತು.

ಭಾಷೆಯ ತೊಟ್ಟಿಲು: ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಕನ್ನಡ ಏಕೀಕರಣ ಚಳವಳಿ ನಡೆದು ಬಂದ ಹಾದಿ, ಕನ್ನಡ ನಾಡಿಗೆ ಜಿಲ್ಲೆ ನೀಡಿರುವ ಕೊಡುಗೆಗಳನ್ನು ಸ್ಮರಿಸಿದರು. 

‘ಕನ್ನಡ ಭಾಷೆಯ ವಿಚಾರದಲ್ಲಿ ಜಿಲ್ಲೆಯು ತೊಟ್ಟಿಲು ಇದ್ದಂತೆ. ಪಶ್ಚಿಮದ ಮೂಲೆಹೊಳೆಯಿಂದ ಪೂರ್ವದ ಹೊಗೆನಕಲ್‌ವರೆಗಿನ ಪ್ರದೇಶಗಳಲ್ಲಿ ಕನ್ನಡ ಮಾತನಾಡುವ ಜನ ಸಮೂಹಗಳಿವೆ. ನೆರೆ ರಾಜ್ಯಗಳ ಆಳ್ವಿಕೆಯ ಒತ್ತಡಗಳಿಗೆ ಸಿಲುಕಿಕೊಂಡು ಆನಂತರ ಏಕೀಕರಣದ ಜೊತೆ ರಾಜ್ಯಕ್ಕೆ ಸೇರಿದ ಪ್ರದೇಶಗಳೂ ಸೇರಿದಂತೆ ಜಿಲ್ಲೆಯ ಯಾವುದೇ ಭಾಗದ ಜನರು ಕನ್ನಡವನ್ನು ಬಿಟ್ಟಿಲ್ಲ. ನೆರೆ ಹೊರೆಯ ಭಾಷೆಗಳಿಂದಲೂ ಪ್ರಭಾವಿತರಾಗಿಲ್ಲ’ ಎಂದು ಹೇಳಿದರು. 

ಜಿಲ್ಲೆಯ ಜಾನಪದ ಸಂಪತ್ತನ್ನು ಪ್ರಸ್ತಾಪಿಸಿದ ಅವರು, ‘ಜಗತ್ತಿನ ಜಾನಪದ ಕಾವ್ಯಗಳಲ್ಲೇ ಉನ್ನತ ಸ್ಥಾನ ಗಳಿಸಿರುವ ಮಲೆ ಮಹದೇಶ್ವರ ಕಾವ್ಯ ಕರ್ನಾಟಕಕ್ಕೆ ನಮ್ಮ ಕೊಡುಗೆ. ಮಂಟೇಸ್ವಾಮಿ, ಬಿಳಿಗಿರಿರಂಗ, ಸಿದ್ದಪ್ಪಾಜಿ ಕಾವ್ಯಗಳೂ ಜಿಲ್ಲೆಯ ಕೊಡುಗೆ. ಕಂಸಾಳೆ, ಗೊರವರ ನೃತ್ಯ, ವೀರಭದ್ರ ನೃತ್ಯ, ತಂಬೂರಿ, ನೀಲಗಾರ ಮೇಳ ಮುಂತಾದ ಸಾಂಸ್ಕೃತಿಕ ಪ‍ರಂಪರೆ ನಮಗೆ ಕೀರ್ತಿ ತಂದಿದೆ’ ಎಂದು ಅವರು ಬಣ್ಣಿಸಿದರು. 

‘ವರನಟ ಡಾ.ರಾಜ್‌ಕುಮಾರ್‌, ಜೆ.ಪಿ.ರಾಜರತ್ನಂ ಅವರಂತಹ ಮಹಾನ್‌ ವ್ಯಕ್ತಿಗಳನ್ನು ವಿಶ್ವಕ್ಕೆ ಕೊಡುಗಡೆ ನೀಡಿದ ಜಿಲ್ಲೆ ನಮ್ಮದು’ ಎಂದರು. 

‘ಮಂಟೇಸ್ವಾಮಿ ಪರಂಪರೆಯ ನೀಲಗಾರ ದೊಡ್ಡಗವಿ ಬಸಪ್ಪ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಜಿಲ್ಲೆ ಹೆಮ್ಮೆ ಪಡುವ ವಿಷಯ’ ಎಂದೂ ಅವರು ಹೇಳಿದರು. 

‘ನಮ್ಮ ಭಾಷೆ, ನೆಲ, ಜಲ, ಕಲೆ, ಸಾಹಿತ್ಯ, ಸಂಸ್ಕೃತಿ ನಾಡಿನ ಪ್ರತಿಯೊಬ್ಬರಿಗೂ ಸೇರಿವೆ. ಇವುಗಳನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಎಲ್ಲರಿಗೂ ಇದೆ. ಪರ ಭಾಷೆಯೊಂದಿಗೆ ನಮ್ಮ ಭಾಷೆಯನ್ನು ಪ್ರೀತಿಸುತ್ತಾ ಪೋಷಿಸಿ ಬೆಳೆಸಿದಾಗ ಮಾತ್ರ ಕನ್ನಡ ಹಾಗೂ ಕನ್ನಡಿಗರ ಕೀರ್ತಿ ಪತಾಕೆಗಳು ಮುಗಿಲೆತ್ತರಕ್ಕೆ ಬೆಳೆಯಲು ಸಾಧ್ಯ’ ಎಂದು ಕಾವೇರಿ ಅವರು ಪ್ರತಿಪಾದಿಸಿದರು. 

ಪುಷ್ಪನಮನ: ಕಾರ್ಯಕ್ರಮದಲ್ಲಿ ಗಣ್ಯರು ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. 

ನಗದು ಬಹುಮಾನ: ಕಳೆದ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಕನ್ನಡ ಮಾಧ್ಯಮದ 10 ಮತ್ತು ಇತರೆ ಮಾಧ್ಯಮಗಳ 10 ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ತಲಾ ₹5,000 ನಗದು ಬಹುಮಾನ ವಿತರಿಸಲಾಯಿತು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದೊಡ್ಡಮ್ಮ, ಉಪಾಧ್ಯಕ್ಷ ಜಿ.ಬಸವಣ್ಣ, ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ್‌, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ನಗರಸಭೆಯ ಸದಸ್ಯರು ಇದ್ದರು.

ರಾಜ್ಯೋತ್ಸವದ ಅಂಗವಾಗಿ ಸಂಜೆ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕ್ರೀಡಾಂಗಣದಲ್ಲಿ ಅನುರಣಿಸಿದ ಕನ್ನಡ

ಧ್ವಜಾರೋಹಣದ ನಂತರ ಡಾ.ಬಿ.ಆರ್‌.ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ರಾಜ್ಯೋತ್ಸವಕ್ಕೆ ಮತ್ತಷ್ಟು ಮೆರುಗು ನೀಡಿದವು. 

ಐದು ಶಾಲೆಗಳ ವಿದ್ಯಾರ್ಥಿಗಳು ಕನ್ನಡಕ್ಕೆ ಸಂಬಂಧಿಸಿದ ಚಿತ್ರ ಗೀತೆಗಳಿಗೆ ಹೆಜ್ಜೆ ಹಾಕಿ, ಜನರ ಮನಸೂರೆಗೊಳಿಸಿದರು.

ದೀನಬಂಧು ಶಾಲೆಯ 400 ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯ ರೂಪಕ ರಾಜ್ಯದ ಸಂಸ್ಕೃತಿ, ಕಲೆಗಳನ್ನು ಅನಾವರಣಗೊಳಿಸಿತು. ಕನ್ನಡ ನಾಡು ನುಡಿಗೆ ಸಂಬಂಧಿಸಿದ ಚಲನ ಚಿತ್ರಗಳ ಗೀತೆಗೆ ಹೆಜ್ಜೆ ಹಾಕಿದ ವಿದ್ಯಾರ್ಥಿಗಳು ನಂದಿಧ್ವಜ, ಕಂಸಾಳೆ, ಗೊರವರ ಕುಣಿತ, ಯಕ್ಷಗಾನ, ಕೋಲಾಟ, ಡೊಳ್ಳು ಕುಣಿತ, ಭರತನಾಟ್ಯ ಮುಂತಾದ ಕಲಾ ಪ್ರಕಾರಗಳನ್ನು ಪ್ರದರ್ಶಿಸಿದರು.

ಪ್ರೇಕ್ಷಕರ ಕರತಾಡನಕ್ಕೆ ಸಾಕ್ಷಿಯಾದ ನೃತ್ಯರೂಪಕ ತೀರ್ಪುಗಾರರ ಮೆಚ್ಚುಗೆಗೂ ಪಾತ್ರವಾಗಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮೊದಲ ಬಹುಮಾನಕ್ಕೆ ಭಾಜನವಾಯಿತು. 

ರಾಮಸಮುದ್ರದ ಸೇಂಟ್‌ ಫ್ರಾನ್ಸಿಸ್‌ ಶಾಲೆಯ 300 ವಿದ್ಯಾರ್ಥಿಗಳು ‘ಕನ್ನಡದ ಕುಲತಿಲಕ ಪರಮೇಶ್ವರ’ ಹಾಡಿಗೆ ನೃತ್ಯ ಮಾಡಿದರು. ಎರಡನೇ ಬಹುಮಾನವನ್ನೂ ಪಡೆದರು. 

ಸಂಗೊಳ್ಳಿ ರಾಯಣ್ಣನ ಸಾಹಸಗಾಥೆಯನ್ನು ನೃತ್ಯ ರೂಪಕದ ಮೂಲಕ ಪ್ರದರ್ಶಿಸಿದ ಸೋಮವಾರಪೇಟೆಯ ಎಂಸಿಎಸ್‌ ಪಬ್ಲಿಕ್‌ ಶಾಲೆ ಮೂರನೇ ಸ್ಥಾನ ಗಳಿಸಿತು. 300 ಮಕ್ಕಳು ಇದರಲ್ಲಿ ಭಾಗವಹಿಸಿದ್ದರು.

ಸೇವಾ ಭಾರತಿ ಕನ್ನಡ ಶಾಲೆಯ 250 ವಿದ್ಯಾರ್ಥಿಗಳು ಹಾಗೂ ಸಂತ ಪೌಲರ ಪ್ರೌಢಶಾಲೆಯ 250 ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯಗಳೂ ಗಮನ ಸೆಳೆದವು. 

ಕೃಪೆ ತೋರಿದ ವರುಣ

ವಾರದಿಂದೀಚೆಗೆ ನಗರದಲ್ಲಿ ಮೋಡಕವಿದ ವಾತಾವರಣ ಇದ್ದು, ನಿರಂತರವಾಗಿ ಮಳೆ ಸುರಿಯುತ್ತಿತ್ತು. ಹಾಗಾಗಿ, ಶುಕ್ರವಾರವೂ ಮಳೆ ಬಂದರೆ ಕಾರ್ಯಕ್ರಮಕ್ಕೆ ಅಡ್ಡಿಯಾಗುವ ಆತಂಕ ನಿರ್ಮಾಣವಾಗಿತ್ತು. ಆದರೆ, ಶುಕ್ರವಾರ ಬೆಳಿಗ್ಗೆಯಿಂದಲೇ ಪ್ರಖರ ಬಿಸಿಲು ಇತ್ತು. ಹಾಗಾಗಿ, ಕಾರ್ಯಕ್ರಮ ಸಾಂಗವಾಗಿ ನೆರವೇರಿತು.

ಜಿಲ್ಲಾ ಉಸ್ತುವಾರಿ, ಸಂಸದ ಗೈರು: ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ಬೆಂಗಳೂರಿನಲ್ಲಿ ನಡೆದ ಪ್ರಧಾನ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರಿಂದ ಕಾರ್ಯಕ್ರಮಕ್ಕೆ ಬಂದಿರಲಿಲ್ಲ ಎಂದು ಹೇಳಲಾಗಿದೆ. ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರು ಕಾರ್ಯಕ್ರಮಕ್ಕೆ ಬಂದಿರಲಿಲ್ಲ. 

ಪ್ರತಿಕ್ರಿಯಿಸಿ (+)