ಬೆಣ್ಣೆತೊರಾ ಕರ್ಮಕಾಂಡಕ್ಕೆ ಆಪರೇಷನ್ ಶುರು

7

ಬೆಣ್ಣೆತೊರಾ ಕರ್ಮಕಾಂಡಕ್ಕೆ ಆಪರೇಷನ್ ಶುರು

Published:
Updated:

ಗುಲ್ಬರ್ಗ: ಬೆಣ್ಣೆತೊರಾ ಅಣೆಕಟ್ಟಿನಲ್ಲಿ ಸಂಗ್ರಹವಾದ ನೀರು ಎಡದಂಡೆ ಹಾಗೂ ಬಲದಂಡೆ ಕಾಲುವೆಗಳ ಮೂಲಕ ಹರಿದು ಮತ್ತೆ ಬೆಣ್ಣೆತೊರಾ ನದಿಯನ್ನೇ ಸೇರುವ ವಿಚಿತ್ರ ಪರಿಸ್ಥಿತಿ ಕೃಷ್ಣಾ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಿರೀಶ್ ಮಟ್ಟೆಣ್ಣವರ ಗಮನಕ್ಕೆ ಬಂತು. ಚಿತ್ತಾಪುರ ತಾಲ್ಲೂಕು ತೆಂಗಳಿ ಕ್ರಾಸ್ ಬಳಿ ಮಹತ್ವಾಕಾಂಕ್ಷೆಯ ‘ಆಪರೇಷನ್ ಡ್ರೈ ಕ್ಯಾನಲ್’ ಕಾರ್ಯಾಚರಣೆಗೆ ಚಾಲನೆ ನೀಡಿ, ಬೆಣ್ಣೆತೊರಾ ಯೋಜನಾ ಪ್ರದೇಶದಲ್ಲಿ ಸಂಚಾರ ಕೈಗೊಂಡಾಗ ಈ ಅಂಶ ಬೆಳಕಿಗೆ ಬಂತು.ಐದು ಕೋಟಿ ರೂಪಾಯಿ ಮೂಲ ಅಂದಾಜು ವೆಚ್ಚದ ಯೋಜನೆಗೆ ಈವರೆಗೆ ಖರ್ಚು ಮಾಡಿರುವ ಹಣ346.93 ಕೋಟಿ ರೂಪಾಯಿ. ನೀರಾವರಿ ನಿಗಮದ ದಾಖಲೆಗಳ ಪ್ರಕಾರ ಯೋಜನೆ ಪೂರ್ಣಗೊಂಡು ರೈತರ ಹೊಲಗಳಿಗೆ ನೀರು ಹರಿಯುತ್ತಿದೆ. ಆದರೆ ಮುಖ್ಯ ವಿತರಣಾ ನಾಲೆ ಕಾಮಗಾರಿ ಮಾಡದೇ ಬಿಲ್ ಎತ್ತಿರುವ ‘ಭ್ರಷ್ಟಾಚಾರ’ದ ವಿಶ್ವರೂಪ ದರ್ಶನವಾಯಿತು.ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವುದು, ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುವುದೂ ಸೇರಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಭರವಸೆಯನ್ನು ಕಾಡಾ ಅಧ್ಯಕ್ಷರು ನೀಡಿದರು.ಉದಾಹರಣೆಗೆ ತೆಂಗಳಿ ಕ್ರಾಸ್ ಬಳಿ ನಾಲ್ಕನೇ ಉಪವಿತರಣಾ ನಾಲೆಯ ಕಾಮಗಾರಿಯನ್ನು ಮಲ್ಲಿಕಾರ್ಜುನ ಸಜ್ಜನಶೆಟ್ಟಿ ಎನ್ನುವವರು ಗುತ್ತಿಗೆ ಪಡೆದಿದ್ದಾರೆ. 1.33 ಕೋಟಿ ರೂಪಾಯಿ ಅಂದಾಜು ವೆಚ್ಚ. 497 ಹೆಕ್ಟೇರ್‌ಗೆ ನೀರಾವರಿಯಾಗಬೇಕು. ಗುತ್ತಿಗೆ ಪಡೆದು ಐದು ವರ್ಷವಾದರೂ ಕೆಲಸ ಪೂರ್ಣಗೊಂಡಿಲ್ಲ. ಇಲ್ಲಿನ ರೈತರು ಒಂದು ಹನಿ ನೀರು ಕಂಡಿಲ್ಲ. ಇನ್ನು ಹೊಲಗಾಲುವೆಗಳಂತೂ ದಾಖಲೆಗಳಲ್ಲಷ್ಟೇ ಉಳಿದಿವೆ.ಎಲ್ಲಕ್ಕಿಂತ ಮುಖ್ಯವಾಗಿ ಯೋಜನೆಗೆ ಸಮೀಕ್ಷೆ, ಯೋಜನಾ ವರದಿ ಅಥವಾ ಅಂದಾಜುಪಟ್ಟಿ ತಯಾರಿಸದೇ ಬೇಕಾಬಿಟ್ಟಿಯಾಗಿ ಕಾಮಗಾರಿ ನಿರ್ವಹಿಸಿದ್ದರ ಫಲ ಇಂದು ಕಾಲುವೆಗಳು ನೀರು ಹರಿಯಲು ಯೋಗ್ಯವಾಗಿಲ್ಲ. ಮುಖ್ಯಕಾಲುವೆಯಲ್ಲಿ ಸ್ವಲ್ಪಮಟ್ಟಿಗೆ ನೀರು ಹರಿದರೂ, ವಿತರಣಾ ನಾಲೆ ಮತ್ತು ಹೊಲಗಾಲುವೆಗಳಂತೂ ನೀರು ಕಾಣುವಂತೆಯೇ ಇಲ್ಲ. ಯೋಜನೆ ಆರಂಭವಾಗಿ 39 ವರ್ಷ ಕಳೆದಿದೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಲೋಕಾರ್ಪಣೆಯೂ ಆಗಿದೆ. ಒಟ್ಟು 20234 ಹೆಕ್ಟೇರ್ ಪ್ರದೇಶಕ್ಕೆ ನೀರೂ ಹರಿಯುತ್ತಿದೆ.ಇಲಾಖೆ ಅಧಿಕಾರಿಗಳ ಪ್ರಕಾರ, ಎಡದಂಡೆ ಕಾಲುವೆಯ 18ನೇ ಕಿಲೋಮೀಟರ್‌ವರೆಗೆ ರೈತರ ಹೊಲಗಳಿಗೆ ನೀರು ಹರಿಯುತ್ತದೆ. ಹೇರೂರು, ಶೇಳಗಿ, ಕಲ್ಲುಹಿಪ್ಪರಗ, ಬಣವಿ ಮತ್ತು ಚಿಂಚೋಳಿ ಎಚ್ ಗ್ರಾಮಗಳ ರೈತರು ನೀರು ಪಡೆಯುತ್ತಿದ್ದಾರೆ. ಅಂತೆಯೇ ಬಲದಂಡೆ ಕಾಲುವೆ ವ್ಯಾಪ್ತಿಯ ಹೆಬ್ಬಾಳ, ಕಮಕನೂರ, ತುಂಚಿ, ಜೀವನಮಾಡಗಿ, ಅಶೋಕನಗರ, ಮಲಘಾಣ, ಕಲಗುರ್ತಿ ಗ್ರಾಮಗಳಿಗೆ ನೀರು ಹರಿಯುತ್ತದೆ.ಆದರೆ ಅಧಿಕಾರಿಗಳೇ ಹೇಳುವ ಪ್ರಕಾರ, ಮುಖ್ಯ ಕಾಲುವೆಯ ಐದು ಕಡೆ ನೀರು ಸೋರುತ್ತದೆ. ಜತೆಗೆ ಯೋಜನೆಗೆ ಸಮರ್ಪಕವಾಗಿ ಸರ್ವೆ, ಪ್ಲಾನಿಂಗ್ ಮತ್ತು ನಾಲೆಗಳ ಲೆವೆಲಿಂಗ್ ಆಗಿಲ್ಲ. ಮೂಲಯೋಜನೆಯಲ್ಲೇ ಲೋಪ ಇರುವುದರಿಂದ ಕೆಲವೆಡೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಮೂವತ್ತೊಂಬತ್ತು ವರ್ಷಗಳಲ್ಲಿ ಆಗದ ಕಾಮಗಾರಿ ಈ ವರ್ಷದ ಮಾರ್ಚ್ ಅಂತ್ಯದ ಒಳಗಾಗಿ ಪೂರ್ಣಗೊಳ್ಳುತ್ತದೆ ಎಂಬ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸುತ್ತಾರೆ.ಮುಖ್ಯಕಾಲುವೆ ಕಾಮಗಾರಿ ಪೂರ್ಣವಾಗದೇ ಇದ್ದರೂ ಇಷ್ಟರಲ್ಲೇ ದುರಸ್ತಿಗೆ 9.75 ಕೋಟಿ ರೂಪಾಯಿ ಅಂದಾಜು  ವೆಚ್ಚದ ಯೋಜನೆ ಸಿದ್ಧವಾಗಿರುವ ಅಂಶವೂ ಅಧಿಕಾರಿಗಳಿಂದಲೇ ಬಹಿರಂಗವಾಯಿತು. ಕಾಲುವೆ ನಿರ್ಮಾಣವಾಗಿ ಹಸ್ತಾಂತರವಾಗುವ ವೇಳೆ ಇಲಾಖೆ ಇದನ್ನು ಪರಿಶೀಲನೆ ನಡೆಸಿಲ್ಲವೇ ಎಂಬ ಕಾಡಾ ಅಧ್ಯಕ್ಷರ ಪ್ರಶ್ನೆಗೆ ಅಧಿಕಾರಿಗಳ ಬಳಿ ಉತ್ತರ ಇರಲಿಲ್ಲ.ಕಾಲುವೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಇದುವರೆಗೆ ಪರಿಹಾರಧನವೂ ದೊರಕಿಲ್ಲ ಎಂಬ ಬಗ್ಗೆಯೂ ಹಲವು ಮಂದಿ ರೈತರು ಅಹವಾಲು ಸಲ್ಲಿಸಿದರು. ಮುಖ್ಯಕಾಲುವೆಯಲ್ಲಿ ಬಹಳಷ್ಟು ಕಡೆ ಹದಿನೈದು ವರ್ಷಗಳಿಂದ ಸೋರಿಕೆ ಇರುವುದು ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಸಿದ್ದಣ್ಣ ಜಮಾದಾರ ದೂರಿದರು.“ಮಳೆಗಾಲದಲ್ಲಿ ದುರಸ್ತಿ ಕಾಮಗಾರಿ ಸಾಧ್ಯವಾಗುತ್ತಿಲ್ಲ. ಬೇಸಿಗೆಯಲ್ಲಿ ನೀರು ನಿಲ್ಲಿಸಿದರೆ ರೈತರು ಪ್ರತಿಭಟನೆಗೆ ಇಳಿಯುತ್ತಾರೆ. ಆದ್ದರಿಂದ ದುರಸ್ತಿ ಮಾಡಿಸಲು ಆಗುತ್ತಿಲ್ಲ” ಎಂದು ಅಸಹಾಯತೆ ವ್ಯಕ್ತಪಡಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮಟ್ಟೆಣ್ಣವರ್, ತಕ್ಷಣ ದುರಸ್ತಿ ಮಾಡಿಸಲು ಸೂಚನೆ ನೀಡಿದರು. ನೀರಾವರಿ ನಿಗಮದ ಹಿರಿಯ ಅಧಿಕಾರಿ ರಂಗನಾಥ್, ಗುಣಮಟ್ಟ ನಿಯಂತ್ರಣ ವಿಭಾಗದ ಸಿಬ್ಬಂದಿ ಮುರಳಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪಾಟೀಲ, ಮಹೇಶ ದೇಶಪಾಂಡೆ ಮತ್ತಿತರರು ಜತೆಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry