ಮಂಗಳವಾರ, ಆಗಸ್ಟ್ 20, 2019
25 °C
ಉದ್ಯಮಿ ಸಿದ್ದಾರ್ಥ ಮರಣೋತ್ತರ ಪರೀಕ್ಷೆ

ತನಿಖಾಧಿಕಾರಿಗೆ ಪ್ರಾಥಮಿಕ ವರದಿ ಸಲ್ಲಿಕೆ

Published:
Updated:

ಮಂಗಳೂರು: ಉದ್ಯಮಿ ಸಿದ್ದಾರ್ಥ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯನ್ನು ವೆನ್ಲಾಕ್‌ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯರು ಪ್ರಕರಣದ ತನಿಖಾಧಿಕಾರಿಯಾಗಿರುವ ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಕೋದಂಡರಾಮ್‌ ಅವರಿಗೆ ಸಲ್ಲಿಸಿದ್ದಾರೆ.

ಕೆಫೆ ಕಾಫಿ ಡೇ ಸಂಸ್ಥಾಪಕರಾದ ಸಿದ್ದಾರ್ಥ ಅವರು ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ನೇತ್ರಾವತಿ ಸೇತುವೆಯಿಂದ ಸೋಮವಾರ ಸಂಜೆ ಕಣ್ಮರೆಯಾಗಿದ್ದರು. ಹೊಯ್ಗೆ ಬಜಾರ್‌ ಸಮೀಪದ ಕಡಲ ಕಿನಾರೆಯಲ್ಲಿ ಅವರ ಮೃತದೇಹ ಬುಧವಾರ ಪತ್ತೆಯಾಗಿತ್ತು. ಮಂಗಳೂರು ಉಪ ವಿಭಾಗಾಧಿಕಾರಿ ರವಿಚಂದ್ರ ನಾಯಕ್‌ ಸಮ್ಮುಖದಲ್ಲಿ ವಿಧಿ ವಿಜ್ಞಾನ ವಿಭಾಗದ ಒಬ್ಬ ಪ್ರಾಧ್ಯಾಪಕ ಮತ್ತು ಒಬ್ಬ ಹಿರಿಯ ತಜ್ಞರು ಮರಣೋತ್ತರ ಪರೀಕ್ಷೆ ನಡೆಸಿದ್ದರು.

ಮೃತದೇಹದ ವಿವಿಧ ಭಾಗಗಳಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಅವುಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಸಂದರ್ಭದಲ್ಲಿ ದೇಹ ಇದ್ದ ಸ್ಥಿತಿ ಮತ್ತು ಪರೀಕ್ಷೆಯ ಸಮಯದಲ್ಲಿ ತಜ್ಞರು ಕಂಡ ವಿಷಯಗಳನ್ನು ಆಧರಿಸಿ ಪ್ರಾಥಮಿಕ ವರದಿಯನ್ನು ತನಿಖಾಧಿಕಾರಿಗೆ ಸಲ್ಲಿಸಲಾಗಿದೆ.

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ವೆನ್ಲಾಕ್‌ ಆಸ್ಪತ್ರೆಯ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ, ‘ವೈದ್ಯರು ಮರಣೋತ್ತರ ಪರೀಕ್ಷೆಯ ಸಂದರ್ಭದಲ್ಲಿ ಕಂಡ ಸಂಗತಿಗಳನ್ನು ಆಧರಿಸಿ ಪ್ರಾಥಮಿಕ ವರದಿಯೊಂದನ್ನು ತನಿಖಾಧಿಕಾರಿಗೆ ನೀಡಿದ್ದಾರೆ. ಸಂಗ್ರಹಿಸಿರುವ ಮಾದರಿಗಳ ಪರೀಕ್ಷೆಯ ವರದಿ ಲಭ್ಯವಾದ ಬಳಿಕ ಅಂತಿಮ ವರದಿಯನ್ನು ಸಲ್ಲಿಸಲಾಗುವುದು’ ಎಂದರು.

Post Comments (+)