ಭಾನುವಾರ, ಆಗಸ್ಟ್ 25, 2019
27 °C
ಚಿಕ್ಕಬಳ್ಳಾಪುರದಲ್ಲಿ ಮಾಜಿ ಶಾಸಕ ಡಾ.ಕೆ.ಸುಧಾಕರ್ ವಾಗ್ದಾಳಿ

ಮಾನವಿದ್ದರೆ ರಮೇಶ್‌ ಕುಮಾರ್ ರಾಜೀನಾಮೆ ಕೊಡಲಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ನೀವು ದಲಿತರು, ಅಂಬೇಡ್ಕರ್ ಬಗ್ಗೆ ಮಾತನಾಡುತ್ತೀರಿ? ಆದರೆ, ಏಳು ಬಾರಿ ಗೆದ್ದಿರುವ ಕೆ.ಎಚ್‌.ಮುನಿಯಪ್ಪ ಅವರನ್ನು ನೀವೇ ನೇತೃತ್ವ ವಹಿಸಿಕೊಂಡು ಸೋಲಿಸಿದಿರಿ. ನಿಮಗೆ ಮಾನ ಮರ್ಯಾದೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು’ ಎಂದು ಮಾಜಿ ಶಾಸಕ ಡಾ.ಕೆ.ಸುಧಾಕರ್ ಅವರು ಹಿಂದಿನ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ ಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನೀವು ಬೃಹಸ್ಪತಿ ಎಂದು ತಿಳಿದುಕೊಂಡಿದ್ದೀರಾ? ನಿಮ್ಮ ಮಾತಿಗೆ ಎಲ್ಲರೂ ಮನಸೋತು ಶರಣಾಗುತ್ತಾರೆ ಎಂದು ಅತಿ ಬುದ್ಧಿವಂತರ ರೀತಿ ಮಾತನಾಡುತ್ತಿರಿ. ಕಾಂಗ್ರೆಸ್‌ ಪಕ್ಷಕ್ಕೆ ಮೌಲ್ಯಗಳು ಇದ್ದರೆ ಮೊದಲು ರಮೇಶ್‌ ಕುಮಾರ್, ಶಿವಶಂಕರರೆಡ್ಡಿ ಅವರನ್ನು ವಜಾ ಮಾಡಬೇಕು’ ಎಂದು ಆಗ್ರಹಿಸಿದರು.

‘ಶಿವಶಂಕರರೆಡ್ಡಿ ಅವರು ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಜೆಡಿಎಸ್‌ ಪರವಾಗಿ ಕೆಲಸ ಮಾಡಿದ್ದಾರೆ. ಪಕ್ಕದ ಕ್ಷೇತ್ರದ ಕಾಂಗ್ರೆಸ್‌ ಶಾಸಕನಾದ ನನ್ನನ್ನು ರಾಜಕೀಯವಾಗಿ ಮುಗಿಸುವ ಕೆಲಸ ಮಾಡಿದ್ದಾರೆ. ನೀವು ನನಗೆ ನೈತಿಕತೆ ಹೇಳಿಕೊಡುತ್ತೀರಿ? ಜನ ನೋಡುತ್ತಿದ್ದಾರೆ. ನಾನು ತಂದೆ ಸ್ಥಾನದಲ್ಲಿ ಇಟ್ಟುಕೊಂಡ ಒಬ್ಬರಿಂದಾಗಿ ನನ್ನ ಎಲ್ಲ ನೋವು ತಡೆದುಕೊಂಡಿದ್ದೆ. ಆದರೆ ಅದು ತಡೆಯಲು ಸಾಧ್ಯವಾಗಲಿಲ್ಲ’ ಎಂದು ತಿಳಿಸಿದರು.

‘ವೈಯಕ್ತಿಕವಾಗಿ ನನಗೆ ಎಷ್ಟೇ ನೋವಾದರೂ ತಡೆದುಕೊಳ್ಳುತ್ತಿದ್ದೆ. ಆದರೆ ನನ್ನ ಕ್ಷೇತ್ರಕ್ಕೆ ಅನ್ಯಾಯವಾಗುತ್ತಿದೆ. ಕ್ಷೇತ್ರದಲ್ಲಿ ಕುಡಿಯಲು ಕೆರೆಗಳು, ಕೊಳವೆ ಬಾವಿಗಳಲ್ಲಿ ನೀರಿಲ್ಲ. ಈ ಬಗ್ಗೆ ಸದನದಲ್ಲಿ ಮತ್ತು ವೈಯಕ್ತಿಕವಾಗಿ ಎಷ್ಟು ಬಾರಿ ಹೇಳಿದರೂ ಯಾರಾದರೂ ಗಮನ ಹರಿಸಿದ್ದೀರಾ? 14 ತಿಂಗಳಿಂದ ನೀವು ಏನು ಮಾಡಿದ್ದೀರಿ? ಇವತ್ತು ನೀವು ಬಾಯಿ ಚಪಲಕ್ಕೆ ಮಾತನಾಡುತ್ತಿದ್ದೀರಾ’ ಎಂದು ಖಾರವಾಗಿ ಪ್ರಶ್ನಿಸಿದರು.

Post Comments (+)