ಗುರುವಾರ , ಆಗಸ್ಟ್ 22, 2019
27 °C
ಪೊಲೀಸರ ಆರೋಪ ನಿರಾಕರಿಸಿದ ಕೃಷಿಕನ ಕುಟುಂಬ

ಅಕ್ರಮ ಗೋಸಾಗಣೆ ಆರೋಪ:ರೈತ ಸೇರಿ ಮೂವರ ಬಂಧನ

Published:
Updated:

ಮಂಗಳೂರು: ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ರೈತ ಸೇರಿದಂತೆ ಮೂವರನ್ನು ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಆದರೆ, ಬಂಧಿತ ರೈತನ ಕುಟುಂಬ ಗೋಸಾಗಣೆ ಆರೋಪವನ್ನು ಅಲ್ಲಗಳೆದಿದೆ.

ಹೈನುಗಾರಿಕೆ ಸೇರಿದಂತೆ ಕೃಷಿ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಮೇರ್ಲಪದವು ನಿವಾಸಿ ಜೋಯಲ್‌ ಮರಿಯಂ ಪಿರೇರಾ (30) ಹಾಗೂ ಫರಂಗಿಪೇಟೆ ಅಮ್ಮೆಮ್ಮಾರ್‌ ನಿವಾಸಿಗಳಾದ ನವಾಜ್‌ (25) ಮತ್ತು ರಿಯಾಜ್‌ (26) ಬಂಧಿತರು.

ಇವರನ್ನು ಅಕ್ರಮವಾಗಿ ಗೋಸಾಗಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಎಸ್‌.ಎಚ್‌.ಭಜಂತ್ರಿ ಮತ್ತು ತಂಡ ನಗರದ ವಳಚ್ಚಿಲ್ ರೈಲ್ವೆಗೇಟ್ ಸಮೀಪ ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೋಯಲ್‌ ಅವರನ್ನು ಬಂಧಿಸಿ ಒಂದು ದನವನ್ನು ವಶಪಡಿಸಿಕೊಳ್ಳಲಾಗಿತ್ತು. ಪರಾರಿಯಾಗಿದ್ದ ಇಬ್ಬರನ್ನು ನೀರುಮಾರ್ಗ ಬಳಿ ಬಂಧಿಸಲಾಗಿದೆ. ಆರೋಪಿಗಳು ಇತ್ತೀಚೆಗೆ ಸಾಗಾಟ ಮಾಡಿದ್ದ ಎರಡು ಹಸುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಾರುಕಟ್ಟೆ ಬಳಿ ಬಂಧನ?: ಆದರೆ, ಜೋಯಲ್‌ ಅವರನ್ನು ನೀರುಮಾರ್ಗ ಮಾರುಕಟ್ಟೆ ಬಳಿ ಸೋಮವಾರ ಮಧ್ಯಾಹ್ನ ಬಂಧಿಸಲಾಗಿದೆ. ಪತ್ನಿ ಮತ್ತು ಮಕ್ಕಳೊಂದಿಗೆ ಮಾರುಕಟ್ಟೆಗೆ ಹೋಗಿದ್ದ ಅವರನ್ನು ಪೊಲೀಸರು ಹಲ್ಲೆ ನಡೆಸಿ ಕರೆದೊಯ್ದಿದ್ದಾರೆ ಎಂದು ಜೋಯಲ್‌ ಅವರ ಕುಟುಂಬ ಆರೋಪಿಸಿದೆ.

‘ಜೋಯಲ್‌ ಅವರನ್ನು ಅಪಹರಣ ಮಾಡಲಾಗಿದೆ ಎಂದು ಅವರ ಮಕ್ಕಳು ನನಗೆ ಮಾಹಿತಿ ನೀಡಿದರು. ಅಕ್ಕನನ್ನು ವಿಚಾರಿಸಿದಾಗ ಪೊಲೀಸರು ಕರೆದೊಯ್ದಿರುವ ವಿಷಯ ಗಮನಕ್ಕೆ ಬಂತು. ಜೋಯಲ್‌ ಕುಟುಂಬ ಹೈನುಗಾರಿಕೆ ನಡೆಸುತ್ತಿದೆ. ಸ್ಥಳೀಯ ಶಾಲೆಯೊಂದಕ್ಕೆ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹಾಲು ಪೂರೈಸುತ್ತದೆ’ ಎಂದು ಅವರ ನಾದಿನಿ ಟ್ರೆಸ್ಸೀ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮನೆಯಲ್ಲಿದ್ದ ನಾಲ್ಕು ಎತ್ತುಗಳನ್ನು ಇತ್ತೀಚೆಗೆ ಮಾರಾಟ ಮಾಡಲಾಗಿದೆ. ಇದನ್ನೇ ನೆಪ ಮಾಡಿಕೊಂಡು ವಾರದ ಹಿಂದೆ ಒಂದು ದಿನ ಮಧ್ಯರಾತ್ರಿ 12 ಗಂಟೆಗೆ ಪೊಲೀಸರು ಬಂದು ಮನೆಯ ಬಾಗಿಲು ಬಡಿದಿದ್ದರು. ಗುರುತಿನ ಚೀಟಿ ನೋಡಿದ ಬಳಿಕ ಅಕ್ಕ ಬಾಗಿಲು ತೆರೆದಿದ್ದರು. ಮನೆಯಲ್ಲೇ ದನಗಳ ಹತ್ಯೆ ಮಾಡಿ, ಮಾಂಸ ಮಾಡಲಾಗುತ್ತಿದೆ ಎಂದು ಆರೋಪಿಸಿ ಹುಡುಕಾಡಿದ್ದರು ಎಂದು ಹೇಳಿದರು.

‘ನಾನು ಕೂಡ ಹೈನುಗಾರಿಕೆ ನಡೆಸುತ್ತಿದ್ದೇನೆ. ಎತ್ತುಗಳನ್ನು ಮಾರಾಟ ಮಾಡುವುದು ಅಪರಾಧವೇ ಆದರೆ, ನಾನು ಅವುಗಳನ್ನು ಪೊಲೀಸರಿಗೆ ಒಪ್ಪಿಸುತ್ತೇನೆ’ ಎಂದರು.

Post Comments (+)