ಬುಧವಾರ, ಆಗಸ್ಟ್ 21, 2019
28 °C

ಗೌಸ ಬೇಕಾ ಗೌಸ!

Published:
Updated:
Prajavani

‘ಸಾರ್, ಬಿತ್ತನೆ ಮಾಡಕ್ಕೆ ಮೋಡಗಳೇ ಇಲ್ಲವಂತೆ ಕರ್ನಾಟಕದಲ್ಲಿ! ಯಾಕ್ಸಾರ್?’ ಅಂತ ತುರೇಮಣೆಗೆ ಕೇಳಿದೆ.

‘ನೋಡ್ಲಾ, ಹೋದ ತಿಂಗಳು ಅನರ್ಹ ಮೋಡಗಳೆಲ್ಲಾ ಮುಂಬೈ ಮೇಲೇ ಕವಿಕೊಂಡಿದ್ದೋ. ಅದಕ್ಕೆ ಈಗ ಈಪಾಟಿ ಮಳೆ ಆಯ್ತಾ ಇರೋದು. ಜಾರಿಕೆಹೊಳೆ ಮೋಡ ಬೆಳಗಾಮಲ್ಲಿ ಇರೋದ್ರಿಂದ ಅಲ್ಲಿ ಭಯಂಕರ ಮಳೆ. ಮಾಜಿ ಉನ್ಮತ್ತ ಸಚಿವರು ನೋವಾಗದೆ ಅಂತ ಬ್ಯಾಟು ಬಿಸಾಕವ್ರೆ! ನಾನೂ ವೃದ್ಧಾಶ್ರಮಕ್ಕೆ ಹೋಯ್ತಿನಿ ಅಂತ ಕುಮಾರಣ್ಣ ಕಣ್ಣೀರು ಮಳೆ ಸುರಿಸ್ತಾವರೆ?’ ಅಂದ್ರು.

‘ಮಾಜಿಗಳ ಬುಡಿ ಸಾರ್. ನಮ್ಮ ಬೂಕನಕೆರೆ ಬಾಹುಬಲಿ ಯಡೂರಪ್ಪಾರು ಏಕಾಂಗವೀರನಾಗಿ ನಿಂತುಬುಟ್ಟವರಲ್ಲಾ! ಕುರುಕ್ಷೇತ್ರ ಸಿನಿಮಾ ಥರಾ ವಿಸ್ತರಣೆ ಮುಂದಕ್ಕೆ ಹೋಯ್ತಲೇ ಅದೆ’ ಅಂದೆ.

‘ಇಲ್ಲ ಕಲಾ, ಈ ಬಾಹುಬಲಿ- 4 ಆಷಾಢ ಮುಗೀಲಿ ಅಂತ ಕಾಯ್ತಾ ಇದ್ದರು. ಶ್ರಾವಣ ಬಂತಲ್ಲಾ ಭಾವಿ ಸಚಿವರೆಲ್ಲಾ ಮೂರು ನಾಮ ಇಕ್ಕೊಂಡು, ಶಂಖ, ಜಾಗಟೆ ತಕ್ಕೊಂಡು ರೆಡಿಯಾಗವರೆ. ಆಮೇಲೆ ನಾಮ, ಶಂಖ, ಜಾಗಟೆ ನಮಿಗೆ ಕೊಟ್ಟು ಗೋವಿಂದಾ ಅಂತ ಹೊಂಟೋಯ್ತರೆ’ ಅಂದ್ರು ತುರೇಮಣೆ.

‘ಹಂಗಾದ್ರೆ ಯೋಗ್ಯಮಂತ್ರಿಗಳು ಹೆಂಗಿರಬೇಕು?’ ಅಂತ ಅನುಮಾನದಲ್ಲಿ ಕೇಳಿದೆ.

‘ಅಡೈ ಬಡ್ಡೆತ್ತುದೇ ಯೋಗ್ಯಮಂತ್ರಿ ಅಂತ ವಿರುದ್ಧ ಪದ ಹೇಳ್ತೀಯಲ್ಲೋ! ನಮ್ಮ ನಜೀರ್‍ಸಾಬರಂತೋರ ಜೊತೆಗೆ ಸತ್ಯ, ನ್ಯಾಯ-ನೀತಿ, ಧರ್ಮ ಹೊಂಟೋದೋ. ಈಗ ಇರೋದೆಲ್ಲಾ ಅಸತ್ಯ, ಅಧರ್ಮ, ಅನ್ಯಾಯ, ಅನೀತಿ ಮತ್ತು ಅನರ್ಹ’ ಅಂದ್ರು ತುರೇಮಣೆ.

‘ಯೋಗ್ಯರದೇನೂ ತಾಪತ್ರಯ ಇಲ್ಲ ಸಾರ್! ಆದ್ರೂ ಅಡವಾಗಿರ ಖಾತೆ ಕೊಡ್ಲಿಲ್ಲ ಅಂತ ಮುನಿಸಿಕಂಡು ಕೋಪಗೃಹಕ್ಕೆ ಹೋಗೋರಿಗೆ, ಅನರ್ಹರಿಗೆ, ಕುರ್ಚಿ ಮೇಲೆ ಮೊದಲೇ ಟವಲ್ ಹಾಕಿರೋರಿಗೆ ಏನು ಮಾಡದು?’ ಅಂತ ಕೇಳಿದೆ.

‘ಮುನಿಸ್ಕೊಂಡೋರಿಗೆ ಚೂರಿ ಕಟ್ಟಪ್ಪನ ಖಾತೆ, ಪರಿಶ್ರಮವಿಲ್ಲದೆ ಪದವಿ ಸಂಪಾದನೆ ಮಾಡೋರಿಗೆ, ಅನರ್ಹರಿಗೆ, ಸಚಿವ ಸ್ಥಾನ ಖರೀದಿ ಮಾಡೋರಿಗೆ ಗೌಸ ಅಂದ್ರೆ ಗೌರವ ಸಚಿವ ಅಂತ ಪದವಿ ಕೊಟ್ಟರಾಯಿತು!’ ಅಂದ್ರಲ್ಲ ತುರೇಮಣೆ.

Post Comments (+)