ಸೋಮವಾರ, ಆಗಸ್ಟ್ 19, 2019
28 °C

ಮದ್ಯದ ಅಮಲಿನಲ್ಲಿ ಸ್ನೇಹಿತನನ್ನೇ ಕೊಂದು ಪರಾರಿ: ಇಬ್ಬರಿಗೆ 7 ವರ್ಷ ಜೈಲು ಶಿಕ್ಷೆ

Published:
Updated:

ಮಂಗಳೂರು: 2014ರ ಏಪ್ರಿಲ್‌ 2ರಂದು ನಗರದ ಉಜ್ಜೋಡಿಯಲ್ಲಿ ಮದ್ಯದ ಅಮಲಿನಲ್ಲಿ ಸ್ನೇಜಿತನನ್ನೇ ಕೊಂದು ಪರಾರಿಯಾಗಿದ್ದ ಕೇರಳದ ಕಾಸರಗೋಡು ಜಿಲ್ಲೆಯ ಇಬ್ಬರಿಗೆ ಏಳು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ತಲಾ ₹ 25,000 ದಂಡ ವಿಧಿಸಿ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಮಂಗಳವಾರ ಆದೇಶ ಹೊರಡಿಸಿದೆ.

ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬ ಸಮೀಪದ ಮಯಿಲ್ಲ ನಿವಾಸಿಗಳಾದ ಜೀವನ್‌ (37) ಮತ್ತು ದಿಲೇಶ್‌ (35) ಶಿಕ್ಷೆಗೊಳಗಾದ ಆರೋಪಿಗಳು. ಸ್ನೇಹಿತ ಕೆ.ಸಿ.ಸಜೇಶ್‌ (33) ಎಂಬಾತನನ್ನು ಆರೋಪಿಗಳು ಹತ್ಯೆ ಮಾಡಿದ್ದರು. ಇದನ್ನು ಕೊಲೆಯಲ್ಲದ ಮಾನವ ಹತ್ಯೆ ಎಂದು ತೀರ್ಮಾನಿಸಿರುವ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ.

2014ರ ಏ.1ರಂದು ಕೇರಳದಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿತ್ತು. ಆ ದಿನ ಮೂವರೂ ಸ್ನೇಹಿತರು ರಕ್ತದಾನದ ನೆಪ ಹೇಳಿ ಕಾರಿನಲ್ಲಿ ಮಂಗಳೂರಿಗೆ ಬಂದಿದ್ದರು. ನಗರದ ಬಾರ್‌ಗಳಲ್ಲಿ ಮದ್ಯ ಸೇವಿಸಿದ ಬಳಿಕ ಲಾಡ್ಜ್‌ ಒಂದರಲ್ಲಿ ಬಾಡಿಗೆಗೆ ಕೊಠಡಿ ಪಡೆದು ಉಳಿದುಕೊಂಡಿದ್ದರು.

ಏ.2ರಂದು ಹಣವನ್ನು ಪಣಕ್ಕಿಟ್ಟು ಇಸ್ಪೀಟ್‌ ಆಡುತ್ತಿದ್ದರು. ಸಜೇಶ್‌ ಬಳಿ ಹಣ ಖಾಲಿಯಾಗಿತ್ತು. ಹಿಂದೆ ಆತ ತನ್ನ ಚಿಕ್ಕಮ್ಮನ ಬಳಿಯಿಂದ ಜೀವನ್‌ಗೆ ₹ 30,000 ಸಾಲ ಕೊಡಿಸಿದ್ದ. ಆ ಹಣ ಹಿಂದಿರುಗಿಸುವಂತೆ ಕೇಳಿದ್ದ. ಇದರಿಂದ ಇಬ್ಬರ ನಡುವೆ ಜಗಳ ಆರಂಭವಾಗಿತ್ತು. ಕೊಠಡಿ ಖಾಲಿ ಮಾಡುವಂತೆ ಲಾಡ್ಜ್‌ ಸಿಬ್ಬಂದಿ ಸೂಚಿಸಿದ್ದರು.

 ರಾತ್ರಿ 7.30ಕ್ಕೆ ಕೊಠಡಿ ಖಾಲಿ ಮಾಡಿದ್ದ ಮೂವರೂ, ಬಾರ್‌ವೊಂದಕ್ಕೆ ತೆರಳಿ ಮದ್ಯ ಸೇವಿಸಿದ್ದರು. ಬಳಿಕ ಉಜ್ಜೋಡಿ ಪೆಟ್ರೋಲ್‌ ಬಂಕ್‌ ಬಳಿ ಸಜೇಶ್‌ನನ್ನು ಕರೆದೊಯ್ದ ಅಪರಾಧಿಗಳು, ಇಂಟರ್‌ಲಾಕ್‌ನಿಂದ ತಲೆಗೆ ಹೊಡೆದು ಆತನನ್ನು ಕೊಲೆ ಮಾಡಿದ್ದರು. ಮೃತ ದೇಹವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು.

ಮರುದಿನ ಪೆಟ್ರೋಲ್‌ ಬಂಕ್‌ ಸಿಬ್ಬಂದಿ ಕೆಲಸಕ್ಕೆ ಬಂದಾಗ ಸಜೇಶ್‌ ಶವ ಪತ್ತೆಯಾಗಿತ್ತು. ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆದಾಗ, ಮೃತನ ಜೇಬಿನಲ್ಲಿ ಗುರುತಿನ ಚೀಟಿ ಸಿಕ್ಕಿತ್ತು. ಬಳಿಕ ಆತನ ಕುಟುಂಬದವರನ್ನು ಸಂಪರ್ಕಿಸಿ, ಮಾಹಿತಿ ನೀಡಲಾಗಿತ್ತು. ಮೃತನ ಸಹೋದರಿ ನೀಡಿದ್ದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು, ಏ.14ರಂದು ಇಬ್ಬರನ್ನು ಬಂಧಿಸಿದ್ದರು.

41 ದಾಖಲೆ ಪರಿಶೀಲನೆ: ಗ್ರಾಮಾಂತರ ಠಾಣೆಯ ಆಗಿನ ಇನ್‌ಸ್ಪೆಕ್ಟರ್‌ ಹರೀಶ್‌ಕುಮಾರ್‌ ಅರ್ಧ ಭಾಗ ತನಿಖೆ ನಡೆಸಿದ್ದರು. ನಂತರ ಬಂದ ಪ್ರಮೋದ್‌ಕುಮಾರ್‌ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಾಸಿಕ್ಯೂಷನ್‌ ಪರವಾಗಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಜುಡಿತ್‌ ಒ.ಎಂ. ಕ್ರಾಸ್ತಾ ವಾದಿಸಿದ್ದರು.

29 ಮಂದಿ ಸಾಕ್ಷಿಗಳ ವಿಚಾರಣೆ ನಡೆಸಿದ ನ್ಯಾಯಾಲಯ, 41 ದಾಖಲೆಗಳನ್ನು ಪರಿಶೀಲನೆ ನಡೆಸಿತ್ತು. ಮಂಗಳವಾರ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶೆ ಸಯೀದುನ್ನೀಸಾ, ಜೀವನ್‌ ಮತ್ತು ದಿಲೇಶ್‌ ಅಪರಾಧಿಗಳು ಎಂದು ಸಾರಿದರು. ಇಬ್ಬರಿಗೂ 7 ವರ್ಷ ಕಠಿಣ ಜೈಲು ಮತ್ತು ತಲಾ ₹ 25,000 ದಂಡ ವಿಧಿಸಿದರು. ದಂಡ ಪಾವತಿಗೆ ತಪ್ಪಿದಲ್ಲಿ ಹೆಚ್ಚುವರಿಯಾಗಿ ತಲಾ ಒಂದು ವರ್ಷ ಜೈಲು ಶಿಕ್ಷೆ ವಿಧಿಸುವಂತೆ ಆದೇಶಿಸಿದರು.

Post Comments (+)