ಗುರುವಾರ , ಆಗಸ್ಟ್ 22, 2019
25 °C

ಟ್ರ್ಯಾಕ್ಟರ್‌ ಡಿಕ್ಕಿ: ಬೈಕ್‌ ಸವಾರ ಸಾವು

Published:
Updated:

ಬೆಂಗಳೂರು: ಟ್ರ್ಯಾಕ್ಟರ್‌ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಮೃತಪಟ್ಟು, ಹಿಂಬದಿ ಸವಾರ ಗಾಯಗೊಂಡ ಘಟನೆ ಇಂದಿರಾನಗರ ಸಿಎಂಎಚ್‌ ರಸ್ತೆಯಲ್ಲಿ ನಡೆದಿದೆ.

ಬಿಎಸ್‌ಎನ್‌ಎಲ್‌ ಗುತ್ತಿಗೆ ನೌಕರ, ರಾಮಮೂರ್ತಿ ನಗರದ ನಿವಾಸಿ ರಾಘವೇಂದ್ರ (33) ಮೃತ ದುರ್ದೈವಿ. ಬೈಕಿನ ಹಿಂಬದಿಯಲ್ಲಿ ಕುಳಿತಿದ್ದ ಸುಬ್ರಮಣಿ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.

ಡಿಕ್ಕಿ ಹೊಡೆದ ರಭಸಕ್ಕೆ ರಾಘವೇಂದ್ರ ಬಲಭಾಗಕ್ಕೆ ಬಿದ್ದಿದ್ದಾರೆ. ಈ ವೇಳೆ ಟ್ರ್ಯಾಕ್ಟರ್‌ನ ಚಕ್ರಗಳು ಅವರು ಮೇಲೆ ಹರಿದು ಹೋಗಿವೆ. ಹೀಗಾಗಿ ಸ್ಥಳದಲ್ಲೇ ಸಾವು ಸಂಭವಿಸಿದೆ. ಎಡಭಾಗಕ್ಕೆ ಬಿದ್ದ ಸುಬ್ರಮಣಿ ಯಾವುದೇ ಗಂಭೀರ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಹಲಸೂರು ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿದೆ. ಟ್ರ್ಯಾಕ್ಟರ್‌ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೈಕ್‌ಗಳ ಮುಖಾಮುಖಿ ಡಿಕ್ಕಿ: ಬೈಕ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಸವಾರರ ಪೈಕಿ ರಾಮದಾಸ್‌ (45) ಎಂಬುವವರು ಮೃತಪಟ್ಟ ಘಟನೆ ವೈಟ್‌ಫೀಲ್ಡ್‌ನಲ್ಲಿ ನಡೆದಿದೆ. ಇನ್ನೊಂದು ಬೈಕ್‌ ಚಲಾಯಿಸುತ್ತಿದ್ದ ಮನೋಹರ್‌ ಎಂಬವರು ಗಾಯಗೊಂಡಿದ್ದಾರೆ.

ರಾಮದಾಸ್‌ ಅವರು ಕನ್ನಮಂಗಲ ಕಡೆಯಿಂದ ಮುಖ್ಯ ರಸ್ತೆಗೆ ಬೈಕ್‌ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಎದುರಿನಿಂದ ಮನೋಹರ್‌ ಚಲಾಯಿಸಿಕೊಂಡು ಬಂದ ಬೈಕ್‌ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ರಾಮದಾಸ್‌ ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ದರೂ, ಚಿಕಿತ್ಸೆ ಫಲಕಾರಿಯಾಗಲಿಲ್ಲ ಎಂದು ವೈಟ್‌ಫೀಲ್ಡ್‌ ಸಂಚಾರ ರಾಣೆ ಪೊಲೀಸರು ತಿಳಿಸಿದರು.

Post Comments (+)