ಬುಧವಾರ, ಆಗಸ್ಟ್ 21, 2019
22 °C
ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್‌ ಅವರ ನಿಧನಕ್ಕೆ ಬಿಜೆಪಿ ಜಿಲ್ಲಾ ಘಟಕ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ

ಶ್ರದ್ಧಾಂಜಲಿ; ಸುಷ್ಮಾ ಅಗಲಿಕೆ ತುಂಬಲಾರದ ನಷ್ಟ

Published:
Updated:
Prajavani

ಚಿಕ್ಕಬಳ್ಳಾಪುರ: ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ನಗರದಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸಿದರು.

ನಗರದ ಬಲಮುರಿ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಘಟಕ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಘಟಕ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್, ‘ಸುಷ್ಮಾ ಸ್ವರಾಜ್ ಅವರದ್ದು ಸಾಧನೆಯ ಬದುಕು. ರಾಷ್ಟ್ರ ರಾಜಕಾರಣಿಲ್ಲಿ ಅವರೊಬ್ಬ ಬದ್ಧತೆ ಹೊಂದಿದ್ದ ನಾಯಕಿಯಾಗಿದ್ದರು. ಅವರ ಸಾವು ಬಿಜೆಪಿಗೆ ತುಂಬಲಾರದ ನಷ್ಟ’ ಎಂದು ಹೇಳಿದರು.

‘ಜಟಿಲ ಸಮಸ್ಯೆಗಳನ್ನು ಸುಲಭವಾಗಿ ಇತ್ಯರ್ಥಪಡಿಸುವ ಚಾಣಾಕ್ಷಮತಿ ಎನಿಸಿದ್ದ ಸುಷ್ಮಾ ಅವರು ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಮಹತ್ವದ ವಿದೇಶಾಂಗ ವ್ಯವಹಾರಗಳ ಖಾತೆ ನಿಭಾಯಿಸಿ ಸೈ ಎನಿಸಿಕೊಂಡಿದ್ದರು. ಇಂದಿರಾ ಗಾಂಧಿ ನಂತರ ಈ ಮಹತ್ವದ ವಿದೇಶಾಂಗ ಖಾತೆಯನ್ನು ಸ್ವತಂತ್ರವಾಗಿ ನಿರ್ವಹಿಸಿದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು’ ಎಂದು ತಿಳಿಸಿದರು.

‘ವಿದೇಶಾಂಗ ಸಚಿವೆಯಾಗಿ ಅವರು ಸಂಕಷ್ಟದಲ್ಲಿರುವವರ ಬಗ್ಗೆ ವಿಶೇಷ ಕಾಳಜಿ ತೋರಿದ ಅವರ ಪರಿ ಅದೆಷ್ಟೋ ಜೀವಗಳನ್ನು ರಕ್ಷಿಸಿದೆ. ಸಚಿವರಾಗಿದ್ದ ಅವಧಿಯಲ್ಲಿ ಇವರು ತುಳಿದ ಕರುಣೆ, -ಕನಿಕರದ ಹಾದಿ ಬಗ್ಗೆ ಅಮೆರಿಕದಲ್ಲಿ ವಿಶೇಷ ಮೆಚ್ಚುಗೆ ವ್ಯಕ್ತವಾಗಿತ್ತು. ಅಲ್ಲಿನ ಪ್ರತಿಷ್ಠಿತ ವಾಲ್‌ಸ್ಟ್ರೀಟ್‌ ಜರ್ನಲ್‌ ಪತ್ರಿಕೆ ಬೆಸ್ಟ್‌ ಲವ್ಡ್‌ ಪಾಲಿಟಿಷಿಯನ್‌ ಎಂದು ಗುರುತಿಸಿ ಗೌರವಿಸಿತ್ತು’ ಎಂದರು.

‘ಜನತಾ ಪಕ್ಷದ ಮೂಲಕ ರಾಜಕೀಯ ಪ್ರವೇಶ ಮಾಡಿದ ಸುಷ್ಮಾ ಅವರು 1977ರಲ್ಲಿ ಹರಿಯಾಣ ವಿಧಾನಸಭೆಗೆ ಆಯ್ಕೆಯಾದರು. ಆಗ ಅವರ ವಯಸ್ಸು ಕೇವಲ 25 ವರ್ಷ. ಗೆದ್ದ ಮೊದಲ ಅವಧಿಯಲ್ಲಿಯೇ ಸಂಪುಟ ಸಚಿವರಾದರು. ಆ ಮೂಲಕ ಹರಿಯಾಣದ ಅತ್ಯಂತ ಕಿರಿಯ ವಯಸ್ಸಿನ ಸಂಪುಟ ಸಚಿವೆ ಎನ್ನುವ ಕೀರ್ತಿಗೆ ಭಾಜನರಾದರು’ ಎಂದು ಹೇಳಿದರು.

‘ಅದ್ಭುತ ಮಾತುಗಾರ್ತಿಯೂ ಆಗಿದ್ದ ಸುಷ್ಮಾ ಸ್ವರಾಜ್‌ ಅವರು ದೆಹಲಿ ರಾಜಕೀಯ ಅಖಾಡದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ತುರ್ತು ಪರಿಸ್ಥಿತಿ ಬಳಿಕ ಬಿಜೆಪಿ ಸೇರಿದ ಅವರು, ಹರಿಯಾಣದಿಂದ ನೆರೆಯ ದೆಹಲಿಗೆ ಧಾವಿಸಿದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ವಕ್ತಾರೆ ಮೊದಲಾದ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದರು. 1998ರಲ್ಲಿ ಅಲ್ಪಾವಧಿಗೆ ದೆಹಲಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು’ ಎಂದು ತಿಳಿಸಿದರು.

ಮಂಡಲ ಅಧ್ಯಕ್ಷ ಅಗಲಗುರ್ಕಿ ಚಂದ್ರಶೇಖರ್‌, ಎಸ್ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ, ನಗರ ಘಟಕದ ಅಧ್ಯಕ್ಷ ಮಂಜುನಾಥ್, ಯುವ ಮೋರ್ಚಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕಿರಣ್, ಜಿಲ್ಲಾ ವಕ್ತಾರ ಲಕ್ಷ್ಮಿಪತಿ, ನಗರ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಮುಖಂಡರಾದ ಪ್ರೇಮಲೀಲಾ ವೆಂಕಟೇಶ್,ಸುಬ್ಬರಾಜು, ಕೊಂಡಪ್ಪ, ಶ್ರೀನಿವಾಸ ರೆಡ್ಡಿ, ರಾಮಣ್ಣ, ಕೃಷ್ಣಮೂರ್ತಿ,ರಾಜೇಶ್, ಮನೋಜ್, ಕೃಷ್ಣಾರೆಡ್ಡಿ, ಚಂದ್ರಶೇಖರ್, ಮಲ್ಲಿಕಾ ಹಾಜರಿದ್ದರು.

Post Comments (+)