ಗುರುವಾರ , ಆಗಸ್ಟ್ 22, 2019
21 °C

ಮಂಡ್ಯ | ಗೌರವ ಡಾಕ್ಟರೇಟ್‌ ವಾಪಸ್‌ ನೀಡಲು ಸಿದ್ಧ: ಜಬೀಉಲ್ಲಾ

Published:
Updated:
Prajavani

ಮಂಡ್ಯ: ಖಾಸಗಿ ವಿಶ್ವವಿದ್ಯಾಲಯ ಪ್ರದಾನ ಮಾಡಿರುವ ಗೌರವ ಡಾಕ್ಟರೇಟ್‌ ಮಾರಾಟದ ವಸ್ತುವಾಗಿದ್ದರೆ ಅದನ್ನು ವಾಪಸ್‌ ನೀಡಲು ಸಿದ್ಧನಿದ್ದೇನೆ. ಅದಕ್ಕೂ ಮೊದಲು ಸರ್ಕಾರ ವಿವಿ ಬಗ್ಗೆ ತನಿಖೆ ನಡೆಸಬೇಕು ಎಂದು ಪದವಿ ಪಡೆದಿರುವ ಬೀಡಿ ಕಾರ್ಮಿಕರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಮೊಹಮ್ಮದ್‌ ಜಮೀಉಲ್ಲಾ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಚೆನ್ನೈನ ಇಂಟರ್‌ನ್ಯಾಷನಲ್‌ ವರ್ಚ್ಯುವಲ್‌ ಯೂನಿವರ್ಸಿಟಿ ಫಾರ್‌ ಪೀಸ್‌ ಅಂಡ್‌ ಎಜುಕೇಶನ್‌ 2018, ನವೆಂಬರ್‌ನಲ್ಲಿ ತನಗೆ ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡಿತು. ಬೀಡಿ ಕಾರ್ಮಿಕರ ಪರವಾಗಿ ಮಾಡಿರುವ ಕೆಲಸಗಳನ್ನು ಗುರುತಿಸಿ ಪದವಿ ನೀಡಿದೆ. ಇದು ತನ್ನ ಹೋರಾಟಕ್ಕೆ ಸಿಕ್ಕ ಗೌರವ ಎಂದು ಭಾವಿಸಿದ್ದೇನೆ.

ಆದರೆ ಈಚೆಗೆ ‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡ ವರದಿಯಿಂದ ಮುಜುಗರ ಉಂಟಾಗಿದೆ. ಪದವಿ ಪಡೆದವರನ್ನು ಜನರು ಅನುಮಾನದಿಂದ ನೋಡುತ್ತಿದ್ದಾರೆ. ಅರ್ಹರಿಗೂ ಪದವಿ ಸಿಕ್ಕಿದ್ದು ಅವರು ನಾಚಿಕೆಪಟ್ಟುಕೊಳ್ಳುವಂತಾಗಿದೆ. ಮಂಡ್ಯ ಜಿಲ್ಲೆಯೊಂದರಲ್ಲೇ 350ಕ್ಕೂ ಹೆಚ್ಚು ಜನ ಪದವಿ ಪಡೆದಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ವಿಶ್ವವಿದ್ಯಾಲಯ ಹಣ ಪಡೆದು ಪದವಿ ನೀಡಿದೆಯೇ, ಅಕ್ರಮವಾಗಿ ಏಜೆಂಟರನ್ನು ನೇಮಕ ಮಾಡಿಕೊಂಡು ಪದವಿ ಪುರಸ್ಕೃತರನ್ನು ಆಯ್ಕೆ ಮಾಡಿದೆಯೇ ಎಂಬ ಬಗ್ಗೆ ಸರ್ಕಾರ  ತನಿಖೆ ನಡೆಸಬೇಕು. ಒಂದೊಮ್ಮೆ ವಿಶ್ವವಿದ್ಯಾಲಯ ಅನರ್ಹರಿಗೆ, ಹಣ ಕೊಟ್ಟವರಿಗೆ ಪದವಿ ನೀಡಿದೆ ಎಂಬುದು ಸಾಬೀತಾದರೆ ಆ ಕ್ಷಣದಲ್ಲೇ ಪದವಿ ವಾಪಸ್‌ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

‘ನಾನು ಪದವಿಗಾಗಿ ಒಂದು ರೂಪಾಯಿ ಹಣವನ್ನೂ ಕೊಟ್ಟಿಲ್ಲ. ನನಗೆ ವಿಶ್ವಾವಿದ್ಯಾಲಯದ ಬಗ್ಗೆ ಏನೂ ಗೊತ್ತಿರಲಿಲ್ಲ. ನನ್ನ ಪರಿಚಯಸ್ಥರು ಚೆನ್ನೈಗೆ ಕರೆದೊಯ್ದು ಕೊಡಿಸಿದರು. ಪ್ರಜಾವಾಣಿ ವರದಿ ನೋಡಿದ ನಂತರ ನಾನು ತಲೆ ಎತ್ತಿ ಓಡಾಡಲು ಸಾಧ್ಯವಾಗುತ್ತಿಲ್ಲ. ಬಡ ಕಾರ್ಮಿಕರ ಬಗ್ಗೆ ನಾನು ನಡೆಸಿರುವ ಕೆಲಸಗಳನ್ನೇ ಜನರು ಅನುಮಾನದಿಂದ ನೋಡುತ್ತಿದ್ದಾರೆ. ವಿವಿ ಬಗ್ಗೆ ಇರುವ ಅನುಮಾನಗಳಿಗೆ ಸರ್ಕಾರ ಉತ್ತರ ಹುಡುಕಬೇಕು’ ಎಂದು ಮೊಹಮ್ಮದ್‌ ಜಬೀವುಲ್ಲಾ ಹೇಳಿದರು.

Post Comments (+)